ಕೆಲವು ನಿವೃತ್ತ ನ್ಯಾಯಾಧೀಶರು ಭಾರತ ವಿರೋಧಿ ಗುಂಪಿನಲ್ಲಿದ್ದಾರೆ: ಕೇಂದ್ರ ಸಚಿವ ಕಿರಣ್ ರಿಜಿಜು

Update: 2023-03-19 10:15 GMT

ಹೊಸದಿಲ್ಲಿ: ಮೂರ್ನಾಲ್ಕು ನಿವೃತ್ತ ನ್ಯಾಯಾಧೀಶರು ಭಾರತ ವಿರೋಧಿ ಗುಂಪಿನಲ್ಲಿದ್ದು, ದೇಶದ ವಿರುದ್ಧ ಕೆಲಸ ಮಾಡುವ ಎಲ್ಲರೂ ಅದಕ್ಕೆ ಬೆಲೆ ತೆರಬೇಕಾಗುತ್ತದೆ ಎಂದು ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು (Kiren Rijiju) ಕಿಡಿ ಕಾರಿದ್ದಾರೆ ಎಂದು Thewire.in ವರದಿ ಮಾಡಿದೆ.

'ಇಂಡಿಯಾ ಟುಡೇ' ಸಮಾಲೋಚನಾ ಕೂಟದಲ್ಲಿ ಶನಿವಾರ ಭಾಗವಹಿಸಿ ಮಾತನಾಡಿದ ಕಿರಣ್ ರಿಜಿಜು, ಕೆಲವು ನಿವೃತ್ತ ಹೋರಾಟಗಾರ ನ್ಯಾಯಾಧೀಶರು ಭಾರತೀಯ ನ್ಯಾಯಾಂಗ ವ್ಯವಸ್ಥೆಯು ವಿರೋಧ ಪಕ್ಷದ ಕಾರ್ಯ ನಿರ್ವಹಿಸುವಂತೆ ಮಾಡಲು ಯತ್ನಿಸುತ್ತಿದ್ದಾರೆ. ಕೆಲವು ಮಂದಿ ನ್ಯಾಯಾಲಯಕ್ಕೆ ಹೋಗಿ, 'ದಯವಿಟ್ಟು ಸರ್ಕಾರಕ್ಕೆ ಲಗಾಮು ಹಾಕಿ, ಸರ್ಕಾರದ ನೀತಿಯನ್ನು ಬದಲಾಯಿಸಿ' ಎಂದು ಮನವಿ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.

ಕಾಂಗ್ರೆಸ್ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಲಂಡನ್‌ನಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಭಾರತದಲ್ಲಿ ಪ್ರಜಾಪ್ರಭುತ್ವವನ್ನು ಮಣ್ಣುಪಾಲು ಮಾಡುತ್ತಿದೆ ಎಂದು ನೀಡಿರುವ ಹೇಳಿಕೆಯ ವಿರುದ್ಧ ತಮ್ಮ ಪಕ್ಷ ನಡೆಸುತ್ತಿರುವ ದಾಳಿಯನ್ನು ಮುಂದುವರಿಸಿದ ಕಿರಣ್ ರಿಜಿಜು, ರಾಹುಲ್ ಗಾಂಧಿ ದೇಶದ್ರೋಹಿ ಗುಂಪುಗಳು ಬಳಸುತ್ತಿರುವ ಭಾಷೆಯನ್ನೇ ಬಳಸುತ್ತಿದ್ದಾರೆ ಎಂದು ಟೀಕಿಸಿದ್ದಾರೆ. ಭಾರತದಲ್ಲಿ ಪ್ರಜಾಪ್ರಭುತ್ವ ಅಪಾಯದಲ್ಲಿದೆ, ಭಾರತದಲ್ಲಿ ಮಾನವ ಹಕ್ಕುಗಳು ಅಸ್ತಿತ್ವದಲ್ಲಿಲ್ಲ ಎಂಬುದು ಪುನರಾವರ್ತಿತ ಪ್ರತಿಪಾದನೆಯಾಗಿದೆ ಎಂದೂ ಅವರು ಹೇಳಿದ್ದಾರೆ.

ವಿಚಾರ ಗೋಷ್ಠಿಯ ಸಮನ್ವಯಕಾರರಾಗಿ ಕಾರ್ಯನಿರ್ವಹಿಸಿದ ಗೌರವ್ ಸಾವಂತ್, ನೀವು ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಹಾಗೂ ಹಿರಿಯ ಸಂಸದ 'ತುಕ್ಡೆ ತುಕ್ಡೆ ಗ್ಯಾಂಗ್'ನ ಭಾಗವಾಗಿದ್ದಾರೆ ಎಂದು ಆರೋಪಿಸುತ್ತಿದ್ದೀರಾ ಎಂದು ಕಿರಣ್ ರಿಜಿಬು ಅವರನ್ನು ಪ್ರಶ್ನಿಸಿದಾಗ, ಆ ಪ್ರಶ್ನೆಗೆ ಅವರು ಸಮ್ಮತಿ ಸೂಚಿಸಿದ್ದಾರೆ.

ಭಾರತದ ಮೇಲೆ ಒಳಗಿನಿಂದ ಹಾಗೂ ಹೊರಗಿನಿಂದ ಭಾರಿ ಪ್ರಮಾಣದ ದಾಳಿ ನಡೆಸಲು ವಿದೇಶಿ ಶಕ್ತಿಗಳು ನಿಧಿ ಒದಗಿಸುತ್ತಿವೆ ಎಂಬ ಬಗ್ಗೆ ಸರ್ಕಾರಕ್ಕೆ ಮಾಹಿತಿ ಇದೆ ಎಂದೂ ಅವರು ಪ್ರತಿಪಾದಿಸಿದ್ದಾರೆ.

Similar News