ಚುನಾವಣಾ ವರ್ಷ 19 ಹೊಸ ಜಿಲ್ಲೆಗಳನ್ನು ರಚಿಸಿದ ರಾಜಸ್ಥಾನ

Update: 2023-03-18 02:13 GMT

ಜೈಪುರ: ಜನತೆಯ ಆಡಳಿತಾತ್ಮಕ ಅಗತ್ಯತೆಗಳಿಗೆ ಸ್ಪಂದಿಸುವ ಸಲುವಾಗಿ ಹೊಸ 19 ಜಿಲ್ಲೆಗಳನ್ನು ರಚಿಸಿ ರಾಜಸ್ಥಾನ ಸರ್ಕಾರ ಶುಕ್ರವಾರ ಆದೇಶ ಹೊರಡಿಸಿದೆ. ಇದರ ಜತೆಗೆ ವಿಭಾಗೀಯ ಕೇಂದ್ರ ಕಚೇರಿಗಳಿಂದ ದೂರ ಇರುವ ಜನತೆಗೆ ಸ್ಪಂದಿಸುವ ಸಲುವಾಗಿ ಮೂರು ಹೊಸ ವಿಭಾಗೀಯ ಕೇಂದ್ರಗಳನ್ನು ಕೂಡಾ ಘೋಷಿಸಲಾಗಿದೆ. ಚುನಾವಣಾ ವರ್ಷ ಆಡಳಿತ ಪಕ್ಷವಾದ ಕಾಂಗ್ರೆಸ್ ಪಕ್ಷದ ಈ ನಡೆಯನ್ನು ಬಿಜೆಪಿ ಕಟುವಾಗಿ ಟೀಕಿಸಿದ್ದು, ಅಶೋಕ್ ಗೆಹ್ಲೋಟ್ ಸರ್ಕಾರ ತನ್ನ ವೈಯಕ್ತಿಕ ರಾಜಕೀಯ ಆಸೆಗಳನ್ನು ಈಡೇರಿಸಿಕೊಳ್ಳುವ ಸಲುವಾಗಿ ಈ ಕ್ರಮಕ್ಕೆ ಮುಂದಾಗಿದೆ ಎಂದು ಆಪಾದಿಸಿದೆ.

"ಭೌಗೋಳಿಕ ಪ್ರದೇಶದ ಆಧಾರದಲ್ಲಿ ರಾಜಸ್ಥಾನದ ದೇಶದ ಅತಿದೊಡ್ಡ ರಾಜ್ಯ. ಕೆಲ ಪ್ರಕರಣಗಳಲ್ಲಿ ಜಿಲ್ಲಾ ಕೇಂದ್ರಗಳ ಅಂತರ 100 ಕಿಲೋಮೀಟರ್‌ಗಿಂತಲೂ ಅಧೀಕ ಇದೆ. ಜನರಿಗೆ ಜಿಲ್ಲಾಕೇಂದ್ರಗಳನ್ನು ತಲುಪುವುದು ಅಸಾಧ್ಯವಾಗುತ್ತಿದೆ. ಆಡಳಿತ ಯಂತ್ರಕ್ಕೆ ಕೂಡಾ ಪ್ರತಿ ಕುಟುಂಬಗಳನ್ನು ತಲುಪುವುದು ಕಷ್ಟಸಾಧ್ಯ" ಎಂದು ರಾಜಸ್ಥಾನ ವಿಧಾನಸಭೆಯಲ್ಲಿ ಸಿಎಂ ಗೆಹ್ಲೋಟ್ ಹೇಳಿದರು.

ರಾಜಸ್ಥಾನ ಪ್ರಸ್ತುತ 33 ಜಿಲ್ಲೆಗಳನ್ನು ಹೊಂದಿದ್ದು, ಹೊಸದಾಗಿ ಪಾಲಿ, ಸಿಕಾರ್ ಮತ್ತು ಬನ್ಸ್‌ವಾರಾ ಹೀಗೆ ಮೂರು ವಿಭಾಗೀಯ ಕೇಂದ್ರಗಳನ್ನು ಘೋಷಿಸಲಾಗಿದೆ. "ಜಿಲ್ಲೆಗಳನ್ನು ಸಣ್ಣದಾಗಿದ್ದಷ್ಟೂ ಕಾನೂನು ಮತ್ತು ಸುವ್ಯವಸ್ಥೆಯನ್ನು ನಿರ್ವಹಿಸುವುದು ಸುಲಭ ಹಾಗೂ ಉತ್ತಮ ಆಡಳಿತ ನೀಡಬಹುದು" ಎಂದು ಗೆಹ್ಲೋಟ್ ಅಭಿಪ್ರಾಯಪಟ್ಟರು.

ರಾಜಕೀಯ ಆಕಾಂಕ್ಷೆಗಳನ್ನು ಈಡೇರಿಸಿಕೊಳ್ಳುವ ಸಲುವಾಗಿ ಸಿಎಂ ಈ ಕ್ರಮ ಕೈಗೊಂಡಿದ್ದಾರೆ ಎಂದು ಬಿಜೆಪಿ ನಾಯಕಿ ವಸುಂಧರ ರಾಜೇ ಆಪಾದಿಸಿದ್ದಾರೆ.

ಹೊಸ ಜಿಲ್ಲೆಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ಮತ್ತು ಮಾನವ ಸಂಪನ್ಮೂಲಕ್ಕಾಗಿ ಪ್ರತಿ ಜಿಲ್ಲೆಗೆ 2000 ಕೋಟಿ ರೂಪಾಯಿ ಅನುದಾನವನ್ನು ಗೆಹ್ಲೋಟ್ ಘೋಷಿಸಿದ್ದಾರೆ. 15 ವರ್ಷಗಳ ಹಿಂದೆ ವಸುಂಧರ ರಾಜೇ ಸಿಎಂ ಆಗಿದ್ದ ಅವಧಿಯಲ್ಲಿ ಪ್ರತಾಪಗಢ ಜಿಲ್ಲೆಯನ್ನು ರಚಿಸಿದ್ದರು.

Similar News