ಲಿವ್-ಇನ್ ಸಂಬಂಧಗಳ ನೋಂದಣಿ: ನಿಯಮಗಳನ್ನು ರೂಪಿಸಲು ಕೋರಿದ್ದ ಅರ್ಜಿ ವಜಾ

Update: 2023-03-20 15:28 GMT

ಹೊಸದಿಲ್ಲಿ,ಮಾ.20: ಲಿವ್-ಇನ್ ಸಂಬಂಧಗಳ ನೋಂದಣಿಗಾಗಿ ನಿಯಮಗಳನ್ನು ರೂಪಿಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಸರ್ವೋಚ್ಚ ನ್ಯಾಯಾಲಯವು ಸೋಮವಾರ ವಜಾಗೊಳಿಸಿದೆ. ಇದೊಂದು ‘ಅವಿವೇಕದ ಕಲ್ಪನೆ ’ ಎಂದು ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅವರು ಬಣ್ಣಿಸಿದರು.

ದೇಶದಲ್ಲಿಯ ಪ್ರತಿ ಸಹಜೀವನ ಸಂಬಂಧದ ಕಡ್ಡಾಯ ನೋಂದಣಿಗಾಗಿ ಮಾರ್ಗಸೂಚಿಗಳನ್ನು ಕೋರಿ ವಕೀಲರೋರ್ವರು ಈ ಅರ್ಜಿಯನ್ನು ಸಲ್ಲಿಸಿದ್ದರು. ಜೊತೆಯಾಗಿ ವಾಸವಾಗಿರುವ ಜೋಡಿಗಳಿಗೆ ಸಾಮಾಜಿಕ ಭದ್ರತೆಯನ್ನೂ ಅವರು ಕೋರಿದ್ದರು. ಲಿವ್- ಇನ್ ಸಂಗಾತಿಗಳಿಂದ ಅಪರಾಧಗಳನ್ನು ಕಡಿಮೆ ಮಾಡಲು ಇದು ಅಗತ್ಯವಾಗಿದೆ ಎಂದು ಅವರು ವಾದಿಸಿದ್ದರು.

 ‘ಜನರು ಯಾವುದನ್ನು ಬೇಕಾದರೂ ಕೋರಿ ಇಲ್ಲಿಗೆ ಬರುತ್ತಿದ್ದಾರೆ. ಕೇಂದ್ರ ಸರಕಾರದೊಂದಿಗೆ ನೋಂದಣಿಯೇ? ಸಹಜೀವನದಲ್ಲಿರುವ ಜನರಿಗೂ ಕೇಂದ್ರ ಸರಕಾರಕ್ಕೂ ಏನು ಸಂಬಂಧ? ಇಂತಹ ಅರ್ಜಿಗಳಿಗೆ ದಂಡ ವಿಧಿಸಲು ನಾವು ಆರಂಭಿಸುತ್ತೇವೆ ’ಎಂದು ಕಟುವಾಗಿ ಹೇಳಿದ ಮುಖ್ಯ ನ್ಯಾಯಮೂರ್ತಿಗಳು, ಇಂತಹ ಜನರ ಸಾಮಾಜಿಕ ಭದ್ರತೆಯನ್ನು ಹೆಚ್ಚಿಸಲು ಅಥವಾ ಜನರು ಲಿವ್-ಇನ್ ಸಂಬಂಧದಲ್ಲಿ ಬದುಕಲು ಅವಕಾಶ ನೀಡದಿರಲು ನೀವು ಪ್ರಯತ್ನಿಸುತ್ತಿದ್ದೀರಾ? ಇದೊಂದು ಅಪಕ್ವ ಚಿಂತನೆಯ ಕಲ್ಪನೆ ಅಷ್ಟೇ. ಅರ್ಜಿಯನ್ನು ವಜಾಗೊಳಿಸಲಾಗಿದೆ ಎಂದರು.

Similar News