ಮಗನ ನೆನಪುಗಳನ್ನು ಜೀವಂತವಾಗಿರಿಸಲು ಸಮಾಧಿ ಮೇಲೆ QR ಕೋಡ್‌ ಅಳವಡಿಸಿದ ಪೋಷಕರು!

Update: 2023-03-23 08:43 GMT

ತ್ರಿಶೂರ್: ಕೇರಳದ ತ್ರಿಶೂರ್‌ನ ಚರ್ಚ್‌ನ ಸಮಾಧಿಯೊಂದರ ಮೇಲೆ ಅಳವಡಿಸಲಾಗಿರುವ ಕ್ಯೂಆರ್ ಕೋಡ್ ಸಾಕಷ್ಟು ಗಮನ ಸೆಳೆಯುತ್ತಿದೆ. ಯುವ ಡಾಕ್ಟರ್‌ ಒಬ್ಬರ ನೆನಪುಗಳನ್ನು ಜೀವಂತವಾಗಿರಿಸಲು ಯುವಕನ ಕುಟುಂಬಸ್ಥರು ಮಾಡಿರುವ ಪ್ರಯೋಗ ಇದಾಗಿದ್ದು, ಕ್ಯೂಆರ್‌ ಕೋಡ್‌ ಸ್ಕ್ಯಾನ್‌ ಮಾಡಿದರೆ ಯುವಕನ ಫೋಟೋ, ವಿಡಿಯೋಗಳನ್ನು ಸಂಯೋಜಿಸಿರುವ ವೆಬ್‌ ತಾಣವೊಂದು ತೆರೆದುಕೊಳ್ಳುತ್ತದೆ. 

26 ನೇ ವಯಸ್ಸಿನಲ್ಲಿ ಮೃತಪಟ್ಟ ವೈದ್ಯ ಡಾ. ಐವಿನ್ ಫ್ರಾನ್ಸಿಸ್ ಅವರ ಸಮಾಧಿ ಇದಾಗಿದ್ದು, ಈ ಸಮಾಧಿಯು ತ್ರಿಶೂರಿನ ಕುರಿಯಾಚಿರಾದ ಸೇಂಟ್ ಜೋಸೆಫ್ ಚರ್ಚ್‌ನಲ್ಲಿದೆ. 

ಒಮನ್‌ನಲ್ಲಿ ಖಾಸಗಿ ಕಂಪನಿಯೊಂದರಲ್ಲಿ ಅಧಿಕಾರಿಯಾಗಿದ್ದ ಫ್ರಾನ್ಸಿಸ್ ಮತ್ತು ಒಮನ್‌ನ ಇಂಡಿಯನ್ ಸ್ಕೂಲ್‌ನ ಪ್ರಾಂಶುಪಾಲರಾದ ಲೀನಾ ಅವರ ಪುತ್ರ ಐವಿನ್ ಸಂಗೀತ ಮತ್ತು ಕ್ರೀಡೆಗಳಲ್ಲಿ ಸಕ್ರಿಯರಾಗಿ ಪಾಲ್ಗೊಳ್ಳುತ್ತಿದ್ದರು. ತಮ್ಮ ವೈದ್ಯಕೀಯ ಕೋರ್ಸ್‌ನೊಂದಿಗೆ ಇತರೆ ಪಠ್ಯೇತರ ಚಟುವಟಿಯಲ್ಲಿ ಉತ್ಸಾಹದಿಂದ ಭಾಗವಹಿಸುತ್ತಿದ್ದ ಅವರು, ತಮ್ಮ ಅಭಿನಯದಿಂದ ಜನಪ್ರಿಯರಾಗಿದ್ದರು.

2021 ರಲ್ಲಿ ಐವಿನ್ ಬ್ಯಾಡ್ಮಿಂಟನ್ ಆಡುವಾಗ ಕುಸಿದು‌ ಬಿದ್ದು ಸಾವನ್ನಪ್ಪಿದರು.

"ಅವನ ಜೀವನ ಎಲ್ಲರಿಗೂ ಪ್ರೇರಣೆಯಾಗಬೇಕೆಂದು ನಾವು ಬಯಸಿದ್ದೇವೆ. ಅದಕ್ಕಾಗಿ ಆತನ ಸಮಾಧಿಯ ಮೇಲೆ QR ಕೋಡ್ ಅನ್ನು ಇರಿಸಲು ನಾವು ಯೋಚಿಸಿದ್ದೇವೆ" ಎಂದು ತಂದೆ ಫ್ರಾನ್ಸಿಸ್ ಹೇಳಿದ್ದಾರೆ.

ಕ್ಯೂಆರ್ ಕೋಡ್‌ಗಳನ್ನು ಬಳಸಿ ಹಲವು ಜನರ ಪ್ರೊಫೈಲ್‌ಗಳನ್ನು ಐವಿನ್ ರಚಿಸಿದ್ದರು, ಅವರ ಪೋಷಕರು ಕೂಡಾ ಅದನ್ನೇ ಮಾಡಿದ್ದಾರೆ. 

“ಆತ ನನಗೆ ಮಾಹಿತಿಗಾಗಿ ಸಾಕಷ್ಟು ಕ್ಯೂಆರ್ ಕೋಡ್‌ಗಳನ್ನು ಕಳುಹಿಸುತ್ತಿದ್ದ. ನಾನು QR ಕೋಡ್ ಅನ್ನು ಸ್ಕ್ಯಾನ್ ಮಾಡಿ, ನಾನು ಹುಡುಕುತ್ತಿರುವ ಮಾಹಿತಿಯನ್ನು ಡೌನ್‌ಲೋಡ್ ಮಾಡುತ್ತಿದ್ದೆ ”ಎಂದು ಫ್ರಾನ್ಸಿಸ್‌ ಮೆಲುಕು ಹಾಕಿದ್ದಾರೆ. 

ಕ್ಯೂಆರ್ ಕೋಡ್ ಅನ್ನು ಅಳವಡಿಸುವ ಕಲ್ಪನೆಯು ಐವಿನ್ ಅವರ ಸಹೋದರಿ ಎವೆಲಿನ್ ಫ್ರಾನ್ಸಿಸ್ ರದ್ದಾಗಿತ್ತು ಎಂದು ಫ್ರಾನ್ಸಿಸ್‌ ತಿಳಿಸಿದ್ದಾರೆ. 

"ಸಮಾಧಿಯ ಮೇಲೆ ಐವಿನ್ ಬಗ್ಗೆ ಏನಾದರೂ ಬರೆದು, ಆತ ಮಾಡಿದ್ದನ್ನೆಲ್ಲಾ ವಿವರಿಸಲು ಸಾಕಾಗುವುದಿಲ್ಲ ಎಂದು ನನ್ನ ಮಗಳು ಹೇಳಿದ್ದಳು. ಹಾಗಾಗಿ, ನಾವು ಆತನ ಪ್ರೊಫೈಲ್‌ಗೆ ಕ್ಯೂಆರ್ ಕೋಡ್ ಅನ್ನು ಲಿಂಕ್ ಮಾಡಿ, ಸಮಾಧಿ ಮೇಲೆ ಹಾಕಿದೆವು." ಎಂದು ಫ್ರಾನ್ಸಿಸ್ ಹೇಳಿದರು.

"ಈಗ, ಜನರು ಕೇವಲ ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡಿ ಐವಿನ್ ಯಾವ ರೀತಿಯ ವ್ಯಕ್ತಿ ಎಂದು ತಿಳಿಯಬಹುದು" ಎಂದು ಫ್ರಾನ್ಸಿಸ್ ಹೇಳಿದರು.

ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡುವ ಮೂಲಕ ಜನರು ಐವಿನ್ ನ ಫೋಟೋಗಳು, ಕಾಲೇಜಿನಲ್ಲಿ ಆತ ನೀಡಿರುವ ಕಾರ್ಯಕ್ರಮಗಳು, ಆತನ ಗೆಳೆಯರ ವಲಯ, ಹಾಗೂ ಇತರ ವಿವರಗಳನ್ನು ನೋಡಬಹುದು ಎಂದು ಫ್ರಾನ್ಸಿಸ್ ಹೇಳಿದರು.   ಅಲ್ಲದೆ, ಗಿಟಾರ್‌ ಮತ್ತು ಸಂಗೀತದ ಪ್ರದರ್ಶನಗಳನ್ನು ಕೂಡಾ ನೋಡಬಹುದು ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ: ದಯವಿಟ್ಟು ನೀವು ಈಗಲಾದರೂ ಕೇಳಿಸಿಕೊಳ್ಳುತ್ತೀರಾ?: ಡೆತ್ ನೋಟ್ ನಲ್ಲಿ 17 ವರ್ಷದ ಬಾಲಕಿಯ ಮನವಿ

Similar News