ರೈತರ ನಿಯೋಗದೊಂದಿಗೆ ಮಹಾರಾಷ್ಟ್ರ ಸಿಎಂ ಚರ್ಚೆ: ನಾಸಿಕ್ ನಿಂದ ಮುಂಬೈಗೆ ರೈತರ ಪ್ರತಿಭಟನಾ ಮೆರವಣಿಗೆ ಹಿಂತೆಗೆತ
ಮುಂಬೈ: ರೈತರ ಬೇಡಿಕೆಗಳ ಕುರಿತು ರೈತರ ನಿಯೋಗದೊಂದಿಗೆ ಚರ್ಚೆ ನಡೆಸಿರುವುದಾಗಿ ರಾಜ್ಯ ವಿಧಾನಸಭೆಗೆ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ತಿಳಿಸಿದ ಒಂದು ದಿನದ ನಂತರ, ನಾಸಿಕ್‌ನಿಂದ ಮುಂಬೈಗೆ ಮೆರವಣಿಗೆ ನಡೆಸುತ್ತಿರುವ ಸಾವಿರಾರು ರೈತರು ತಮ್ಮ ಪ್ರತಿಭಟನೆಯನ್ನು ಹಿಂಪಡೆಯಲು ನಿರ್ಧರಿಸಿದ್ದಾರೆ.
200 ಕಿ.ಮೀ ಉದ್ದದ ಪಾದಯಾತ್ರೆಯ ನೇತೃತ್ವ ವಹಿಸಿರುವ ಸಿಪಿಐ ಮುಖಂಡ ಹಾಗೂ ಮಾಜಿ ಶಾಸಕ ಜೀವ ಪಾಂಡು ಗವಿತ್ ಅವರು ಇಂದು ಈ ನಿರ್ಧಾರ ಪ್ರಕಟಿಸಿದ್ದಾರೆ.
ರಾಜ್ಯ ಸರಕಾರವು ತನ್ನ ಭರವಸೆಗಳನ್ನು ಈಡೇರಿಸಲು ತಕ್ಷಣದ ಕ್ರಮಗಳನ್ನು ತೆಗೆದುಕೊಂಡಿದೆ ಎಂದು ಗವಿತ್ ಹೇಳಿದರು. ಜಿಲ್ಲಾಧಿಕಾರಿಗಳು ನಾಸಿಕ್ ಹಾಗೂ ಇತರ ಹಲವಾರು ಸ್ಥಳಗಳಿಗೆ ಭೇಟಿ ನೀಡಿದ್ದಾರೆ.
"ಸರಕಾರವು ಕೇವಲ ಭರವಸೆಗಳನ್ನು ನೀಡುತ್ತದೆಯೇ ಹೊರತು ಅದರ ಮೇಲೆ ಕ್ರಮಕೈಗೊಳ್ಳುವುದಿಲ್ಲ ಎಂದು ನಾವು ಹೆದರಿದ್ದೇವೆ. ಆದರೆ, ಈಗ ಅವರು ಸೂಕ್ತ ಕ್ರಮ ಕೈಗೊಳ್ಳಲು ಆರಂಭಿಸಿದ್ದಾರೆ. ನಾವು ನಮ್ಮ ಪ್ರತಿಭಟನೆಯನ್ನು ಹಿಂಪಡೆಯಲು ನಿರ್ಧರಿಸಿದ್ದೇವೆ. ಎಲ್ಲಾ ರೈತರು ಮನೆಗೆ ಮರಳುತ್ತಿದ್ದಾರೆ" ಎಂದು ಗವಿತ್ ಹೇಳಿದರು.
ಅರಣ್ಯ ಹಕ್ಕು, ಅರಣ್ಯ ಭೂಮಿ ಒತ್ತುವರಿ, ದೇವಸ್ಥಾನದ ಟ್ರಸ್ಟ್‌ಗಳಿಗೆ ಸೇರಿದ ಜಮೀನು ಮತ್ತು ಗೋಮಾಳಗಳನ್ನು ಕೃಷಿಗಾಗಿ ಸಾಗುವಳಿದಾರರಿಗೆ ವರ್ಗಾಯಿಸುವುದು ಸೇರಿದಂತೆ 14 ಅಂಶಗಳ ಕುರಿತು ರೈತರ ನಿಯೋಗದೊಂದಿಗೆ ಚರ್ಚಿಸಿದ್ದೇನೆ ಎಂದು ಶಿಂಧೆ ಹೇಳಿದರು.
ತಮ್ಮ ದೀರ್ಘ ಪಾದಯಾತ್ರೆ ಹಿಂತೆಗೆದುಕೊಳ್ಳುವಂತೆ ರೈತರಿಗೆ ಮನವಿ ಮಾಡಿದ ಸಿಎಂ ಶಿಂಧೆ, ತೆಗೆದುಕೊಂಡ ನಿರ್ಧಾರಗಳನ್ನು ತಕ್ಷಣವೇ ಜಾರಿಗೆ ತರಲಾಗುವುದು ಎಂದು ಹೇಳಿದರು.
ಈರುಳ್ಳಿ ಬೆಳೆಗಾರರಿಗೆ ಕಡಿಮೆ ಬೆಲೆ ಹಾಗೂ ಅಕಾಲಿಕ ಮಳೆಯಿಂದ ಬೆಳೆ ಹಾನಿ ಅನುಭವಿಸುತ್ತಿರುವ ರೈತರಿಗೆ ಆರ್ಥಿಕ ಪರಿಹಾರವಾಗಿ ಕ್ವಿಂಟಲ್‌ಗೆ 350 ರೂ. ನೀಡಲಾಗುವುದು ಎಂದರು.