ಇಡೀ ಸರಕಾರಿ ಯಂತ್ರಗಳು ರಾಹುಲ್ ಗಾಂಧಿಯವರ ಧ್ವನಿ ಹತ್ತಿಕ್ಕಲು ಪ್ರಯತ್ನಿಸುತ್ತಿವೆ: ಪ್ರಿಯಾಂಕಾ ಗಾಂಧಿ

ವಿರೋಧ ಪಕ್ಷದ ನಾಯಕರು, ಪಕ್ಷಗಳನ್ನು ಮುಗಿಸಲು ಷಡ್ಯಂತ್ರ ನಡೆಯುತ್ತಿದೆ ಎಂದ ದಿಲ್ಲಿ ಸಿಎಂ ಅರವಿಂದ ಕೇಜ್ರಿವಾಲ್

Update: 2023-03-23 08:02 GMT

ಹೊಸದಿಲ್ಲಿ: "ಇಡೀ ಸರಕಾರಿ ಯಂತ್ರಗಳು ರಾಹುಲ್ ಗಾಂಧಿಯವರ ಧ್ವನಿಯನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿವೆ’’ ಎಂದು ಕಾಂಗ್ರೆಸ್ ನಾಯಕಿ  ಪ್ರಿಯಾಂಕಾ ಗಾಂಧಿ ಗುರುವಾರ ಪ್ರತಿಕ್ರಿಯಿಸಿದರು.

“ಭೀತಿಗೊಳಗಾಗಿರುವ ಸರಕಾರವು ಪೂರ್ಣ ಸರಕಾರಿ ಯಂತ್ರದೊಂದಿಗೆ ರಾಹುಲ್ ಗಾಂಧಿ ಅವರ ಧ್ವನಿಯನ್ನು ಹತ್ತಿಕ್ಕಲು ಯತ್ನಿಸುತ್ತಿದೆ. ನನ್ನ ಸಹೋದರ ಯಾವತ್ತೂ ಹೆದರಿಕೊಂಡಿಲ್ಲ,  ಹೆದರುವುದೂ ಇಲ್ಲ. ಸತ್ಯ ಹೇಳುತ್ತಾ ಜೀವಿಸುತ್ತಿದ್ದು, ಸತ್ಯವನ್ನೇ ಹೇಳುತ್ತಾರೆ. ದೇಶದ ಜನತೆಯ ಧ್ವನಿಯನ್ನು ಎತ್ತುತ್ತಿರುತ್ತಾರೆ. ಸತ್ಯದ ಶಕ್ತಿ ಮತ್ತು ಕೋಟ್ಯಂತರ ದೇಶವಾಸಿಗಳ ಪ್ರೀತಿ ಅವರ ಬಳಿ ಇದೆ’’ ಎಂದು ಪ್ರಿಯಾಂಕಾ ಹಿಂದಿಯಲ್ಲಿ ಟ್ವೀಟಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರ ಉಪನಾಮದ ಬಗ್ಗೆ ನೀಡಿದ ಹೇಳಿಕೆಗೆ  ಸಂಬಂಧಿಸಿ ದಾಖಲಾಗಿರುವ 2019ರ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿ  ಗುರುವಾರ ಗುಜರಾತ್‌ನ ಸೂರತ್‌ನ ನ್ಯಾಯಾಲಯವು  ರಾಹುಲ್ ಗೆ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಆದಾಗ್ಯೂ, ಅವರಿಗೆ ಜಾಮೀನು ನೀಡಲಾಯಿತು. ಈ ನಿರ್ಧಾರ ವಿರುದ್ಧ  ಮೇಲ್ಮನವಿ ಸಲ್ಲಿಸಲು ಅವರ ಶಿಕ್ಷೆಯನ್ನು 30 ದಿನಗಳವರೆಗೆ ಅಮಾನತುಗೊಳಿಸಲಾಯಿತು.

"ಎಲ್ಲಾ ಕಳ್ಳರು ಮೋದಿ ಎಂಬ ಸಾಮಾನ್ಯ ಉಪನಾಮವನ್ನು ಹೊಂದಿದ್ದು ಹೇಗೆ?" ಎಂದು ಪ್ರಶ್ನಿಸಿದ್ದ ರಾಹುಲ್ ವಿರುದ್ದ  ಬಿಜೆಪಿ ಶಾಸಕ ಹಾಗೂ  ಗುಜರಾತ್ ಮಾಜಿ ಸಚಿವ ಪೂರ್ಣೇಶ್ ಮೋದಿ ದ್ಧ ಕೇಸ್ ದಾಖಲಿಸಿದ್ದಾರೆ.

"ವಿರೋಧ ಪಕ್ಷದ ನಾಯಕರು ಹಾಗೂ  ಪಕ್ಷಗಳನ್ನು ಮುಗಿಸಲು ಷಡ್ಯಂತ್ರ ನಡೆಯುತ್ತಿದೆ, ಬಿಜೆಪಿಯೇತರ ಪಕ್ಷಗಳ ನಾಯಕರ ವಿರುದ್ಧ ಪ್ರಕರಣ ದಾಖಲಿಸಲು ಷಡ್ಯಂತ್ರ ನಡೆಯುತ್ತಿದೆ, ನನಗೆ ರಾಹುಲ್ ಗಾಂಧಿಯೊಂದಿಗೆ ಭಿನ್ನಾಭಿಪ್ರಾಯವಿದೆ, ಆದರೆ ಅವರನ್ನು ಮಾನನಷ್ಟ ಮೊಕದ್ದಮೆಯಲ್ಲಿ ಸಿಲುಕಿಸುವುದು ಸರಿಯಲ್ಲ. ನಾನು ನ್ಯಾಯಾಲಯಕ್ಕೆ ಗೌರವ ನೀಡುವೆ, ಆದರೆ ತೀರ್ಪನ್ನು ಒಪ್ಪುವುದಿಲ್ಲ" ಎಂದು ದಿಲ್ಲಿ ಸಿಎಂ ಅರವಿಂದ ಕೇಜ್ರಿವಾಲ್ ಹೇಳಿದರು.

”ರಾಹುಲ್ ಅವರಿಗೆ ಜಾಮೀನು ಮಂಜೂರಾಗಿದೆ. ಅವರು ನ್ಯಾಯಾಧೀಶರನ್ನು ಬದಲಾಯಿಸುತ್ತಲೇ ಇದ್ದ ಕಾರಣ ನಮಗೆ ಮೊದಲಿನಿಂದಲೂ ತಿಳಿದಿತ್ತು. ನಮಗೆ ಕಾನೂನು, ನ್ಯಾಯಾಂಗದಲ್ಲಿ ನಂಬಿಕೆ ಇದೆ ಹಾಗೂ  ಕಾನೂನು ಪ್ರಕಾರ ಇದರ ವಿರುದ್ಧ ಹೋರಾಡುತ್ತೇವೆ’’ ಎಂದು  'ಮೋದಿ ಉಪನಾಮ' ಹೇಳಿಕೆಗೆ ಸಂಬಂಧಿಸಿದಂತೆ ರಾಹುಲ್  ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯಲ್ಲಿ ದೋಷಿ ಎಂದು ಸಾಬೀತಾಗಿರುವ ಕುರಿತಂತೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪ್ರತಿಕ್ರಿಯಿಸಿದರು.

"ನ್ಯಾಯಾಂಗ, ಚುನಾವಣಾ ಆಯೋಗ, ಈಡಿ ಅವೆಲ್ಲವನ್ನೂ ದುರುಪಯೋಗ ಪಡಿಸಿಕೊಂಡಿರುವುದರಿಂದ ನಮ್ಮ ಪ್ರಜಾಪ್ರಭುತ್ವ ಅಪಾಯದಲ್ಲಿದೆ ಎಂದು ನಾವು ಹೇಳುತ್ತಲೇ  ಇದ್ದೇವೆ.. ಎಲ್ಲಾ ನಿರ್ಧಾರಗಳನ್ನು ಪ್ರಭಾವದ ಅಡಿಯಲ್ಲಿ ತೆಗೆದುಕೊಳ್ಳಲಾಗುತ್ತದೆ. ಇಂತಹ ಕಾಮೆಂಟ್‌ಗಳು ಸಾಮಾನ್ಯ... ರಾಹುಲ್ ಗಾಂಧಿ ಒಬ್ಬ ಧೈರ್ಯಶಾಲಿ ಹಾಗೂ  ಅವರು ಮಾತ್ರ ಎನ್‌ಡಿಎ ಸರಕಾರದೊಂದಿಗೆ ಸ್ಪರ್ಧಿಸಬಲ್ಲರು’’ ಎಂದು ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ಹೇಳಿದ್ದಾರೆ.

Similar News