ರಾಹುಲ್ ವಿರುದ್ಧ ಶಿಸ್ತುಕ್ರಮಕ್ಕೆ ಆಗ್ರಹಿಸಿದ್ದ ಬಿಜೆಪಿ ಸಂಸದ ನಿಶಿಕಾಂತ್ ರ ‘ಎಂಬಿಎ ಪದವಿ’ ಪ್ರಶ್ನಿಸಿದ ಮೊಯಿತ್ರಾ
ಹೊಸದಿಲ್ಲಿ,ಮಾ.17: ವಿದೇಶದಲ್ಲಿ ರಾಹುಲ್ ಗಾಂಧಿಯವರ ‘ನಿಂದನಾತ್ಮಕ’ ಹೇಳಿಕೆಗಳ ಬಗ್ಗೆ ತನಿಖೆ ನಡೆಸಲು ವಿಶೇಷ ಸಂಸದೀಯ ಸಮಿತಿಯೊಂದನ್ನು ರಚಿಸಬೇಕು ಹಾಗೂ ಅವರನ್ನು ಸದನದಿಂದ ಉಚ್ಚಾಟಿಸಬೇಕೆಂದು ಎರಡು ದಿನಗಳ ಹಿಂದೆ ಆಗ್ರಹಿಸಿದ್ದ ಬಿಜೆಪಿ ಸಂಸದ ನಿಶಿಕಾಂತ್ ದುಬೆ ಅವರ ಶೈಕ್ಷಣಿಕ ಅರ್ಹತೆಯನ್ನು ಪ್ರಶ್ನಿಸಿ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಶುಕ್ರವಾರ ಸರಣಿ ಟ್ವೀಟ್ ಮಾಡಿದ್ದಾರೆ.
‘‘ನಿಶಿಕಾಂತ್ ದುಬೆ ಅವರು 2009 ಹಾಗೂ 2014ರಲ್ಲಿ ಲೋಕಸಭೆಗೆ ಸಲ್ಲಿಸಿದ ಅಫಿಡವಿಟ್ ನಲ್ಲಿ ತಾನು ದಿಲ್ಲಿ ವಿಶ್ವವಿದ್ಯಾನಿಲಯದಿಂದ ಅರೆಕಾಲಿಕ ಎಂಬಿಎ ಅಧ್ಯಯನ ಮಾಡಿರುವುದಾಗಿ ಹೇಳಿಕೊಂಡಿದ್ದಾರೆ .ಆದರೆ ನಿಶಿಕಾಂತ್ ದುಬೆ ಅವರು ಅಫಿಡವಿಟ್ನಲ್ಲಿ ಹೇಳಿಕೊಂಡಿರುವ ಹಾಗೆ 1993ನೇ ಸಾಲಿನಲ್ಲಿ ದಿಲ್ಲಿ ವಿವಿಯಲ್ಲಿ ಗೌರವಾನ್ವಿತ ಲೋಕಸಭಾ ಸದಸ್ಯರ ಹೆಸರಿನ ಯಾವುದೇ ಅಭ್ಯರ್ಥಿಯು ಎಂಬಿಎ ಪದವಿ ಉತ್ತೀರ್ಣರಾಗಿಲ್ಲವೆಂದು ಮಹುವಾ ಮೊಯಿತ್ರಾ ಇನ್ನೊಂದು ಟ್ವೀಟ್ ನಲ್ಲಿ ಹೇಳಿದ್ದಾರೆ.
ನಿಶಿಕಾಂತ್ ದುಬೆ ಹೆಸರಿನ ಯಾವುದೇ ಅಭ್ಯರ್ಥಿ ಎಂಬಿಎ ಪದವಿ ಉತ್ತೀರ್ಣರಾಗಿರುವುದನ್ನು ದಿಲ್ಲಿ ವಿವಿ ನಿರಾಕರಿಸಿರುವುದಾಗಿ ಮೊಯಿತ್ರಾ ಹೇಳಿದ್ದಾರೆ.
‘‘2019ರ ಲೋಕಸಭಾ ಅಭಿಡವಿಟ್ ನಲ್ಲಿ ಗೌರವಾನ್ವಿತ ಸದಸ್ಯರು ಎಂಬಿಎ ಪದವಿಯ ಯಾವುದೇ ಉಲ್ಲೇಖ ಮಾಡಿಲ್ಲ. ಬದಲಿಗೆ ತಾನು 2018ರಲ್ಲಿ ರಾಜಸ್ಥಾನದ ಪ್ರತಾಪ್ ವಿಶ್ವವಿದ್ಯಾನಿಲಯದಲ್ಲಿ ಮ್ಯಾನೇಜ್ಮೆಂಟ್ ನಲ್ಲಿ ಪಿಚ್ಡಿ ಪದವಿ ಪಡೆದಿರುವುದಾಗಿ ಹೇಳಿದ್ದರು. ಆದರೆ ಯಾವುದೇ ಸಿಂಧುವಾದ ಸ್ನಾತಕೋತ್ತರ ಪದವಿಯನ್ನು ಹೊಂದದೆ ಯುಜಿಸಿ ಪರಿಭಾವಿತ ವಿವಿಯಲ್ಲಿ ಪಿಎಚ್ಡಿ ಮಾಡಲು ಸಾಧ್ಯವಿಲ್ಲ’’ ಎಂದು ಮೊಯಿತ್ರಾ ಟ್ವೀಟ್ನಲ್ಲಿ ಹೇಳಿದ್ದಾರೆ.