ಉಡುಪಿ ಪೊಲೀಸರಿಂದ ‘ಆಪರೇಷನ್ ಸೂರ್ಯಾಸ್ತ’ ವಿಶೇಷ ಕಾರ್ಯಾಚರಣೆ

ಡ್ರಗ್ಸ್ ಕೇಸಿನಲ್ಲಿ ಮೂವರ ಬಂಧನ

Update: 2023-03-19 16:17 GMT

ಉಡುಪಿ, ಮಾ.19: ಉಡುಪಿ ಜಿಲ್ಲಾ ಪೊಲೀಸ್ ವತಿಯಿಂದ ಮಾ.18 ರಂದು ರಾತ್ರಿ ಹಮ್ಮಿಕೊಳ್ಳಲಾದ ಆಪರೇಷನ್ ಸೂರ್ಯಾಸ್ತ ವಿಶೇಷ ಕಾರ್ಯಾಚರಣೆಯಲ್ಲಿ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡವರ ವಿರುದ್ಧ ಕ್ರಮ ಜರಗಿಸಲಾಗಿದೆ.

ಈ ವಿಶೇಷ ಕಾರ್ಯಚರಣೆಯ ಪ್ರಯುಕ್ತ ಎಲ್ಲಾ ಅಧಿಕಾರಿ ಹಾಗೂ ಸಿಬ್ಬಂದಿಯನ್ನೊಳಗೊಂಡ ವಿಶೇಷ ತಂಡಗಳನ್ನು ರಚಿಸಿ ಪ್ರಮುಖ ಹಾಗೂ ಸೂಕ್ಷ್ಮ ಪ್ರದೇಶಗಳಲ್ಲಿ ಚೆಕ್‌ ಪೋಸ್ಟ್‌ಗಳನ್ನು ಸ್ಥಾಪಿಸಿ, ವಾಹನಗಳನ್ನು ಕೂಲಂಕುಷವಾಗಿ ತಪಾಸಣೆ ಮಾಡಲಾಯಿತು ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಅಕ್ಷಯ್ ಹಾಕೇ ಮಚ್ಚಿಂದ್ರ ತಿಳಿಸಿದ್ದಾರೆ.

ಸಾರ್ವಜನಿಕರಿಗೆ ತೊಂದರೆ ನೀಡುವ ವ್ಯಕ್ತಿಗಳ ವಿರುದ್ಧ ಕರ್ನಾಟಕ ಪೊಲೀಸ್ ಕಾಯ್ದೆ ಅನ್ವಯ ಪ್ರಕರಣಗಳನ್ನು ದಾಖಲಿಸಲಾಯಿತು. ನಿಷೇಧಿತ ಪ್ರದೇಶಗಳಲ್ಲಿ ತಂಬಾಕು ಹಾಗೂ ಅದರ ಉತ್ಪನ್ನಗಳನ್ನು ಮಾರಾಟ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಲಾಯಿತು. ಅಲ್ಲದೇ ಅದರ ಜೊತೆಯಲ್ಲಿ ಇ-ಸಿಗರೇಟ್‌ಗಳನ್ನು ಮಾರಾಟ ಮಾಡುವ ಅಂಗಡಿಗಳ ಮೇಲೆಯೂ ದಾಳಿ ನಡೆಸಲಾಯಿತು.

ಡ್ರಗ್ಸ್ ಕೇಸಿನಲ್ಲಿ ಮೂವರ ಬಂಧನ

ಈ ಕಾರ್ಯಾಚರಣೆಯಲ್ಲಿ ಗಾಂಜಾ ಹಾಗೂ ಡ್ರಗ್ಸ್‌ನ್ನು ಮಾರಾಟಕ್ಕೆ ಸಂಬಂಧಿಸಿ ಮೂರು ಮಂದಿಯನ್ನು ಬಂಧಿಸಲಾಗಿದ್ದು, ವಾಹನ ತಪಾಸಣೆ ವೇಳೆ 45 ಲೀಟರ್ ಅಕ್ರಮ ಮದ್ಯ ಸಾಗಾಟ ಮಾಡುತ್ತಿದ್ದ ವ್ಯಕ್ತಿಯನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಎಸ್ಪಿ ತಿಳಿಸಿದ್ದಾರೆ.

ಫಿಂಗರ್ ಪ್ರಿಂಟ್ ಸ್ಕ್ಯಾನರ್ಸ್‌ ಮೂಲಕ ಹಳೆಯ ಕಳ್ಳತನ ಹಾಗೂ ಅದರ ಸಂಬಂಧಿತ ಪ್ರಕರಣಗಳಲ್ಲಿ ಭಾಗಿಯಾಗಿದ್ದ 60 ಮಂದಿ ಆರೋಪಿಗಳನ್ನು ಪರಿಶೀಲಿಸಲಾಯಿತು. ಸರಿಯಾಗಿ ದಾಖಲೆಗಳಿಲ್ಲದ, ನಕಲಿ ನಂಬರ್ ಪ್ಲೇಟ್, ನಂಬರ್ ಪ್ಲೇಟ್ ಇಲ್ಲದ, ಮದ್ಯಪಾನ ಸೇವಿಸಿ ವಾಹನ ಚಾಲನೆ ಮಾಡುತ್ತಿರುವ ವಾಹನ ಚಾಲಕರುಗಳನ್ನು ತಪಾಸಣೆ ಮಾಡಲಾಯಿತು.

1.30 ಲಕ್ಷ ದಂಡ ವಸೂಲಿ

ಈ ವೇಳೆ ಮದ್ಯಪಾನ ಮಾಡಿ ವಾಹನ ಚಲಾವಣೆ ಮಾಡಿದ ಬಗ್ಗೆ 32 ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಯಿತು. ಅಲ್ಲದೇ ಕ್ರಮ ಬಧ್ಧವಾದ ನಂಬರ್ ಪ್ಲೇಟ್ ಹೊಂದಿರದ/ನಕಲಿ ನಂಬರ್ ಪೇಟ್ ಹೊಂದಿರುವಂತಹ 29 ವಾಹನ ಗಳನ್ನು ಸ್ವಾಧೀನ ಪಡಿಸಿಕೊಳ್ಳಲಾಯಿತು. ಒಟ್ಟು 258 ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳನ್ನು ದಾಖಲಿಸಿಕೊಂಡು 1,30,000ರೂ. ದಂಡದ ಮೊತ್ತವನ್ನು ಸಂಗ್ರಹಿಸಲಾಯಿತು.

ಅದೇ ರೀತಿ 44 ನಿಷೇಧಿತ ಪ್ರದೇಶಗಳಲ್ಲಿ ತಂಬಾಕು ಹಾಗೂ ಅದಕ್ಕೆ ಸಂಬಂಧಪಟ್ಟ ಉತ್ಪನ್ನಗಳನ್ನು ಮಾರಾಟ ಮಾಡಿದ ಬಗ್ಗೆ 44 ಕೋಟ್ಪಾ ಕಾಯ್ದೆ ಅಡಿ ಪ್ರಕರಣಗಳನ್ನು ದಾಖಲಿಸಲಾಯಿತು. ಸಾರ್ವಜನಿಕ ಪ್ರದೇಶಗಳಲ್ಲಿ ಮದ್ಯ ಪಾನ ಮಾಡುತ್ತಿದ್ದ 17 ಮಂದಿ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಎಸ್ಪಿ ಪ್ರಕಟಣೆಯಲ್ಲಿ ತಿಳಿಸಿದರು.

‘65 ಮಂದಿ ರೌಡಿ ಶೀಟರ್‌ಗಳನ್ನು ಅನಿರೀಕ್ಷಿತವಾಗಿ ತಪಾಸಣೆ ನಡೆಸಿ ಅವರ ಕಾರ್ಯಚಟುವಟಿಕೆಗಳ ಬಗ್ಗೆ ನಿಗಾವಹಿಸಲಾಯಿತು. ಉಡುಪಿ ಜಿಲ್ಲೆಯ ಸಾರ್ವಜನಿಕರಲ್ಲಿ ಪೊಲೀಸ್ ಇಲಾಖೆಯ ಬಗ್ಗೆ ಆತ್ಮ ವಿಶ್ವಾಸ ನಿರ್ಮಾಣ ಮಾಡಲು ಹಾಗೂ ಇಂತಹ ಸಮಾಜ ವಿರೋಧಿ ಚಟುವಟಿಕೆಗಳನ್ನು ನಡೆಸುವವರ ಬಗ್ಗೆ ತೀವ್ರ ನಿಗಾ ವಹಿಸಿ ಕಾನೂನಿನ ಪರಿಪಾಲನೆ ಮಾಡುವ ನಿಟ್ಟಿನಲ್ಲಿ ಈ ವಿಶೇಷ ಕಾರ್ಯಾಚರಣೆ ಹಮ್ಮಿಕೊಳ್ಳಲಾಗಿದೆ’
-ಅಕ್ಷಯ್ ಹಾಕೇ ಮಚ್ಚಿಂದ್ರ, ಉಡುಪಿ ಎಸ್ಪಿ

Similar News