ಬುಡಕಟ್ಟು ಜನರ ಕಲೆ ಅವರ ಪರಿಸರ,ವಿಶ್ವಾತ್ಮಕ ದೃಷ್ಟಿಕೋನದ ಪ್ರತಿಬಿಂಬ: ಕೇರಳದ ಕಲಾವಿದ ಸತ್ಯಪಾಲ್ ಟಿ.ಎ.

Update: 2023-03-21 16:25 GMT

ಮಣಿಪಾಲ: ಬುಡಕಟ್ಟು ಜನರ ಕಲೆ ಅವರ ಪರಿಸರ ಹಾಗೂ ಆ ಸಮುದಾಯದ ವಿಶ್ವಾತ್ಮಕ ದೃಷ್ಟಿಕೋನವನ್ನು ಪ್ರತಿಬಿಂಬಿಸುತ್ತದೆ ಎಂದು ಕೇರಳ ಲಲಿತಕಲಾ ಅಕಾಡೆಮಿಯ ಮಾಜಿ ಅಧ್ಯಕ್ಷ ಮತ್ತು ಕಲಾವಿದ-ಲೇಖಕ ಸತ್ಯಪಾಲ್ ಟಿ.ಎ. ಅಭಿಪ್ರಾಯಪಟ್ಟಿದ್ದಾರೆ.

ಮಣಿಪಾಲದ ಗಾಂಧಿಯನ್ ಸೆಂಟರ್ ಫಾರ್ ಫಿಲಾಸೋಫಿಕಲ್ ಆರ್ಟ್ಸ್ ಆ್ಯಂಡ್ ಸಾಯನ್ಸ್‌ನ ಆಯೋಜಿಸಿದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಭಾರತೀಯ ಸ್ಥಳೀಯ ಕಲೆಗಳ ಕುರಿತು ಮಾತನಾಡಿದರು. ಗೊಂಡಾ, ರಾಜವಾರ ಹಾಗೂ ಭಿಲ್ಲರ ಕಲೆಗಳು ಇಂತಹ ಜೀವಜಾಲ ಮತ್ತು ಜೀವನದ ದೃಷ್ಟಿಕೋನಕ್ಕೆ ಪ್ರಮುಖ ಉದಾಹರಣೆಗಳಾಗಿವೆ ಎಂದರು.

ದೇಶಾದ್ಯಂತ ವ್ಯಾಪಕ ಪ್ರವಾಸ ಕೈಗೊಂಡು ಭಾರತದ ಸ್ಥಳೀಯ ಕಲೆ, ಬುಡಕಟ್ಟು ಕಲೆಗಳ ಕುರಿತು ವ್ಯಾಪಕ ಅಧ್ಯಯನ ನಡೆಸಿರುವ ಸತ್ಯಪಾಲ್, ಆದಿವಾಸಿಗಳ ಜೀವನವು ಕೇವಲ ಮನುಷ್ಯರನ್ನು ಮಾತ್ರವಲ್ಲದೆ ಸಸ್ಯಗಳು ಮತ್ತು ಪ್ರಾಣಿಗಳನ್ನು ಸಹ ಒಳಗೊಂಡಿರುವ ಜೀವಜಾಲವಾಗಿದೆ. ಅವರು ಪ್ರಕೃತಿಯೊಂದಿಗೆ ಆತ್ಮೀಯ ಸಂಬಂಧವನ್ನು ಬೆಸೆದಿದ್ದಾರೆ ಮತ್ತು ಇದು ಅವರ ವಿವಿಧ ಕಲಾ ಪ್ರಕಾರಗಳಲ್ಲಿ ಪ್ರತಿಫಲಿಸುತ್ತವೆ ಎಂದು ವಿವರಿಸಿದರು.

ಗೊಂಡಾ, ರಾಜುವಾರ ಹಾಗೂ ಭಿಲ್ ಸಮುದಾಯದ ಕಲಾ ಪ್ರಕಾರಗಳ ಬಗ್ಗೆ ನಿರ್ದಿಷ್ಟವಾಗಿ ಮಾತನಾಡಿದ ಸತ್ಯಪಾಲ್, ಅವರ ನೈಸರ್ಗಿಕ ವಿಶ್ವಾತ್ಮಕ ದೃಷ್ಟಿಕೋನ ಮತ್ತು ಪ್ರಕೃತಿಯೊಂದಿಗಿನ ನಿಕಟ ಸಂಬಂಧವನ್ನು ಪ್ರದರ್ಶಿಸುವ ಚಿತ್ರಗಳ ಸರಣಿಯನ್ನು ತೋರಿಸಿದರು. ಸತ್ಯಪಾಲ್ ಅವರು ಆದಿವಾಸಿಗಳ ಕಥೆಗಳು, ನಂಬಿಕೆಗಳು, ಸಂಗೀತ ಮತ್ತು ನೃತ್ಯವನ್ನು ವಿವರಿಸಿದರು. ಅವರ ಕಲೆ ಸಮುದಾಯದ ಮೌಲ್ಯಗಳನ್ನು ಸೂಚಿಸುತ್ತದೆ ಎಂದರು.

ಆದರೆ ಈ ಜನಾಂಗದ ಕುರಿತಂತೆ ಉಳಿದವರಿಗಿರುವ ಅಜ್ಞಾನ ಮತ್ತು ಸಂವೇದನಾಶೀಲತೆಯ ಕೊರತೆ, ಆದಿವಾಸಿಗಳ ಜೀವನ ಮತ್ತು ಕಲೆಯನ್ನು ಹಾಳುಮಾಡುತ್ತಿವೆ. ಬುಡಕಟ್ಟು ಕಲಾವಿದರು ಮತ್ತು ಸಮಕಾಲೀನ ಕಲಾವಿದರ ನಡುವಿರುವ ಗೋಡೆಯನ್ನು ಕೆಡವಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕಾದ ಅಗತ್ಯವಿದೆ ಎಂದು ಅವರು ಅಭಿಪ್ರಾಯಪಟ್ಟರು.
ಸಂಸ್ಥೆಯ ಮುಖ್ಯಸ್ಥ ಪ್ರೊ. ವರದೇಶ್ ಹಿರೇಗಂಗೆ ಚರ್ಚೆಯನ್ನು ನಡೆಸಿ ಕೊಟ್ಟು, ಆದಿವಾಸಿಗಳ ವೈವಿಧ್ಯತೆ ಮತ್ತು ಎಲ್ಲರನ್ನೂ ಒಳಗೊಳ್ಳುವ ದೃಷ್ಟಿಕೋನದ ಬಗ್ಗೆ ಸಂವೇದನಾಶೀಲತೆಯನ್ನು ಬೆಳೆಸಿಕೊಳ್ಳುವುದು ನಮ್ಮ ಪ್ರಯತ್ನ ಎಂದರು.

ಕಲಾವಿದರಾದ ಪುರುಷೋತ್ತಮ ಅಡ್ವೆ ಹಾಗೂ ಸಿಂಧು ದಿವಾಕರ್ ಉಪಸ್ಥಿತರಿದ್ದರು.

Similar News