ಪಿಎಂಕೆವಿವೈನಡಿ ತರಬೇತಿ ಪಡೆದವರಲ್ಲಿ ಶೇ.22 ಮಂದಿಗೆ ಮಾತ್ರ ಉದ್ಯೋಗ ಲಭ್ಯ
ನಿರೀಕ್ಷಿತ ಪರಿಣಾಮ ನೀಡದ ಕೇಂದ್ರದ ಪಿಎಂ ಕೌಶಲ್ಯ ವಿಕಾಸ ಯೋಜನೆ
ಹೊಸದಿಲ್ಲಿ,ಮಾ.17: ಉದ್ಯೋಗಾವಕಾಶಗಳ ಲಭ್ಯತೆಗಾಗಿ ಯುವಜನರಲ್ಲಿ ಕೌಶಲ್ಯತೆ ತರಬೇತಿಯನ್ನು ಉತ್ತೇಜಿಸುವ ಮೋದಿ ಸರಕಾರದ ಮಹತ್ವಾಕಾಂಕ್ಷೆಯ ಕುಶಲತಾವಿಕಾಸ ಯೋಜನೆಯು , ನಿರೀಕ್ಷಿಸಿದಷ್ಟು ಸಕಾರಾತ್ಮಕ ಪರಿಣಾಮವನ್ನು ಬೀರಿಲ್ಲ ಎಂದು ಬ್ಯುಸಿನೆಸ್ ಸ್ಟಾಂಡರ್ಡ್ ಪತ್ರಿಕೆಯ ವರದಿ ಮಾಡಿದೆ.
2023ರ ಮಾರ್ಚ್ 14ರವರೆಗೆ ಪ್ರಧಾನಮಂತ್ರಿ ಕುಶಲ್ ವಿಕಾಸ್ ಯೋಜನೆ(ಪಿಎಂಕೆವಿವೈ)ಯಡಿ ಪ್ರಮಾಣಪತ್ರ ಪಡೆದವರ ಪೈಕಿ ಪ್ರತಿ ನಾಲ್ವರಲ್ಲಿ ಒಬ್ಬರಿಗೆ ಅಥವಾ ಶೇ.22.2 ಮಂದಿಗೆ ಮಾತ್ರ ಉದ್ಯೋಗ ದೊರೆತಿದೆ ಎಂದು ವರದಿ ತಿಳಿಸಿದೆ.
ಪ್ರಧಾನಮಂತ್ರಿ ಕುಶಲ್ ವಿಕಾಸ್ ಯೋಜನೆಯು ಈವರೆಗೆ 2015-16, 2016-20 ಹಾಗೂ 2020-22 ಹೀಗೆ ಮೂರು ಹಂತಗಳನ್ನು ಕಂಡಿದೆ. ಈ ಯೋಜನೆಯ ಎರಡನೆ ಹಂತದಲ್ಲಿ ಗರಿಷ್ಠ ಮಂದಿ ಅಂದರೆ 1.98 ಕೋಟಿ ಮಂದಿ ತರಬೇತಿ ಪಡೆದಿದ್ದರು. ಅಲ್ಲದೆ ಇದೇ ಅವಧಿಯಲ್ಲಿ ಈ ಯೋಜನೆಯಡಿ ಶೇ.23.4ರಷ್ಟು ಮಂದಿಗೆ ಉದ್ಯೋಗ ದೊರೆತಿದ್ದು, ಇದು ಈವರೆಗಿನ ಗರಿಷ್ಠ ದಾಖಲೆಯಾಗಿದೆ. ಯೋಜನೆಯ ಮೊದಲ ಹಂತದಲ್ಲಿ 19.86 ಲಕ್ಷ ಮಂದಿ ತರಬೇತಿ ಪಡೆದಿದ್ದು, ಅವರಲ್ಲಿ ಶೇ.18.4ರಷ್ಟು ನೇಮಕಾತಿಯಾಗಿತ್ತು. ಮೂರನೇ ಹಂತದಲ್ಲಿ 4.45 ಲಕ್ಷ ಮಂದಿ ತರಬೇತಿ ಪಡೆದಿದ್ದು, 10.1 ಶೇಕಡ ಮಂದಿಗೆ ಉದ್ಯೋಗ ಲಭಿಸಿತ್ತು.
ಕೇಂದ್ರ ಸರಕಾರವು ಶೀಘ್ರದಲ್ಲೇ ಪಿಎಂಕೆವಿವೈನ ನಾಲ್ಕನೆ ಹಂತಕ್ಕೆ ಚಾಲನೆ ನೀಡಲಿದೆಯೆಂದು ಕೇಂದ್ರ ಕೌಶಲ್ಯಾಭಿವೃದ್ಧಿ ಹಾಗೂ ಉದ್ಯಮಶೀಲತಾ ಸಚಿವ ಧರ್ಮೇಂದ್ರ ಪ್ರಧಾನ್ ತಿಳಿಸಿದ್ದಾರೆ.
ಈ ಯೋಜನೆಯಡಿ ದೇಶದ 36 ರಾಜ್ಯ ಹಾಗೂ ಕೇಂದ್ರಾಡಳಿತಗಳ ಪೈಕಿ ಮಹಾರಾಷ್ಟ್ರ, ಲಕ್ಷದ್ವೀಪ ಹಾಗೂ ಅಂಡಮಾನ್ ಮತ್ತು ನಿಕೋಬಾರ್ ನಲ್ಲಿ ಶೇ.10ಕ್ಕಿಂತಲೂ ಕಡಿಮೆ ಸಂಖ್ಯೆಯ ಅಭ್ಯರ್ಥಿಗಳಿಗೆ ಉದ್ಯೋಗ ಲಭಿಸಿದೆ ಎಂದು ಬ್ಯುಸಿನೆಸ್ ಸ್ಟಾಂಡರ್ಡ್ ವರದಿ ಮಾಡಿದೆ.
ಈ ಯೋಜನೆಯಡಿ ಗರಿಷ್ಠ ನೇಮಕಾತಿ ನಡೆದ ರಾಜ್ಯಗಳು ಹಾಗೂ ಕೇಂದ್ರಾಡಳಿ ಪ್ರದೇಶಗಳ ಪಟ್ಟಿಯಲ್ಲಿ ಲಡಾಕ್ (57.65), ಮಿಝೋರಾಂ (41.16 ಶೇ.), ಪಂಜಾಬ್ (39.26 ಶೇ.) ಹಾಗೂ ಪುದುಚೇರಿ (34.09 ಶೇ.)’’ ಒಳಗೊಂಡಿವೆ ಎಂದು ಪತ್ರಿಕೆ ತಿಳಿಸಿದೆ.
ಕೌಶಲ್ಯ ತರಬೇತಿಯನ್ನು ಪಡೆಯಲು ಯುವಜನತೆಯನ್ನು ಪ್ರೇರೇಪಿಸುವ ಉದ್ದೇಶದೊಂದಿಗೆಪಿಎಂಕೆವಿವೈ ಯೋಜನೆಯನ್ನು ಕೇಂದ್ರ ಸರಕಾರದ ಕೌಶಲ್ಯಾಭಿವೃದ್ಧಿ ಹಾಗೂ ಉದ್ಯಮಶೀಲತೆ ಸಚಿವಾಲಯವು 2015ರಲ್ಲಿ ಜಾರಿಗೆ ತಂದಿತ್ತು.