ಗುಜರಾತ್‌: ಛತ್ತೀಸ್‌ಗಢದ ವಲಸೆ ಕಾರ್ಮಿಕನ ಥಳಿಸಿ ಹತ್ಯೆ

Update: 2023-03-22 03:56 GMT

ಅಹ್ಮದಾಬಾದ್: ಗುಜರಾತ್‌ನ ಖೇಡಾ ಬಳಿಯ ಸುಂಧಾ ವನ್ಸೋಲ್ ಗ್ರಾಮದಲ್ಲಿ ಸೋಮವಾರ ಛತ್ತೀಸ್‌ಗಢದ ಬಲರಾಂಪುರದ ವಲಸೆ ಕಾರ್ಮಿಕನೊಬ್ಬನನ್ನು ಥಳಿಸಿ ಹತ್ಯೆ ಮಾಡಲಾಗಿದೆ.

ರಾಮಕೇಶ್ವರ ಖೇರ್‌ವಾರ್ ಎಂಬ 30 ವರ್ಷ ವಯಸ್ಸಿನ ಕಾರ್ಮಿಕ ಹೈಸ್ಪೀಡ್ ರೈಲು ಯೋಜನೆಯಲ್ಲಿ ಕೆಲಸ ಮಾಡಲು ಅಹ್ಮದಾಬಾದ್‌ಗೆ ಬಂದಿದ್ದು, ಇವರನ್ನು ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಕಳೆದ ಎರಡು ದಿನದಲ್ಲಿ ಕಳ್ಳರು ಎಂದು ಭಾವಿಸಿ ಗ್ರಾಮಸ್ಥರು ವಲಸೆ ಕಾರ್ಮಿಕರನ್ನು ಥಳಿಸಿ ಹತ್ಯೆ ಮಾಡುತ್ತಿರುವ ಎರಡನೇ ಘಟನೆ ಇದಾಗಿದೆ. ಈ ಸಂಬಂಧ ನಾಲ್ಕು ಮಂದಿಯನ್ನು ಬಂಧಿಲಾಗಿದೆ.

ಖೆರವಾರ್ ಮಧ್ಯರಾತ್ರಿ 12.30ರ ಸುಮಾರಿಗೆ ಗ್ರಾಮವನ್ನು ತಲುಪಿದ್ದು, ಗ್ರಾಮಸ್ಥರು ಆತನನ್ನು ಕಟ್ಟಿಹಾಕಿ ಧಳಿಸಿದರು ಎಂದು ದೂರು ನೀಡಲಾಗಿದೆ. ಗುಜರಾತಿ ಭಾಷೆ ಮಾತನಾಡಲು ಬಾರದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಥಳಿಸುತ್ತಿದ್ದರೂ, ಆತ ಏನೂ ಹೇಳಲು ಸಾಧ್ಯವಾಗಲಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಗ್ರಾಮಸ್ಥರೊಬ್ಬರು ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ನೀಡಿ ಮಾಹಿತಿ ನೀಡಿದರು.

ತಕ್ಷಣ ಆಗಮಿಸಿದ ಪೊಲೀಸರು ಖೇರವಾರ್ ಅವರನ್ನು ಮಹೆಮ್ದವಾಡ ಸಿವಿಲ್ ಆಸ್ಪತ್ರೆಗೆ ಸೇರಿಸಿದರು. ಅಲ್ಲಿಂದ ಅಹ್ಮದಾಬಾದ್ ಸಿವಿಲ್ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ತೀವ್ರ ಗಾಯಗಳಾಗಿದ್ದ ಅವರು ಮೃತಪಟ್ಟರು. ದೇಹದ ಎಲ್ಲ ಭಾಗಗಳಲ್ಲಿ ಗಾಯದ ಗುರುತುಗಳಿದ್ದು, ತಲೆಯಲ್ಲಿ ಆಳವಾದ ಗಾಯವಾಗಿತ್ತು ಎನ್ನಲಾಗಿದೆ.

Similar News