ಮಾನನಷ್ಟ ಪ್ರಕರಣದಲ್ಲಿ ರಾಹುಲ್‌ ದೋಷಿ: ಲೋಕಸಭಾ ಸದಸ್ಯತ್ವದಿಂದ ಅನರ್ಹಗೊಳ್ಳಲಿದ್ದಾರೆಯೇ ಕಾಂಗ್ರೆಸ್ ನಾಯಕ?

Update: 2023-03-23 12:16 GMT

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ (PM Narendra Modi) ಕುರಿತಂತೆ ಕಾಂಗ್ರೆಸ್‌ ನಾಯಕ ಹಾಗೂ ಸಂಸದ ರಾಹುಲ್‌ ಗಾಂಧಿ (Rahul Gandhi) 2019 ರಲ್ಲಿ ನೀಡಿದ ಹೇಳಿಕೆಯೊಂದಕ್ಕೆ ಸಂಬಂಧಿಸಿದಂತೆ ದಾಖಲಿಸಲಾಗಿದ್ದ ಕ್ರಿಮಿನಲ್‌ ಮತ್ತು ಸಿವಿಲ್‌ ಮಾನಹಾನಿ ಪ್ರಕರಣದಲ್ಲಿ ಇಂದು ಗುಜರಾತ್‌ನ ಸೂರತ್‌ ಜಿಲ್ಲಾ ನ್ಯಾಯಾಲಯವು ನೀಡಿದ ಆದೇಶದಲ್ಲಿ ರಾಹುಲ್‌ ಅವರನ್ನು ಐಪಿಸಿ ಸೆಕ್ಷನ್‌ 499 ಹಾಗೂ 500 ಅನ್ವಯ ದೋಷಿ ಎಂದು ಘೋಷಿಸಲಾಗಿದೆ. ಈ ಸೆಕ್ಷನ್‌ಗಳನ್ವಯ ಗರಿಷ್ಠ ಜೈಲು ಶಿಕ್ಷೆ ಎರಡು ವರ್ಷಗಳಾಗಿವೆ. ಈ ನಡುವೆ ಅವರಿಗೆ ಜಾಮೀನು ಮಂಜೂರಾಗಿದ್ದು ಅವರಿಗೆ ಉನ್ನತ ನ್ಯಾಯಾಲಯದಲ್ಲಿ ಅಪೀಲು ಸಲ್ಲಿಸಲು 30 ದಿನಗಳ ಕಾಲಾವಕಾಶ ನೀಡಲಾಗಿದೆ.

"ಎಲ್ಲಾ ಕಳ್ಳರಿಗೆ ಮೋದಿ ಎಂಬ ಉಪನಾಮೆ ಹೇಗೆ ಇರುತ್ತದೆ?" ಎಂದು ಕರ್ನಾಟಕದ ಕೋಲಾರದಲ್ಲಿ 2019 ಲೋಕಸಭಾ ಚುನಾವಣಾ ಪ್ರಚಾರ ರ್ಯಾಲಿಯಲ್ಲಿ ರಾಹುಲ್‌ ಹೇಳಿದ್ದರೆ. ಬಿಜೆಪಿ ಶಾಸಕ ಹಾಗೂ ಗುಜರಾತ್‌ನ ಮಾಜಿ ಸಚಿವ ಪೂರ್ಣೇಶ್‌ ಮೋದಿ ಎಂಬವರು ರಾಹುಲ್‌ ವಿರುದ್ಧ ದೂರು ದಾಖಲಿಸಿದ್ದರು.

ಈ ಪ್ರಕರಣದಲ್ಲಿ ಈಗ ರಾಹುಲ್‌ ದೋಷಿ ಎಂದು ಘೋಷಿತರಾಗಿರುವುದರಿಂದ ಅವರು ಲೋಕಸಭಾ ಸದಸ್ಯರಾಗಿ ಮುಂದುವರಿಯಬಹುದೇ ಎಂಬ ಪ್ರಶ್ನೆಯಿದೆ.

ದೋಷಿಯೆಂದು ಘೋಷಿತನಾದ ಸಂಸದನೊಬ್ಬ ಅನರ್ಹಗೊಳ್ಳಬಹುದಾದ ಎರಡು ನಿದರ್ಶನಗಳಿವೆ.  ಅಂದರೆ ಜನ ಪ್ರತಿನಿಧಿತ್ವ ಕಾಯಿದೆ 1951 ಇದರ ಸೆಕ್ಷನ್‌ 8(1) ಅಡಿಯಲ್ಲಿ ನಮೂದಿಸಲಾದ ಅಪರಾಧ ಪ್ರಕರಣಗಳಲ್ಲಿ ಸಂಸದರೊಬ್ಬರನ್ನು ದೋಷಿ ಎಂದು ಘೋಷಿಸಲಾಗಿದ್ದರೆ ಅವರನ್ನು ಅನರ್ಹಗೊಳಿಸಬಹುದಾಗಿದೆ. ಈ ಸೆಕ್ಷನ್‌ ಅಡಿಯಲ್ಲಿ ವಿವಿಧ ಗುಂಪುಗಳ ನಡುವೆ ದ್ವೇಷ ಹರಡುವುದು, ಲಂಚ, ಅತ್ಯಾಚಾರಿ, ಮಹಿಳೆಯರ ಮೇಲಿನ ದೌರ್ಜನ್ಯ, ಅನಗತ್ಯ ಪ್ರಭಾವ ಬೀರುವುದು ಇತ್ಯಾದಿ ಉಲ್ಲೇಖವಾಗಿವೆ. ಆದರೆ ರಾಹುಲ್‌ ಅವರನ್ನು ದೋಷಿ ಎಂದು ಘೋಷಿಸಲಾದ ಸೆಕ್ಷನ್‌ಗಳು ಇದರಡಿ ಬರುವುದಿಲ್ಲ.

ಮೇಲಿನ ಕಾಯಿದೆಯ ಸೆಕ್ಷನ್‌ 8(3) ಅಡಿ ನಮೂದಿಸಲಾದ ಅಪರಾಧಗಳಲ್ಲಿ ದೋಷಿ ಎಂದು ಘೋಷಿತರಾಗಿದ್ದರೆ ಸಂಸದರೊಬ್ಬರನ್ನು ಅನರ್ಹಗೊಳಿಸಬಹುದಾಗಿದೆ. ಇದರ ಪ್ರಕಾರ  ಯಾವುದೇ ಅಪರಾಧಕ್ಕಾಗಿ ಎರಡು ವರ್ಷಗಳಿಗಿಂತ ಕಡಿಮೆಯಿಲ್ಲದ ಶಿಕ್ಷೆಗೊಳಗಾಗಿದ್ದರೆ ಹೀಗೆ ಶಿಕ್ಷೆಗೊಳಗಾದ ದಿನದಿಂಧ ಅನರ್ಹಗೊಂಡು, ಬಿಡುಗಡೆಯಾದ ಆರು ವರ್ಷಗಳ ತನಕ ಅನರ್ಹಗೊಳ್ಳುತ್ತಾರೆ." ಹೀಗಿರುವಾಗ ಈಗ ರಾಹುಲ್‌ ಅವರಿಗೆ ಎರಡು ವರ್ಷ ಜೈಲು ಶಿಕ್ಷೆ ಘೋಷಿಸಲಾಗಿರುವುದರಿಂದ ಅವರನ್ನು ಅನರ್ಹಗೊಳಿಸಬಹುದಾಗಿದೆ ಎಂದು ಹೇಳಲಾಗುತ್ತಿದೆ.

ಆದರೆ ಸೆಕ್ಷನ್‌ 8(4) ಪ್ರಕಾರ  ಅಪರಾಧಿ ಎಂದು ಘೋಷಿತರಾದ ಮೂರು ತಿಂಗಳು ಅಥವಾ 90 ದಿನಗಳ ಕಾಲ ಅನರ್ಹತೆ ಊರ್ಜಿತದಲ್ಲಿರುತ್ತದೆ ಹಾಗೂ ಈ ಅವಧಿಯಲ್ಲಿ ಅದರ ವಿರುದ್ಧ ಅಪೀಲು ಸಲ್ಲಿಸಬಹುದಾಗಿದೆ.

ಇದನ್ನೂ ಓದಿ: ದಯವಿಟ್ಟು ನೀವು ಈಗಲಾದರೂ ಕೇಳಿಸಿಕೊಳ್ಳುತ್ತೀರಾ?: ಡೆತ್ ನೋಟ್ ನಲ್ಲಿ 17 ವರ್ಷದ ಬಾಲಕಿಯ ಮನವಿ

Similar News