ಮಹಿಳೆಯರ ಪ್ರೀಮಿಯರ್ ಲೀಗ್: ಗುಜರಾತ್‌ಗೆ ಸೋಲುಣಿಸಿದ ಆರ್‌ಸಿಬಿ

ಸೋಫಿ ಡಿವೈನ್ 99 ರನ್

Update: 2023-03-18 17:36 GMT

  ಮುಂಬೈ, ಮಾ.18: ಆರಂಭಿಕ ಆಟಗಾರ್ತಿ ಸೋಫಿ ಡಿವೈನ್ ಭರ್ಜರಿ ಅರ್ಧಶತಕದ(99 ರನ್, 36 ಎಸೆತ, 9 ಬೌಂಡರಿ, 8 ಸಿಕ್ಸರ್)ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಗುಜರಾತ್ ಜೈಂಟ್ಸ್ ತಂಡವನ್ನು ಮಹಿಳೆಯರ ಪ್ರೀಮಿಯರ್ ಲೀಗ್‌ನ 16ನೇ ಪಂದ್ಯದಲ್ಲಿ 8 ವಿಕೆಟ್‌ಗಳ ಅಂತರದಿಂದ ಮಣಿಸಿದೆ. ಇದರೊಂದಿಗೆ ಟೂರ್ನಿಯಲ್ಲಿ ಆಡಿದ 7ನೇ ಪಂದ್ಯದಲ್ಲಿ 2ನೇ ಗೆಲುವು ದಾಖಲಿಸಿದೆ. ಗುಜರಾತ್ 7ರಲ್ಲಿ 5ನೇ ಸೋಲು ಕಂಡಿದೆ.

 ಶನಿವಾರ ನಡೆದ ಪಂದ್ಯದಲ್ಲಿ ಗೆಲ್ಲಲು 189 ರನ್ ಗುರಿ ಪಡೆದಿದ್ದ ಆರ್‌ಸಿಬಿ 15.3 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ ಗೆಲುವಿನ ದಡ ಸೇರಿತು. ನಾಯಕಿ ಸ್ಮತಿ ಮಂಧಾನ(37 ರನ್,31 ಎಸೆತ)ಹಾಗೂ ಡಿವೈನ್ ಮೊದಲ ವಿಕೆಟಿಗೆ 125 ರನ್ ಜೊತೆಯಾಟ ನಡೆಸಿ ಭದ್ರ ಬುನಾದಿ ಹಾಕಿಕೊಟ್ಟರು.

12ನೇ ಓವರ್‌ನಲ್ಲಿ 99 ರನ್‌ಗೆ ಔಟಾದ ಡಿವೈನ್ 1 ರನ್‌ನಿಂದ ಶತಕ ವಂಚಿತರಾದರು. ಎಲ್ಲಿಸ್ ಪೆರ್ರಿ(ಔಟಾಗದೆ 19) ಹಾಗೂ ಹೀದರ್ ನೈಟ್(22 ರನ್, 15 ಎಸೆತ)3ನೇ ವಿಕೆಟಿಗೆ ಮುರಿಯದ ಜೊತೆಯಾಟದಲ್ಲಿ 32 ರನ್ ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.

ಇದಕ್ಕೂ ಮೊದಲು ಆರಂಭಿಕ ಆಟಗಾರ್ತಿ ಲೌರಾ ವೋಲ್ವಾರ್ಟ್ ಅರ್ಧಶತಕ(68 ರನ್, 42 ಎಸೆತ, 9 ಬೌಂಡರಿ,2 ಸಿಕ್ಸರ್), ಅಶ್ಲೆ ಗಾರ್ಡನರ್(41 ರನ್, 26 ಎಸೆತ, 6 ಬೌಂಡರಿ, 1 ಸಿಕ್ಸರ್) ಹಾಗೂ ಎಸ್. ಮೇಘನಾ(31 ರನ್, 32 ಎಸೆತ)ಅವರ ಸಾಂದರ್ಭಿಕ ಬ್ಯಾಟಿಂಗ್ ನೆರವಿನಿಂದ ಗುಜರಾತ್ ಜೈಂಟ್ಸ್ ತಂಡ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 188 ರನ್ ಗಳಿಸಿತು.

ಆರ್‌ಸಿಬಿ ಪರ ಶ್ರೇಯಾಂಕ ಪಾಟೀಲ್(2-17)ಯಶಸ್ವಿ ಬೌಲರ್ ಎನಿಸಿಕೊಂಡರು. ಗುಜರಾತ್ ತಂಡ 3ನೇ ಓವರ್‌ನಲ್ಲಿ ಸೋಫಿಯಾ ಡಂಕ್ಲೆ ವಿಕೆಟನ್ನು ಕಳೆದುಕೊಂಡಿತು. ಆಗ ಮೇಘನಾರೊಂದಿಗೆ 2ನೇ ವಿಕೆಟಿಗೆ 63 ರನ್ ಹಾಗೂ ಗಾರ್ಡನರ್ ಜೊತೆ 3ನೇ ವಿಕೆಟಿಗೆ 52 ರನ್ ಜೊತೆಯಾಟ ನಡೆಸಿದ ವೋಲ್ವಾರ್ಟ್ ತಂಡದ ಮೊತ್ತ ಹಿಗ್ಗಿಸಿದರು.
 

Similar News