ಭೂಕಂಪ: ಪಾಕಿಸ್ತಾನ, ಅಫ್ಘಾನಿಸ್ತಾನದಲ್ಲಿ 9 ಮಂದಿ ಮೃತ್ಯು

Update: 2023-03-22 03:00 GMT

ಕಾಬೂಲ್: ಅಫ್ಘಾನಿಸ್ತಾನದಲ್ಲಿ ಮಂಗಳವಾರ ಸಂಜೆ ಸಂಭವಿಸಿದ ಭೀಕರ ಭೂಕಂಪದಿಂದ ಕನಿಷ್ಠ ಒಂಬತ್ತು ಮಂದಿ ಮೃತಪಟ್ಟಿದ್ದಾರೆ. ರಿಕ್ಟರ್ ಮಾಪಕದಲ್ಲಿ ಭೂಕಂಪದ ತೀವ್ರತೆ 6.6 ರಷ್ಟಿತ್ತು. ಇದೇ ವೇಳೆ ತುರ್ಕಮೇನಿಸ್ತಾನ, ಭಾರತ, ಖಜಕಸ್ತಾನ, ಪಾಕಿಸ್ತಾನ, ತಜಿಕಿಸ್ತಾನ, ಉಜ್ಬೇಕಿಸ್ತಾನ, ಚೀನಾ ಹಾಗೂ ಖಿರ್ಗಿಸ್ತಾನದಲ್ಲೂ ಭೂಕಂಪದ ಅನುಭವ ಆಗಿದೆ.

"ನಮಗೆ ತಿಳಿದಿರುವಂತೆ ಇಂಡೋ ಆಸ್ಟ್ರೇಲಿಯನ್ ಪ್ಲೇಟ್, ಯೂರೇಶಿಯನ್ ಪ್ಲೇಟ್‌ಗೆ ಡಿಕ್ಕಿ ಹೊಡೆದ ಕಾರಣದಿಂದ ಈ ಭಾಗದಲ್ಲಿ ಭೂಕಂಪ ಸಂಭವಿಸಿದೆ. ಎಚ್‌ಕೆಎಚ್ ಪ್ರದೇಶ ಭೂಕಂಪಸೂಕ್ಷ್ಮ ಪ್ರದೇಶ. ಈ ಕಾರಣದಿಂದ ವಾಯವ್ಯ ಭಾರತ ಹಾಗೂ ದೆಹಲಿಯಲ್ಲೂ ಸುಧೀರ್ಘ ಅವಧಿಗೆ ಕಂಪನದ ಅನುಭವ ಆಗಿದೆ. 150 ಕಿಲೋಮೀಟರ್ ಆಳದಲ್ಲಿ ಕಂಪನ ಸಂಭವಿಸಿದ್ದು, ಈ ಕಾರಣದಿಂದ ಪ್ರಾಥಮಿಕ ಹಾಗೂ ಪೂರಕ ಕಂಪನದ ಅನುಭವ ಆಗಿದೆ" ಎಂದು ನ್ಯಾಷನಲ್ ಸೆಂಟರ್ ಫಾರ್ ಸಿಸ್ಮೋಲಜಿಯ ವಿಜ್ಞಾನಿ ಹಾಗೂ ಮುಖ್ಯಸ್ಥ ಜೆ.ಎಲ್.ಗೌತಮ್ ಹೇಳಿದ್ದಾರೆ.

ಭೂಕಂಪದಿಂದ ಪಾಕಿಸ್ತಾನ ಹಾಗೂ ಅಪ್ಘಾನಿಸ್ತಾನದಲ್ಲಿ ಕನಿಷ್ಠ ಒಂಬತ್ತು ಮಂದಿ ಮೃತಪಟ್ಟಿದ್ದಾರೆ ಎಂದು ಎಪಿ ಸುದ್ದಿಸಂಸ್ಥೆ ವರದಿ ಮಾಡಿದೆ. ಪಾಕಿಸ್ತಾನದ ಸ್ವತ್ ಕಣಿವೆ ಪ್ರದೇಶದಲ್ಲಿ ನೂರಾರು ಮಂದಿ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪಾಕಿಸ್ತಾನದ ತುರ್ತುಸೇವೆಗಳ ವಿಭಾಗದ ವಕ್ತಾರ ಬಿಲಾಲ್ ಫೈಝಿ ವಿವರಿಸಿದ್ದಾರೆ.

Similar News