ದಿಲ್ಲಿ ಸರ್ಕಾರದ ಬಜೆಟಿಗೆ ಕೇಂದ್ರದ ಅನುಮೋದನೆ ಬೆನ್ನಲ್ಲೇ ಪ್ರಧಾನಿಯನ್ನು ʻಹಿರಿಯ ಸಹೋದರʼ ಎಂದ ಕೇಜ್ರಿವಾಲ್

Update: 2023-03-22 06:50 GMT

ಹೊಸದಿಲ್ಲಿ: ದಿಲ್ಲಿ ಸರ್ಕಾರದ ಬಜೆಟ್ ಮಂಡನೆಗೆ ಕೇಂದ್ರ ಗೃಹ ಸಚಿವಾಲಯದ ಒಪ್ಪಿಗೆ ದೊರೆತ ಕೆಲವೇ ಗಂಟೆಗಳಲ್ಲಿ ಪ್ರತಿಕ್ರಿಯಿಸಿದ ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Arvind Kejriwal),  ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರನ್ನು  ತಮ್ಮ ʼಹಿರಿಯ ಸಹೋದರʼ ಎಂದು ಬಣ್ಣಿಸಿದರಲ್ಲದೆ ತಾವು ಕೇಂದ್ರದ ಜೊತೆಯಲ್ಲಿ ಕೆಲಸ ಮಾಡಲು ಬಯಸುವುದಾಗಿ ಹೇಳಿದ್ದಾರೆ.

ದಿಲ್ಲಿ ವಿಧಾನಸಭೆಯ ಬಜೆಟ್ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದ ಕೇಜ್ರಿವಾಲ್, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ ಸಂಘರ್ಷಗಳು ಇಲ್ಲದೇ ಇರುತ್ತಿದ್ದರೆ ದಿಲ್ಲಿ ಈಗಿನದ್ದಕ್ಕಿಂತ 10 ಪಟ್ಟು ಹೆಚ್ಚು ಪ್ರಗತಿ ಸಾಧಿಸುತ್ತಿತ್ತು ಎಂದು ಹೇಳಿದರು.

"ದಿಲ್ಲಿ ಸರ್ಕಾರಕ್ಕೆ ಕೆಲಸ ಮಾಡಬೇಕಿದೆ, ಜಗಳ ಬೇಕಿಲ್ಲ. ಜಗಳವಾಡಿ ಸಾಕಾಗಿ ಹೋಗಿದೆ ಹಾಗೂ ಇದರಿಂದ ಯಾರಿಗೂ ಪ್ರಯೋಜನವಿಲ್ಲ. ನಾವು ಪ್ರಧಾನಿ ಜೊತೆಗೆ ಕೆಲಸ ಮಾಡಲು ಬಯಸುತ್ತೇವೆ, ಯಾವುದೇ ಜಗಳ ಬೇಕಾಗಿಲ್ಲ," ಎಂದು ಕೇಜ್ರಿವಾಲ್ ಹೇಳಿದರು.

"ಪ್ರಧಾನಿಗೆ ದಿಲ್ಲಿಯನ್ನು ಗೆಲ್ಲಬೇಕಿದ್ದರೆ, ಅವರು ಮೊದಲು ದಿಲ್ಲಿ ನಿವಾಸಿಗಳ ಮನಸ್ಸನ್ನು ಗೆಲ್ಲಬೇಕು, ಇದು ಅವರಿಗೆ ನಾನು ಹೇಳಿಕೊಡುವ ಮಂತ್ರ ಆಗಿದೆ," ಎಂದು ಕೇಜ್ರಿವಾಲ್ ಹೇಳಿದರು.

"ನೀವು ಹಿರಿಯ ಸಹೋದರ ಮತ್ತು ನಾನು ಕಿರಿಯ ಸಹೋದರ, ನೀವು ನನ್ನನ್ನು ಬೆಂಬಲಿಸಿದರೆ ನಾನು ಪ್ರತಿಕ್ರಿಯಿಸುತ್ತೇನೆ. ನೀವು ಈ ಕಿರಿಯ ಸಹೋದರನ ಹೃದಯ ಗೆಲ್ಲಬೇಕಿದ್ದರೆ, ಅವನನ್ನು ಪ್ರೀತಿಸಿ," ಎಂದು ಅವರು ಹೇಳಿದರು.

ದಿಲ್ಲಿ ಸರ್ಕಾರದ ಬಜೆಟ್ ಅನ್ನು ಅನುಮೋದನೆಗಾಗಿ ಕೇಂದ್ರಕ್ಕೆ ಸಲ್ಲಿಸುವ ಪರಿಪಾಠ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ತತ್ವಕ್ಕೆ ವಿರುದ್ಧವಾಗಿದೆ ಎಂದು ಕೇಜ್ರಿವಾಲ್ ಹೇಳಿದರು.

"ಬಜೆಟ್ ಅನ್ನು ಇಂದು ಮಂಡಿಸಬೇಕಿತ್ತು. ಕೇಂದ್ರ ಅದನ್ನು ತಡೆಯಿತು. ಬಜೆಟಿಗೆ ಯಾವುದೇ ಬದಲಾವಣೆ ಮಾಡದೆ ಗೃಹ ಸಚಿವಾಲಯದ ಪ್ರಶ್ನೆಗೆ ಉತ್ತರಿಸಿದೆವು. ಈಗ ಅದನ್ನು ಅನುಮೋದಿಸಲಾಗಿದೆ. ಅವರೆದುರು ನಾನು ಬಗ್ಗಬೇಕು ಎಂಬುದು ಅವರ ಬಯಕೆ. ಅದು ಅವರ ಅಹಂ ಅಲ್ಲದೆ ಮತ್ತಿನ್ನೇನಲ್ಲ," ಎಂದು ಕೇಜ್ರಿವಾಲ್ ಹೇಳಿದರು.

ದಿಲ್ಲಿ ಸರ್ಕಾರದ ಬಜೆಟಿಗೆ ಕೇಂದ್ರದ ಆಕ್ಷೇಪ ಸಂಪ್ರದಾಯಕ್ಕೆ ವಿರುದ್ಧವಾಗಿದೆ. ಹೀಗಾಗಿರುವುದು ಇದೇ ಮೊದಲ ಬಾರಿ ಎಂದು ಅವರು ಹೇಳಿದರು.

Similar News