ಬಿಹಾರದಲ್ಲಿ ಕುಖ್ಯಾತ ಗ್ಯಾಂಗ್ ಸ್ಟರ್ ಪ್ರಿನ್ಸ್ ಸಿಂಗ್ ಎನ್ ಕೌಂಟರ್ ಗೆ ಬಲಿ

Update: 2023-03-20 15:53 GMT

ಪಾಟ್ನಾ,ಮಾ.20: ಬಿಹಾರದ ಸೀತಾಮಡಿಯಲ್ಲಿ ಕುಖ್ಯಾತ ಗ್ಯಾಂಗ್ಸ್ಟರ್ ಪ್ರಿನ್ಸ್ ಸಿಂಗ್ ಎನ್ಕೌಂಟರ್ನಲ್ಲಿ ಕೊಲ್ಲಲ್ಪಟ್ಟಿದ್ದಾನೆ ಎಂದು ಪೊಲೀಸರು ಸೋಮವಾರ ತಿಳಿಸಿದರು.

ರಾಜ್ಯದ ವಿವಿಧ ಭಾಗಗಳಿಂದ ಸರಣಿ ಅಪಹರಣ,ಹಫ್ತಾ ವಸೂಲಿ ಮತ್ತು ಕೊಲೆ ಪ್ರಕರಣಗಳು ವರದಿಯಾದ ಬಳಿಕ ಈ ಬೆಳವಣಿಗೆ ನಡೆದಿದೆ. ರವಿವಾರ ರಾತ್ರಿ ಸೀತಾಮಡಿ ಪೊಲೀಸರ ತಂಡವು ಬುಧನಗ್ರಾ ಗ್ರಾಮದಲ್ಲಿ ದಾಳಿಯನ್ನು ನಡೆಸಿತ್ತು. ಇಡೀ ರಾತ್ರಿ ಕಾರ್ಯಾಚರಣೆಯ ಬಳಿಕ ನಸುಕಿನ 3:30ರ ಸುಮಾರಿಗೆ ಪ್ರಿನ್ಸ್ ಸಿಂಗ್ ಮತ್ತು ತಂಡ ಎದುರಾಗಿತ್ತು. ಪೊಲೀಸರು ಶರಣಾಗುವಂತೆ ಅವರಿಗೆ ಎಚ್ಚರಿಕೆ ನೀಡಿದ್ದರು. ಆದರೆ ಅವರು ಪರಾರಿಯಾಗುವ ಯತ್ನದಲ್ಲಿ ಪೊಲೀಸರತ್ತ ಗುಂಡುಗಳನ್ನು ಹಾರಿಸಿದ್ದರು. ಪೊಲೀಸ್ ತಂಡವು ಪ್ರತಿದಾಳಿ ನಡೆಸಿದಾಗ ಪ್ರಿನ್ಸ್ ಸಿಂಗ್ ತೀವ್ರವಾಗಿ ಗಾಯಗೊಂಡಿದ್ದ. ಪೊಲೀಸರು ಆತನನ್ನು ಸದರ್ ಆಸ್ಪತ್ರೆಗೆ ಸಾಗಿಸಿದ್ದರಾದರೂ ಆ ವೇಳೆಗಾಗಲೇ ಆತ ಮೃತಪಟ್ಟಿದ್ದ ಎಂದು ಐಜಿಪಿ ಪಂಕಜ್ ಸಿನ್ಹಾ ತಿಳಿಸಿದರು.

ಮುಝಫ್ಫರ್ಪುರದಲ್ಲಿ ಅಕ್ರಮ ಮದ್ಯ ಸಾಗಾಣಿಕೆ ಪ್ರಕರಣಗಳಲ್ಲಿ ಪ್ರಿನ್ಸ್ ಸಿಂಗ್ ಅಪೇಕ್ಷಿತ ಆರೋಪಿಯಾಗಿದ್ದು,ಜಿಲ್ಲೆಯ ಕತ್ರಾ ಪೊಲಿಸ್ ಠಾಣೆಯಲ್ಲಿ ಆತನ ವಿರುದ್ಧ ಎರಡು ಎಫ್ಐಆರ್ಗಳು ದಾಖಲಾಗಿದ್ದವು. ಅಲ್ಲದೆ ಆತ ಇತರ ಆರು ಕ್ರಿಮಿನಲ್ ಪ್ರಕರಣಗಳಲ್ಲಿಯೂ ಭಾಗಿಯಾಗಿದ್ದ.
ಪ್ರಿನ್ಸ್ ಸಿಂಗ್ನ ಮೂವರು ಸಹಚರರು ಸೆರೆ ಸಿಕ್ಕಿದ್ದು,ಅವರ ಬಳಿಯಿದ್ದ ಒಂದು ಪಿಸ್ತೂಲನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಎಸ್ಪಿ ಹರಕಿಶೋರ ರಾಯ್ ತಿಳಿಸಿದರು.

Similar News