2017ರಲ್ಲಿ ವಿಜಯ್‌ ಮಲ್ಯ ಬಳಿ ಬ್ಯಾಂಕ್‌ಗಳ ಸಾಲ ಮರುಪಾವತಿಸಲು ಬೇಕಾಗುವಷ್ಟು ಹಣವಿತ್ತು: ಸಿಬಿಐ

Update: 2023-03-23 11:24 GMT

ಹೊಸದಿಲ್ಲಿ: 2008ರಿಂದ 2014ರ ಅವಧಿವರೆಗೆ ವಿಜಯ ಮಲ್ಯ (Vijay Mallya) ಬಳಿ ಸಾಕಷ್ಟು ನಿಧಿಯಿತ್ತು. ತಮ್ಮ ಕಿಂಗ್‌ಫಿಷರ್ ಏರ್‌ಲೈನ್ಸ್ ಲಿಮಿಟೆಡ್‌ನಿಂದ ಸಾಲ ನೀಡಿದ ಐಡಿಬಿಐ ಬ್ಯಾಂಕ್ ಸೇರಿದಂತೆ ಇತರೆ ಬ್ಯಾಂಕ್‌ಗಳಿಗೆ ಈಕ್ವಿಟಿ ವರ್ಗಾವಣೆ ಮಾಡುವುದಾಗಿ ಪದೇ ಪದೇ ಭರವಸೆ ನೀಡಿದರೂ, ಅದನ್ನವರು ಪಾಲಿಸಲಿಲ್ಲ ಎಂದು ಸಿಬಿಐ (CBI) ತನ್ನ ಪೂರಕ ದೋಷಾರೋಪ ಪಟ್ಟಿಯಲ್ಲಿ ಹೇಳಿದೆ ಎಂದು hindustantimes.com ವರದಿ ಮಾಡಿದೆ.

ತನ್ನ ಮೂರನೆಯ ಪೂರಕ ಆರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿರುವ ಸಿಬಿಐ, ಸ್ವಿಸ್ ಬ್ಯಾಂಕೊಂದರ ಅಂದಾಜಿನ ಪ್ರಕಾರ, ಆಗಸ್ಟ್, 2017ರ ಅಂತ್ಯದ ವೇಳೆಗೆ ವಿಜಯ್ ಮಲ್ಯ ಬಳಿ ರೂ. 7,500 ಕೋಟಿ ನಿಧಿಯಿತ್ತು. ಅವರು ತಮ್ಮ ಏರ್‌ಲೈನ್ಸ್‌ಗಾಗಿ ಸಾಲ ಪಡೆದಿದ್ದ ಹಣವನ್ನು ಮರುಪಾವತಿಸಲು ಈ ನಿಧಿ ಸಾಕಾಗಿತ್ತು. ಇದಲ್ಲದೆ ಮದ್ಯದ ದೊರೆಯು ಬ್ರಿಟನ್‌ನಲ್ಲಿ 44 ಸಂಸ್ಥೆಗಳನ್ನು ಸ್ಥಾಪಿಸಿದ್ದರು ಮತ್ತು ಅವುಗಳ ಮೂಲಕ ಯೂರೋಪ್‌ನಾದ್ಯಂತ ಹಲವಾರು ಸ್ವತ್ತುಗಳಲ್ಲಿ ಹೂಡಿಕೆ ಮಾಡಿದ್ದರು ಎಂದು ಪ್ರತಿಪಾದಿಸಿದೆ.

ಕಳೆದ ವರ್ಷ ಮುಂಬೈನ ವಿಶೇಷ ಸಿಬಿಐ ನ್ಯಾಯಾಲಯಕ್ಕೆ ಸಲ್ಲಿಸಿದ್ದ ಕೊನೆಯ ಆರೋಪ ಪಟ್ಟಿಯು ಕಳೆದ ವಾರವಷ್ಟೇ ಲಭ್ಯವಾಗಿದೆ. ಬ್ರಿಟನ್, ಮಾರಿಷಸ್ ಹಾಗೂ ಸ್ವಿಝರ್ಲ್ಯಾಂಡ್‌ ತನಿಖಾ ಸಂಸ್ಥೆಗಳಿಂದ ಸ್ವೀಕರಿಸಿರುವ ಮಾಹಿತಿಯನ್ನು ಈ ಆರೋಪ ಪಟ್ಟಿ ಒಳಗೊಂಡಿದೆ. ಸ್ವಿಜರ್ಲೆಂಡ್‌ನ ಸಿಬಿಎಚ್ ಬ್ಯಾಂಕ್ ಪತ್ರವನ್ನು ಆರೋಪ ಪಟ್ಟಿಯಲ್ಲಿ ಉಲ್ಲೇಖಿಸಿರುವ ಸಿಬಿಐ, ಆ ಬ್ಯಾಂಕ್ ಅಧಿಕಾರಿಗಳು ವಿಜಯ್ ಮಲ್ಯ ಸ್ವತ್ತಿನ ಮೌಲ್ಯವನ್ನು ಒಂದು ಶತಕೋಟಿ ಡಾಲರ್ (ಆಗಸ್ಟ್, 2017ರ ಅಂತ್ಯಕ್ಕೆ ಅಂದಾಜು ರೂ. 7,500 ಕೋಟಿ) ಎಂದು ಅಂದಾಜಿಸಿದ್ದರು ಎಂದು ಹೇಳಿದೆ.

ವಿಜಯ್ ಮಲ್ಯ ಮಾರ್ಚ್, 2016ರಲ್ಲಿ ದೇಶದಿಂದ ಪಲಾಯನಗೈದಿದ್ದರು. ಭಾರತೀಯ ತನಿಖಾ ಸಂಸ್ಥೆಗಳು ವಿಜಯ್ ಮಲ್ಯ ಹಸ್ತಾಂತರ ಪ್ರಕರಣದಲ್ಲಿ ಜಯಗಳಿಸಿದ ನಂತರ ಅವರು ಆಶ್ರಯ ನೀಡುವಂತೆ ಬ್ರಿಟನ್ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು. ಅದರಂತೆ, ಈ ಮನವಿ ಕುರಿತು ಅಲ್ಲಿನ ಸರ್ಕಾರ ನಿರ್ಧಾರ ಕೈಗೊಳ್ಳುವವರೆಗೂ ಅವರನ್ನು ಭಾರತಕ್ಕೆ ಹಸ್ತಾಂತರ ಮಾಡಲು ಸಾಧ್ಯವಿಲ್ಲ.

ಇದನ್ನೂ ಓದಿ: ಅದಾನಿ ಸಮೂಹದಲ್ಲಿ ಬಿರುಗಾಳಿ ಎಬ್ಬಿಸಿದ ಬಳಿಕ ಶೀಘ್ರದಲ್ಲಿ ಮತ್ತೊಂದು ವರದಿ ಪ್ರಕಟಿಸುವುದಾಗಿ ಹೇಳಿದ ಹಿಂಡೆನ್‌ ಬರ್ಗ್

Similar News