ಸಂಸತ್ ನಲ್ಲಿ ಪ್ರತಿಪಕ್ಷ ಸಂಸದರ ಮೈಕ್ ಗಳು ಮ್ಯೂಟ್: ಕಾಂಗ್ರೆಸ್ ಆರೋಪ; ತಾಂತ್ರಿಕ ದೋಷವೆಂದ ಸರಕಾರ
ಹೊಸದಿಲ್ಲಿ, ಮಾ. 17: ಸರಕಾರದ ವಿರುದ್ಧದ ಧ್ವನಿಯನ್ನು ದಮನಿಸುವುದಕ್ಕಾಗಿ ಸಂಸತ್ನಲ್ಲಿ ಪ್ರತಿಪಕ್ಷ ನಾಯಕರ ಮೈಕ್ರೋಫೋನ್ ಗಳನ್ನು ಮೌನಗೊಳಿಸಲಾಗುತ್ತಿದೆ ಎಂದು ಕಾಂಗ್ರೆಸ್ ಪಕ್ಷ ಆರೋಪಿಸಿದೆ. ಆದರೆ, ಅದು ‘‘ತಾಂತ್ರಿಕ ದೋಷ’’ ಎಂಬುದಾಗಿ ಆಡಳಿತಾರೂಢ ಬಿಜೆಪಿ ಹೇಳಿದೆ.
ಇದಕ್ಕೆ ಸಂಬಂಧಿಸಿದ ವೀಡಿಯೊ ತುಣುಕೊಂದನ್ನು ಕಾಂಗ್ರೆಸ್ ಟ್ವಿಟರ್ ನಲ್ಲಿ ಹಂಚಿಕೊಂಡಿದೆ. ಸಂಸತ್ ನಲ್ಲಿ ಕಲಾಪಗಳು ಆರಂಭಗೊಂಡ ಸ್ವಲ್ಪ ಹೊತ್ತಿನ ಬಳಿಕ, ಪ್ರತಿಪಕ್ಷಗಳ ಪ್ರತಿಭಟನೆಯ ವೇಳೆ ಲೋಕಸಭೆಯಲ್ಲಿ ವೌನ ಆವರಿಸುವುದನ್ನು ಈ ವೀಡಿಯೊ ತುಣುಕು ತೋರಿಸುತ್ತದೆ.
ಲೋಕಸಭಾ ಸ್ಪೀಕರ್ ಓಮ್ ಬಿರ್ಲಾರ ಕುರ್ಚಿಯ ಸಮೀಪ ಪ್ರತಿಪಕ್ಷ ಸಂಸದರು ಪ್ರತಿಭಟನೆ ನಡೆಸುವುದನ್ನು ಹಾಗೂ ಆಡಳಿತಾರೂಢ ಪಕ್ಷದ ಬಹುತೇಕ ಎಲ್ಲ ಸದಸ್ಯರು ಎದ್ದು ನಿಂತಿರುವುದನ್ನು ವೀಡಿಯೊ ತೋರಿಸುತ್ತದೆ. ಆಗ ಸುಮಾರು 20 ನಿಮಿಷಗಳ ಕಾಲ ಧ್ವನಿಯೇ ಕೇಳುವುದಿಲ್ಲ. ಸ್ಪೀಕರ್ ಮಾತನಾಡಿದಾಗಷ್ಟೇ ಧ್ವನಿ ಮರಳುತ್ತದೆ. ಸ್ಪೀಕರ್ ಮೊದಲು, ಬೊಬ್ಬೆ ಹೊಡೆಯುವುದನ್ನು ನಿಲ್ಲಿಸುವಂತೆ ಸಂಸದರನ್ನು ಒತ್ತಾಯಿಸುತ್ತಾರೆ ಮತ್ತು ಬಳಿಕ, ಸದನವನ್ನು ದಿನದ ಮಟ್ಟಿಗೆ ಮುಂದೂಡುತ್ತಾರೆ.
ಧ್ವನಿಯನ್ನು ಉದ್ದೇಶಪೂರ್ವಕವಾಗಿ ಹತ್ತಿಕ್ಕಲಾಗಿದೆ ಎನ್ನುವುದನ್ನು ಸರಕಾರ ನಿರಾಕರಿಸಿದೆ. ‘‘ಅದು ತಾಂತ್ರಿಕ ದೋಷ, ಉದ್ದೇಶಪೂರ್ವಕವಾಗಿ ಮಾಡಿದ್ದಲ್ಲ’’ ಎಂದು ಮೂಲಗಳು ತಿಳಿಸಿವೆ. ‘‘ಮೋದಿಯವರ ಸ್ನೇಹಿತನಿಗಾಗಿ ಲೋಕಸಭೆಯ ಧ್ವನಿಯನ್ನೇ ಹತ್ತಿಕ್ಕಲಾಗಿದೆ’’
‘‘ಮೊದಲು, ಮೈಕ್ಗಳನ್ನು ಮಾತ್ರ ಬಂದ್ ಮಾಡಲಾಗುತ್ತಿತ್ತು. ಇದು ಸದನದ ಕಲಾಪಗಳನ್ನೇ ವೌನಗೊಳಿಸಲಾಗಿದೆ. ಮೋದಿಯವರ ಸ್ನೇಹಿತನಿಗಾಗಿ ಲೋಕಸಭೆಯ ಧ್ವನಿಯನ್ನೇ ಹತ್ತಿಕ್ಕಲಾಗಿದೆ’’ ಎಂಬುದಾಗಿ ಕಾಂಗ್ರೆಸ್ ಟ್ವೀಟ್ ಮಾಡಿದೆ.
ಅದಾನಿ ಗುಂಪಿನ ವಿರುದ್ಧ ಹಿಂಡನ್ಬರ್ಗ್ ರಿಸರ್ಚ್ ವರದಿಯು ಮಾಡಿರುವ ಆರೋಪಗಳ ವಿಚಾರಣೆಯನ್ನು ಜಂಟಿ ಸಂಸದೀಯ ಸಮಿತಿ (ಜೆಪಿಸಿ)ಗೆ ವಹಿಸಬೇಕೆಂಬ ಪ್ರತಿಪಕ್ಷಗಳ ಬೇಡಿಕೆಯನ್ನು ಹತ್ತಿಕ್ಕುವುದಕ್ಕಾಗಿ ಅವರ ಮೈಕ್ಗಳನ್ನು ಮೌನಗೊಳಿಸಲಾಗುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಅದೇ ವೇಳೆ, ಸಂಸತ್ನಲ್ಲಿ ಮಾತನಾಡಲು ರಾಹುಲ್ ಗಾಂಧಿಗೆ ಅವಕಾಶ ನೀಡದಿರಲು ಬಿಜೆಪಿ ನಿರ್ಧರಿಸಿದೆ ಎಂಬುದಾಗಿಯೂ ಕಾಂಗ್ರೆಸ್ ಆರೋಪಿಸಿದೆ.