ಸಮಗ್ರತೆಗೆ ಬೆದರಿಕೆಯಾಗುವ ವ್ಯಾಖ್ಯಾನಗಳಿಗೆ ಪ್ರಚಾರ ಬೇಡ: ಮಾಧ್ಯಮಗಳನ್ನು ಒತ್ತಾಯಿಸಿದ ವಾರ್ತಾ ಮತ್ತು ಪ್ರಸಾರ ಸಚಿವ

Update: 2023-03-18 14:15 GMT

ಕೊಚ್ಚಿ, ಮಾ. 18: ದೇಶದ ಸಮಗ್ರತೆಗೆ ಬೆದರಿಕೆಯಾಗುವ ವ್ಯಾಖ್ಯಾನಗಳ ಬಗ್ಗೆ ಎಚ್ಚರದಿಂದಿರಬೇಕು ಹಾಗೂ ಅವುಗಳಿಗೆ ಪ್ರಚಾರ ನೀಡಬಾರದು ಎಂದು ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವ ಅನುರಾಗ್ ಠಾಕೂರ್ ಶನಿವಾರ ಮಾಧ್ಯಮ ಸಮುದಾಯವನ್ನು ಒತ್ತಾಯಿಸಿದ್ದಾರೆ. ದೇಶದೊಳಗಿನಿಂದ ಅಥವಾ ಹೊರಗಿನಿಂದ ಮುಕ್ತವಾಗಿ ಬರುವ ಕಳಪೆ ಮತ್ತು ತರ್ಕರಹಿತ ಅಭಿಪ್ರಾಯಗಳು ದೇಶದ ಪ್ರಜಾಸತ್ತೆಯ ಸ್ವರೂಪವನ್ನು ನಾಶಗೊಳಿಸಲು ಸಾಧ್ಯವಿಲ್ಲ ಎಂದು ಅವರು ಅಭಿಪ್ರಾಯಪಟ್ಟರು.

‘‘ಭಾರತದ ಸಮಗ್ರತೆಗೆ ಬೆದರಿಕೆಯಾಗುವ ಸಾಮರ್ಥ್ಯವುಳ್ಳ ಧ್ವನಿಗಳು ಮತ್ತು ವ್ಯಾಖ್ಯಾನಗಳಿಗೆ ಉದ್ದೇಶಪೂರ್ವಕವಾಗಿ ಅಥವಾ ಉದ್ದೇಶರಹಿತವಾಗಿ ಪ್ರಚಾರ ನೀಡುವಾಗ ಎಚ್ಚರದಿಂದಿರಬೇಕು ಎಂದು ನಾನು ಮಾಧ್ಯಮ ಸಮುದಾಯವನ್ನು ಒತ್ತಾಯಿಸುತ್ತೇನೆ’’ ಎಂದು ಅವರು ಹೇಳಿದರು.

ಮಲಯಾಳಂ ದೈನಿಕ ‘ಮಾತೃಭೂಮಿ’ಯ ಶತಮಾನೋತ್ಸವ ಆಚರಣೆ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು. ವಾಸ್ತವ ಸಂಗತಿಗಳು ಪವಿತ್ರ ಮತ್ತು ಅಭಿಪ್ರಾಯಗಳು ಮುಕ್ತ ಎಂಬ ಮಾತಿದೆ ಎಂದು ಅವರು ಹೇಳಿದರು.

‘‘ನಮ್ಮ ಶ್ರೇಷ್ಠ ದೇಶದ ಪ್ರಜಾಸತ್ತಾತ್ಮಕ ಸ್ವರೂಪವು, ದೇಶದೊಳಗಿನಿಂದ ಅಥವಾ ಹೊರಗನಿಂದ ಎಷ್ಟೇ ಕಳಪೆ ಮತ್ತು ಅತಾರ್ಕಿಕ ಅಭಿಪ್ರಾಯಗಳು ಮುಕ್ತವಾಗಿ ಹೇರಲ್ಪಟ್ಟರೂ ಯಾವತ್ತೂ ವಾಸ್ತವವಾಗಿರುತ್ತದೆ’’ ಎಂದು ಠಾಕೂರ್ ಹೇಳಿದರು.

Similar News