ಚೆಳಾಯರು: ಮೂಡದಿಂದ 700 ನಿವೇಶನಗಳಿಗೆ ಶಿಲಾನ್ಯಾಸ

Update: 2023-03-22 17:56 GMT

ಸುರತ್ಕಲ್‌, ಮಾ.22: ನಗರಾಭಿವೃದ್ಧಿ ಪ್ರಾಧಿಕಾರ ಮಂಗಳೂರು ಇದರ ವತಿಯಿಂದ ಚೆಳಾಯರು ಗ್ರಾಮ ಪಂಚಾಯತ್‌ ಮುಂಭಾಗದ ನಿವೇಶನದಲ್ಲಿ ಬೃಹತ್‌ ವಸತಿ ನಿವೇಶನಕ್ಕೆ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರವಿಶಂಕರ್‌ ಮಿಜಾರು ಬುಧವಾರ ಶಿಲಾನ್ಯಾಸಗೈದರು.

ಬಳಿಕ ನಡೆದ ಸಭಾಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸದ್ಯ ಇಂದು ಪ್ರಥಮ ಹಂತದಲ್ಲಿ 42 ಎಕರೆ ಪ್ರದೇಶದಲ್ಲಿ 700 ನಿವೇಶನಗಳಿಗೆ ಶಿಲಾನ್ಯಾಸ ನೆರವೇರಿಸಲಾಗಿದೆ. ಇದರಲ್ಲಿ ಸರಕಾರದ ನಿಯಮಗಳಂತೆ ಶೇ.33 ಆರ್ಥಿಕವಾಗಿ ದುರ್ಬಲರಿಗೆ ಆದ್ಯತೆಯ ಮೇರೆಗೆ ನೀಡಲಾಗುವುದು. ಎರಡನೇ ಹಂತದಲ್ಲಿ ಮತ್ತೆ 300 ನಿವೇಶನಗಳಿಗೆ ಶಿಲಾನ್ಯಾದ ಗೈಯ್ಯಲಾಗುವುದು. ಈ ಪ್ರದೇಶದಲ್ಲಿ ಒಟ್ಟು 100 ನಿವೇಶನಗಳನ್ನು ನಿರ್ಮಾಣ ಮಾಡುವ ಮೂಲಕ ಸಣ್ಣ ಪ್ರಮಾಣದ ನಗರವನ್ನು ನಿರ್ಮಿಸಲಾಗುವುದು. ದ.ಕ ಜಿಲ್ಲೆಯಲ್ಲೇ ಈ ವರೆಗೆ ಮೂಡದ ವತಿಯಿಂದ ಇಷ್ಟೊಂದು ದೊಡ್ಡ ಪ್ರಮಾಣದ ನಿವೇಶನಗಳಿಗೆ ಶಿಲಾನ್ಯಾಸ ಮಾಡಲಾಗಿಲ್ಲ ಎಂದು ನುಡಿದರು.

ಮೂಡ ಅಂದರೆ ಕೇವಲ ಜನರ ತೆರಿಗೆ ಸಂಗ್ರಹಿಸುವ ಕೇಂದ್ರವಲ್ಲ, ಅದು ಜನರಿಂದ ಸಂಗ್ರಹಿಸಿದ ತೆರಿಗೆಯನ್ನು ಅವರಿಗೇ ನೀಡುವ ಪುಣ್ಯಯದ ಸ್ಥಳ. ಮೂಡದಿಂದ 45 ಪಾರ್ಕ್‌ಗಳ ನಿರ್ಮಾಣ, 67 ಪಾರ್ಕ್‌ಗಳ ಅಭಿವೃದ್ಧಿ, ವೃತ್ತಗಳ ನಿರ್ಮಾಣ, ಕದ್ರಿ ಪಾರ್ಕ್‌ನಲ್ಲಿ ಗಂಗಮ್ಮನ ಹಳ್ಳ, ಪ್ರವಾಸಿಗರನ್ನು ಆಕರ್ಷಿಸುವ ನೆಲೆಯಲ್ಲಿ ಅಭಿವೃದ್ಧಿ ಕಾರ್ಯಗಳು, 40 ಸೆಂಟ್‌ ಪ್ರದೇಶದಲ್ಲಿ ಅಂಗವಿಕಲರಿಗಾಗಿ ವಿಶೇಷ ಪಾರ್ಕ್‌ ನಿರ್ಮಾಣಕ್ಕೆ ದಿನಗಳ ಅಂತರದಲ್ಲಿ ಗುದ್ದಲಿಪೂಜೆ ನಡೆಯಲಿದೆ ಎಂದರು.

ಕಾಂಕ್ರಿಟ್‌ ರಸ್ತೆ, ಆರ್‌ಸಿಸಿ ಮನೆಗಳನ್ನು ನಿರ್ಮಾಣ ಮಾಡಿದರೆ, ಅಭಿವೃದ್ಧಿ ಯಾಗುವುದಿಲ್ಲ. ಇದರ ಜೊತೆಗೆ  ಹಸಿರೀಕರಣ ನಿರ್ಮಾಣವಾಗಬೇಕು. ಪ್ರದೇಶಗಳು ವಿಸ್ತಾರದಲ್ಲಿ ಅಭಿವೃದ್ಧಿಯಾಗಬೇಕೇ ಹೊರತು ಡೊಡ್ಡ ಡೊಡ್ಡ ಕಟ್ಟಡಗಳ ನಿರ್ಮಾಣದಿಂದ ಅಲ್ಲ ಎಂದು ಅವರು ನುಡಿದರು.

ಸಮಾರಂಭದ ಅಧ್ಯಕ್ಷತೆಯನ್ನು ಚೇಳಾಯರು ಗ್ರಾಮ ಪಂಚಾಯತ್‌ ಅಧ್ಯಕ್ಷೆ ಯಶೋಧ ಅಧ್ಯಕ್ಷತೆ ವಹಿಸಿದ್ದರು. ಚೇಳಾಯರು ಗ್ರಾಮ ಪಂಚಾಐತ್‌ ಉಪಾಧ್ಯಕ್ಷ ಬಾಲಕೃಷ್ಣ ಶೆಟ್ಟಿ, ಮೂಡ ಅಭಿಯಂತರರಾದ ಆರತಿ, ನಗಾರಭಿವೃದ್ಧಿ ಪ್ರಾಧಿಕಾರದ ಸದಸ್ಯೆ ಕವಿತಾ, ಚೇಳಾಯರು ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ನಿತ್ಯಾನಂದ, ನಗರಾಭಿವೃದ್ಧಿ ಪ್ರಾಧಿಕಾರದ ಮ್ಯಾನೇಜರ್‌ ಉಷಾ, ಗ್ರಾಮ ಪಂಚಾಯತ್‌ ಸದಸ್ಯರು ಮೊದಲಾದವರು ಉಪಸ್ಥಿತರಿದ್ದರು.

Similar News