ಮಾಳದಲ್ಲಿ ಪರಿಸರ ಪೂರಕ ಪ್ರವಾಸೋದ್ಯಮಕ್ಕೆ ಉತ್ತೇಜನ: ಜಿಲ್ಲಾಧಿಕಾರಿ ಕೂರ್ಮಾರಾವ್
ಉಡುಪಿ: ನಿಸರ್ಗದತ್ತ ಪ್ರಕೃತಿ ಸೌಂದರ್ಯ ಹೊಂದಿರುವ ಮಾಳ ಗ್ರಾಮದಲ್ಲಿ ಪರಿಸರಕ್ಕೆ ಪೂರಕವಾದ ಪ್ರವಾಸೋದ್ಯಮ ಚಟುವಟಿಕೆಗಳಿಗೆ ಉತ್ತೇಜನ ನೀಡಲು ಜಿಲ್ಲಾಡಳಿತ ಸಿದ್ಧವಿದ್ದು, ಇದಕ್ಕಾಗಿ ಅರಣ್ಯ ಇಲಾಖೆ ಹಾಗೂ ಗ್ರಾಮ ಪಂಚಾಯತ್ ಜೊತೆ ಚರ್ಚೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳ ಲಾಗುವುದು ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ. ಹೇಳಿದ್ದಾರೆ.
ಕಾರ್ಕಳ ತಾಲೂಕಿನ ಮಾಳ ಗ್ರಾಮದ ಮಲ್ಲಾರು ಶ್ರೀಗುರುಕುಲ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ನಡೆದ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಮಾಳ ಗ್ರಾಮದಲ್ಲಿ ಈವರೆಗೆ ಸರಕಾರದ ಯೋಜನೆಗಳ ಪ್ರಯೋಜನಗಳನ್ನು ಪಡೆಯದೆ ಇರುವ ಫಲಾನುಭವಿಗಳನ್ನು ಗುರುತಿಸಿ, ಅವರಿಗೆ ಸರಕಾರದ ಯೋಜನೆಗಳನ್ನು ಆದ್ಯತೆಯಲ್ಲಿ ಒದಗಿಸಬೇಕು. ಜಿಲ್ಲಾಧಿಕಾರಿ ನಡೆ ಹಳ್ಳಿ ನಡೆ ಕಾರ್ಯಕ್ರಮದ ಮೂಲಕ ಇಡೀ ಜಿಲ್ಲಾಡಳಿತ ಸಾರ್ವಜನಿಕರ ಮನೆ ಬಾಗಿಲಿಗೆ ಆಗಮಿಸಿ, ಅವರ ಗ್ರಾಮದ ಎಲ್ಲಾ ಸಮಸ್ಯೆಗಳನ್ನು ಆಲಿಸಿ, ಅವುಗಳಿಗೆ ಸೂಕ್ತ ನೆರವು ಒದಗಿಸುತ್ತಿದ್ದು, ಜಿಲ್ಲೆಯಲ್ಲಿ ಈ ಕಾರ್ಯಕ್ರಮಕ್ಕೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ದೊರೆತಿದೆ ಎಂದರು.
ಕಾರ್ಯಕ್ರಮದಲ್ಲಿ ಕಂದಾಯ ಇಲಾಖೆ, ಪೊಲೀಸ್ ಇಲಾಖೆ, ಪಂಚಾಯತ್ ರಾಜ್ ಇಲಾಖೆ, ಪಿಡಬ್ಲ್ಯೂಡಿ, ಭೂಮಾಪನ ಇಲಾಖೆ, ಪಿಅರ್‌ಇಡಿ, ಅರಣ್ಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗೆ ಸಂಬಂಧಿಸಿದ ೮೦ಕ್ಕೂ ಅಧಿಕ ಅರ್ಜಿಗಳು ಸಲ್ಲಿಕೆಯಾಗಿದ್ದು, ಸ್ಥಳದಲ್ಲಿಯೇ ೫೫ ಅರ್ಜಿಗಳನ್ನು ಜಿಲ್ಲಾಧಿಕಾರಿ ಗಳು ವಿಲೇವಾರಿ ಮಾಡಿ, ಉಳಿದ ಅರ್ಜಿಗಳನ್ನು ಸಂಬಂಧಪಟ್ಟ ಇಲಾಖೆಗೆ ವರ್ಗಾವಣೆಗೊಳಿಸಿ, ಆದ್ಯತೆಯಲ್ಲಿ ಈ ಅರ್ಜಿಗಳನ್ನು ಪರಿಶೀಲಿಸಿ, ಸೂಕ್ತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮಾಳ ಗ್ರಾಪಂ ಅಧ್ಯಕ್ಷೆ ರಕ್ಷಿತಾ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪ್ರಸನ್ನ ಎಚ್., ಕುಂದಾಪುರ ಉಪ ವಿಭಾಗಾಧಿ ಕಾರಿ ರಶ್ಮಿ, ಕುದುರೆಮುಖ ಎಸಿಎಫ್ ಲೇಖರಾಜ್ ಮೀನಾ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಾಗಭೂಷಣ ಉಡುಪ ಉಪಸ್ಥಿತರಿದ್ದರು. ಕಾರ್ಕಳ ತಹಶೀಲ್ದಾರ್ ಅನಂತ ಶಂಕರ್ ಸ್ವಾಗತಿಸಿ, ವಂದಿಸಿದರು.