×
Ad

ಮಹಾರಾಷ್ಟ್ರ: ನಾಸಿಕ್‌ನಿಂದ ಮುಂಬೈಗೆ ನಡೆದ ಪ್ರತಿಭಟನಾ ಮೆರವಣಿಗೆಯಲ್ಲಿ ಮೃತಪಟ್ಟ ರೈತ

Update: 2023-03-18 12:05 IST

ನಾಸಿಕ್: ಉತ್ತರ ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯಿಂದ ಮುಂಬೈಗೆ ಸಾವಿರಾರು ರೈತರು ಹಾಗೂ  ಬುಡಕಟ್ಟು ಜನಾಂಗದವರು ನಡೆಸಿದ ಅತಿ  ದೊಡ್ಡ ಮೆರವಣಿಗೆಯಲ್ಲಿ ಭಾಗವಹಿಸಿದ್ದ 58 ವರ್ಷದ ರೈತರೊಬ್ಬರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ.

ನಾಸಿಕ್‌ನ ದಿಂಡೋರಿ ಬಳಿಯ ಗ್ರಾಮದ ನಿವಾಸಿ ಪುಂಡಲೀಕ್ ಅಂಬೋ ಜಾಧವ್ ಅವರು ಶುಕ್ರವಾರ ಮಧ್ಯಾಹ್ನ ಅಸ್ವಸ್ಥತೆಗೊಳಗಾದ ನಂತರ ಶಹಪುರದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಜಾಧವ್ ಅವರು ಚೇತರಿಸಿಕೊಂಡ ನಂತರ ಪ್ರತಿಭಟನಾಕಾರರು ಬೀಡುಬಿಟ್ಟಿದ್ದ  ಸ್ಥಳಕ್ಕೆ ಮರಳಿದ್ದರು ಎಂದು ಅಧಿಕಾರಿ ಹೇಳಿದರು.

ತಮ್ಮ ಹಲವು ಬೇಡಿಕೆಗಳನ್ನು ಆಗ್ರಹಿಸಿ ಸಾವಿರಾರು ರೈತರು ಹಾಗೂ  ಆದಿವಾಸಿಗಳ 200 ಕಿ.ಮೀ. ಪಾದಯಾತ್ರೆಯನ್ನು ಕಳೆದ ರವಿವಾರ ದಿಂಡೂರಿನಿಂದ ಆರಂಭಿಸಿದ್ದರು. ಇದು ಮುಂಬೈನಿಂದ ಸುಮಾರು 80 ಕಿ.ಮೀ. ದೂರದಲ್ಲಿರುವ ಥಾಣೆ ಜಿಲ್ಲೆಯ ವಸಿಂದ್ ಪಟ್ಟಣವನ್ನು ತಲುಪಿದೆ. ಈರುಳ್ಳಿ ರೈತರಿಗೆ ಪ್ರತಿ ಕ್ವಿಂಟಲ್‌ಗೆ  600 ರೂ.ಪರಿಹಾರ, ರೈತರಿಗೆ 12 ಗಂಟೆಗಳ ನಿರಂತರ ವಿದ್ಯುತ್ ಪೂರೈಕೆ ಹಾಗೂ ಕೃಷಿ ಸಾಲ ಮನ್ನಾ ರೈತರ ಬೇಡಿಕೆಗಳಾಗಿವೆ.

ಶುಕ್ರವಾರ ರಾತ್ರಿ 8 ಗಂಟೆ ಸುಮಾರಿಗೆ ಊಟ ಮಾಡಿದ ನಂತರ ಜಾಧವ್ ವಾಂತಿ ಮಾಡಿಕೊಂಡು ಮತ್ತೆ ಅಸ್ವಸ್ಥಗೊಂಡಿದ್ದಾರೆ. ಕೂಡಲೇ ಅವರನ್ನು ಶಹಾಪುರ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅವರು ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಸಿಂದ್ ಪೊಲೀಸ್ ಠಾಣೆಯ ಠಾಣಾಧಿಕಾರಿ ಅವರು ಆಕಸ್ಮಿಕ ಸಾವಿನ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಜಾಧವ್ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.

Similar News