ಹಿಮಾಚಲಪ್ರದೇಶದಲ್ಲಿ ಮದ್ಯದ ಬಾಟಲ್‌ ಗಳ ಮೇಲೆ 10 ರೂ. ಹೆಚ್ಚುವರಿ ತೆರಿಗೆ

Update: 2023-03-18 13:46 GMT

ಶಿಮ್ಲಾ, ಮಾ. 18: ಹಿಮಾಚಲಪ್ರದೇಶ ಸರಕಾರವು ರಾಜ್ಯದಲ್ಲಿ ಮರಾಟವಾಗುವ ಮದ್ಯ ಬಾಟಲಿಗಳ ಮೇಲೆ 10 ರೂಪಾಯಿ ಹಾಲು ಸೆಸ್ ವಿಧಿಸುವ ಪ್ರಸ್ತಾವವನ್ನು ಶುಕ್ರವಾರ ಮುಂದಿಟ್ಟಿದೆ. ಈ ಮೂಲಕ ರಾಜ್ಯ ಬೊಕ್ಕಸಕ್ಕೆ ಪ್ರತಿ ವರ್ಷ 100 ಕೋಟಿ ರೂಪಾಯಿ ಸಂಗ್ರಹಿಸುವ ಗುರಿಯನ್ನು ಅದು ಹೊಂದಿದೆ.

‌2023-24ರ ಹಣಕಾಸು ವರ್ಷದ ಬಜೆಟ್ ಮಂಡಿಸಿದ ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್ ಸುಖು, ಈ ಹಣವನ್ನು ಹಾಲು ಉತ್ಪಾದಕ ರೈತರ ಆದಾಯವನ್ನು ಹೆಚ್ಚಿಸಲು ಬಳಸಲಾಗುವುದು ಎಂದು ಹೇಳಿದರು. ಜೊತೆಗೆ, ರಾಜ್ಯದಲ್ಲಿ ಹಾಲು ಆಧಾರಿತ ಆರ್ಥಿಕತೆಯನ್ನು ಅಭಿವೃದ್ಧಿಪಡಿಸುವ ಉದ್ದೇಶದಿಂದ ‘‘ಹಿಮ ಗಂಗಾ’’ ಯೋಜನೆಯನ್ನು ಆರಂಭಿಸಲಾಗುವುದು ಎಂಬುದಾಗಿಯೂ ಅವರು ಘೋಷಿಸಿದರು.

‘‘ಈ ಯೋಜನೆಯಡಿಯಲ್ಲಿ, ಆಕಳು ಸಾಕಣೆಗಾರರಿಗೆ ನೈಜ ವೆಚ್ಚಕ್ಕೆ ಅನುಗುಣವಾಗಿ ಹಾಲಿಗೆ ಬೆಲೆಯನ್ನು ನೀಡಲಾಗುವುದು ಹಾಗೂ ಹಾಲು ಸಂಗ್ರಹ, ಸಂಸ್ಕರಣೆ ಮತ್ತು ಮಾರುಕಟ್ಟೆ ವ್ಯವಸ್ಥೆಯಲ್ಲಿ ಗುಣಾತ್ಮಕ ಸುಧಾರಣೆಯನ್ನು ತರಲಾಗುವುದು’’ ಎಂದು ಮುಖ್ಯಮಂತ್ರಿ ತನ್ನ ಭಾಷಣದಲ್ಲಿ ಹೇಳಿದರು.

ಹಾಲು ಮತ್ತು ಹಾಲಿನ ಉತ್ಪನ್ನಗಳ ಪ್ರಾದೇಶಿಕ ಮತ್ತು ಋತು ಆಧಾರಿತ ಏರುಪೇರುಗಳಿಂದ ಹಾಲು ಉತ್ಪಾದಕರನ್ನು ರಕ್ಷಿಸಲು ಬಜೆಟ್ನಲ್ಲಿ 500 ಕೋಟಿ ರೂ. ಮೊತ್ತವನ್ನು ಒದಗಿಸಲಾಗಿದೆ ಎಂಬುದಾಗಿಯೂ ಕಾಂಗ್ರೆಸ್ ಸರಕಾರದ ಮುಖ್ಯಮಂತ್ರಿ ತಿಳಿಸಿದರು.

ಹಿಂದಿನ ಬಿಜೆಪಿ ಸರಕಾರದ ಆಳ್ವಿಕೆಯ ಅವದಿಯಲ್ಲಿ, ಮುಖ್ಯಮಂತ್ರಿ ಜೈರಾಮ್ ಠಾಕೂರ್, ಗೋಶಾಲೆಗಳ ನಿರ್ವಹಣೆಗಾಗಿ ಮದ್ಯದ ಬಾಟಲಿಗಳ ಮೇಲೆ ಒಂದು ರೂಪಾಯಿ ಸೆಸ್ ವಿಧಿಸಿದ್ದರು.

Similar News