ಹಿರಿಯಡ್ಕದಲ್ಲಿ ‘ನಮ್ಮೂರು ನಮ್ಮ ಕೆರೆ’ ಹಸ್ತಾಂತರ

Update: 2023-03-18 14:55 GMT

ಉಡುಪಿ, ಮಾ.18: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಉಡುಪಿ ತಾಲೂಕು, ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಹಿರಿಯಡ್ಕ ವಲಯ, 40ನೇ ಬೊಮ್ಮರಬೆಟ್ಟು ಗ್ರಾ.ಪಂ. ಮತ್ತು ಪುತ್ತಿಗೆ ಮದಗ ಕೆರೆ ಅಭಿವೃದ್ಧಿ ಸಮಿತಿಗಳ ಸಂಯುಕ್ತ ಆಶ್ರಯದಲ್ಲಿ 522ನೇ ‘ನಮ್ಮೂರು ನಮ್ಮ ಕೆರೆ’ ಹಸ್ತಾಂತರ ಹಾಗೂ ಗಂಗಾ ಪೂಜಾ ಕಾರ್ಯಕ್ರಮವನ್ನು ಹಿರಿಯಡ್ಕದ ಪುತ್ತಿಗೆಯಲ್ಲಿ ಶನಿವಾರ ಆಯೋಜಿಸಲಾಗಿತ್ತು.

ಕೆರೆ ನಾಮಫಲಕ ಅನಾವರಣಗೊಳಿಸಿದ ಕಾಪು ಶಾಸಕ ಲಾಲಾಜಿ ಆರ್. ಮೆಂಡನ್ ಮಾತನಾಡಿ, ಮದಗಗಳ ನಿರ್ಮಾಣದಿಂದ ಅಂತರ್ಜಲ ಮಟ್ಟ ವೃದ್ಧಿಯಾಗಲು ಸಾಧ್ಯವಿದೆ. ಸರಕಾರ ಕೂಡ ಕೆರೆಗಳ ಅಭಿವೃದ್ಧಿಗೆ ಸಾಕಷ್ಟು ಅನುದಾನ ಬಿಡುಗಡೆ ಮಾಡಿದೆ. ಜಿಲ್ಲೆಯಲ್ಲಿ 17 ಕೆರೆಗಳನ್ನು ಅಭಿವೃದ್ಧಿ ಪಡಿಸಲಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಕೆರೆಗಳನ್ನು ಅಭಿವೃದ್ಧಿ ಪಡಿಸಲಾಗುವುದು ಎಂದು ತಿಳಿಸಿದರು.

ಟ್ರಸ್ಟ್‌ನ ಕರಾವಳಿ ಪ್ರಾದೇಶಿಕ ಕಚೇರಿಯ ನಿರ್ದೇಶಕ ವಸಂತ ಸಾಲ್ಯಾನ್ ಮಾತನಾಡಿ, ಕೆರೆ ಸಮಾಜದ ಸೊತ್ತು. ನೀರಿದ್ದರೆ ಅಂತರ್ಜಲ ವೃದ್ಧಿ ಜತೆಗೆ ಪ್ರಾಣಿ, ಪಕ್ಷಿಗಳಿಗೂ ಅನುಕೂಲವಾಗುತ್ತದೆ. 70ರಿಂದ 100 ಕೆರೆಗಳ ಹೂಳೆತ್ತುವ ಕೆಲಸ ನಡೆಯುತ್ತಿದೆ. ಈ ಮೂಲಕ ಅಂತರ್ಜಲ ಮಟ್ಟ ಹೆಚ್ಚಲು ವಿಶೇಷ ಆದ್ಯತೆ ನೀಡಲಾಗುತ್ತಿದೆ. ನೀರಿನ ಬಗ್ಗೆ ಜಾಗೃತಿ ಮೂಡಿಸುವ ಕೆಲಸವೂ ನಡೆಯುತ್ತಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಅಂಗವಿಕಲ ಅಶಕ್ತರಿಗೆ ವ್ಹೀಲ್ ಚೆಯರ್ ವಿತರಿಸ ಲಾಯಿತು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಿಪತ್ತು ನಿರ್ವಹಣೆ ಘಟಕದ ಉದ್ಘಾಟನೆ ಮಾಡಲಾಯಿತು. ಪುತ್ತಿಗೆ ಮದಗ ಕೆರೆ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಸಂಜೀವ ಜೆ.ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು.

ಟ್ರಸ್ಟ್‌ನ ಜಿಲ್ಲಾ ನಿರ್ದೇಶಕ ಶಿವರಾಯ ಪ್ರಭು, ಪುತ್ತಿಗೆ ವಿಷ್ಣುಮೂರ್ತಿ ದೇವಸ್ಥಾನದ ಪ್ರಧಾನ ಅರ್ಚಕ ವಿಷ್ಣುಮೂರ್ತಿ ಉಪಾಧ್ಯಾಯ, ಜನಜಾಗೃತಿ ವೇದಿಕೆ ಸದಸ್ಯ ಸತ್ಯಾನಂದ ನಾಯಕ್, ಉದ್ಯಮಿ ಇಬ್ರಾಹಿಂ ಕುಟ್ಟಿ, ಯೋಜನೆಯ ಹಿರಿಯಡ್ಕ ವಲಯಾಧ್ಯಕ್ಷ ರಾಘವೇಂದ್ರ ನಾಯ್ಕ, ಪಿಡಿಓ ಮಂಜುನಾಥ್ ಉಪಸ್ಥಿತರಿದ್ದರು.

ಉಡುಪಿ ವಲಯ ಯೋಜನಾಧಿಕಾರಿ ರಾಮು ಎಂ. ಸ್ವಾಗತಿಸಿದರು. ಕೃಷಿ ಮೇಲ್ವಿಚಾರಕ ರಾಘವೇಂದ್ರ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.

Similar News