ಆಸ್ತಿ-ಬಾಧ್ಯತೆಗಳ ಅಸಮತೋಲನದ ವಿರುದ್ಧ ಬ್ಯಾಂಕ್ ಗಳು ಎಚ್ಚರಿಕೆ ವಹಿಸಬೇಕು: ಆರ್‌ಬಿಐ ಗವರ್ನರ್ ಶಕ್ತಿಕಾಂತ್ ದಾಸ್

Update: 2023-03-17 17:01 GMT

ಮುಂಬೈ, ಮಾ.17: ತಮ್ಮ ಆಸ್ತಿ- ಬಾಧ್ಯತೆ (ಆಸೆಟ್ಸ್ -ಲಯಾಬಿಲಿಟೀಸ್)ಗಳು ಪರಸ್ಪರ ಹೊಂದಾಣಿಕೆಯಾಗದೆ ಇರುವುದರ ವಿರುದ್ಧ ಬ್ಯಾಂಕ್ಗಳು ಜಾಗರೂಕತೆೆ ವಹಿಸಬೇಕು ಇಲ್ಲದಿದ್ದಲ್ಲಿ ಆರ್ಥಿಕ ಸ್ಥಿರತೆಗೆ ಧಕ್ಕೆಯುಂಟಾಗಲಿದೆಯೆಂದು ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಶಕ್ತಿಕಾಂತ್ ದಾಸ್ ಎಚ್ಚರಿಕೆ ನೀಡಿದ್ದಾರೆ. ಸಿಲಿಕಾನ್ ವ್ಯಾಲಿ ಬ್ಯಾಂಕ್ ಮುಚ್ಚುಗಡೆ ಸೇರಿದಂತೆ ಅಮೆರಿಕದ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಪ್ರಸಕ್ತ ಉಂಟಾಗಿರುವ ಬಿಕ್ಕಟ್ಟಿಗೆ ಆಸ್ತಿ- ಬಾಧ್ಯತೆ (ಆಸೆಟ್ಸ್ ಲಯಾಬಿಲಿಟೀಸ್)ಗಳ ಅಸಮತೋಲನ ಕಾರಣವೆಂದು ಅವರು ತಿಳಿಸಿದ್ದಾರೆ.

ಕೇರಳದ ಕೊಚ್ಚಿಯಲ್ಲಿ ಶುಕ್ರವಾರ ಕೆ.ಪಿ. ಹಾರ್ಮಿಸ್ (ಫೆಡರಲ್ ಬ್ಯಾಂಕ್ ಸಂಸ್ಥಾಪಕ)  ಸ್ಮಾರಕ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.

ವಿದೇಶಿ ವಿನಿಮಯ ದರದಲ್ಲಿ ಮುಂದುವರಿದಿರುವ ಚಂಚಲತೆ, ಅದರಲ್ಲೂ ವಿಶೇಷವಾಗಿ ಅಮೆರಿಕ ಡಾಲರ್ನ ವೌಲ್ಯದಲ್ಲಿ ಅತಿಯಾದ ಏರಿಕೆ ಮತ್ತು ಇದರಿಂದಾಗಿ ರಾಷ್ಟ್ರಗಳ ಬಾಹ್ಯ ಸಾಲ ಪಾವತಿ ಸಾಮರ್ಥ್ಯದ ಮೇಲೆ ಉಂಟಾಗಿರುವ ಪರಿಣಾಮಗಳನ್ನು ಪ್ರಸ್ತಾವಿಸಿದ ದಾಸ್ ‘‘ಈ ಬಗ್ಗೆ ನಾವು ಹೆದರಬೇಕಾಗಿಲ್ಲ. ನಮ್ಮ ಬಾಹ್ಯ ಸಾಲವನ್ನು ನಾವು ನಿಭಾಯಿಸಬಹುದಾಗಿದೆ . ಡಾಲರ್ ಮೌಲ್ಯ ಏರಿಕೆಯು ನಮಗೆ ಯಾವುದೇ ಸಮಸ್ಯೆಯನ್ನುಂಟು ಮಾಡಲಾರದು ಎಂದವರು ಹೇಳಿದರು.

ಅಮೆರಿಕದ ಡಾಲರ್ ಮೌಲ್ಯದ ಹೆಚ್ಚಳದಿಂದಾಗಿ ಬಾಹ್ಯ ಸಾಲದ ದರ ಅಧಿಕವಾಗಿರುವ ಅಪಾಯವನ್ನು ಎದುರಿಸುವ ದೇಶಗಳಗೆ ನೆರವಾಗುವಂತೆ ಅವರು ಜಿ20 ರಾಷ್ಟ್ರಗಳನ್ನು ಆಗ್ರಹಿಸಿದರು. ಆರ್ಬಿಐ ಗವರ್ನರ್ ಅವರು ತನ್ನ ಭಾಷಣದಲ್ಲಿ ಜಿ20 ಒಕ್ಕೂಟದಲ್ಲಿ ಭಾರತದ ಅಧ್ಯಕ್ಷತೆಯ ಬಗ್ಗೆ ಹೆಚ್ಚಿನ ಒತ್ತು ನೀಡಿದರು.

ಹವಾಮಾನ ಬದಲಾವಣೆಯಿಂದ ಬಾಧಿತವಾದ ರಾಷ್ಟ್ರಗಳಿಗೆ ಜಿ20 ದೇಶಗಳು ವಿಶೇಷ ಆರ್ಥಿಕ ನೆರವನ್ನು ನೀಡಬೇಕೆಂದು ಅವರು ಈ ಸಂದರ್ಭದಲ್ಲಿ ಆಗ್ರಹಿಸಿದರು. ಖಾಸಗಿ ಡಿಜಿಟಲ್ ಕರೆನ್ಸಿಗಳ ಚಲಾವಣೆಯನ್ನು ತಾನು ವಿರೋಧಿಸುವುದಾಗಿ ಹೇಳಿದ ಶಕ್ತಿಕಾಂತ್ ದಾಸ್, ಹಣಕಾಸು ವ್ಯವಸ್ಥೆಗೆ ಖಾಸಗಿ ಕ್ರಿಪ್ಟೊಕರೆನ್ಸಿಗಳಿಂದ ಅಪಾಯ ಉಂಟು ಮಾಡಬಲ್ಲದೆಂಬುದನ್ನು ಅಮೆರಿಕದ ಪ್ರಸಕ್ತ ಬ್ಯಾಂಕಿಂಗ್ ಬಿಕ್ಕಟ್ಟು ತೋರಿಸಿಕೊಟ್ಟಿದೆ ಎಂದು ಹೇಳಿದರು.

Similar News