ಪ್ರೇಮ ವಿವಾಹಗಳಿಗೆ ಹೆತ್ತವರ ಅನುಮತಿ ಕಡ್ಡಾಯಗೊಳಿಸುವಂತೆ ಗುಜರಾತ್‌ನ ಇಬ್ಬರು ಶಾಸಕರ ಆಗ್ರಹ

Update: 2023-03-23 13:00 GMT

ಅಹ್ಮದಾಬಾದ್: ಪ್ರೇಮ ವಿವಾಹಗಳ ಸಂದರ್ಭದಲ್ಲಿ ಹೆತ್ತವರ ಅನುಮತಿಯನ್ನು ಕಡ್ಡಾಯಗೊಳಿಸಬೇಕೆಂದು ಇಬ್ಬರು ಗುಜರಾತ್‌ ಶಾಸಕರು ರಾಜ್ಯ ವಿಧಾನಸಭೆಯಲ್ಲಿ ಬೇಡಿಕೆಯಿಟ್ಟಿದ್ದಾರೆ.

ವಿಧಾನಸಭೆಯ ಬಜೆಟ್‌ ಅಧಿವೇಶನದ ವೇಳೆ ಮಾರ್ಚ್‌ 17 ರಂದು ಬಿಜೆಪಿ ಶಾಸಕ ಫತೇಹ್‌ಸಿಂಗ್‌ ಚೌಹಾಣ್‌ ಮತ್ತು ಕಾಂಗ್ರೆಸ್‌ ಶಾಸಕ ಗೆನಿಬೆನ್‌ ಠಾಕೋರ್‌ ಮೇಲಿನ ಬೇಡಿಕೆಯಿಟ್ಟಿದ್ದಾರೆ. ಇದಕ್ಕಾಗಿ ವಿಹಾಹ ನೋಂದಣಿ ಕಾಯಿದೆ 2009 ಇದನ್ನು ತಿದ್ದುಪಡಿಗೊಳಿಸಬೇಕೆಂದು ಆಗ್ರಹಿಸಿದ ಅವರು ಪ್ರೇಮ ವಿವಾಹಗಳ ಸಂದರ್ಭ ಹೆತ್ತವರ ಸಹಿ ಪಡೆಯುವುದನ್ನು ಕಡ್ಡಾಯಗೊಳಿಸಬೇಕೆಂದು ಕೋರಿದ್ದಾರೆ. ವಿವಾಹವಾಗುವ ಜೋಡಿ ವಾಸಿಸುವ ತಾಲೂಕಿನಲ್ಲಿಯೇ ವಿವಾಹ ನೋಂದಣಿಯಾಗಬೇಕೆಂದು ಅವರು ಹೇಳಿದ್ದಾರೆ.

ಹೆತ್ತವರ ಅನುಮತಿಯಿಲ್ಲದೆ ವಿವಾಹಗಳು ನಡೆಯುವುದರಿಂದ ಅಪರಾಧ ಪ್ರಮಾಣ ಹೆಚ್ಚಾಗಿದೆ ಎಂದೂ ಈ ಶಾಸಕರು ಹೇಳಿಕೊಂಡಿದ್ದಾರೆ. ಪ್ರೇಮ ವಿವಾಹಗಳು ಹೆತ್ತವರ ಅನುಮತಿಯೊಂದಿಗೆ ನೋಂದಣಿಗೊಂಡರೆ ಅಪರಾಧ ಪ್ರಮಾಣಗಳು ಶೇ 50 ರಷ್ಟು ಕಡಿಮೆಯಾಗಬಹುದು ಎಂದೂ ಈ ಶಾಸಕರು ಹೇಳಿದ್ದಾರೆ.

ಕೆಲವೊಮ್ಮೆ ಜೋಡಿ ತಮ್ಮ ದಾಖಲೆಗಳನ್ನು ಮರೆಮಾಡಿ ಇತರ ಜಿಲ್ಲೆಗಳಲ್ಲಿ ವಿವಾಹವಾಗುತ್ತಾರೆ, ಕೊನೆಗೆ ಹುಡುಗಿ ಕಷ್ಟ ಪಡುತ್ತಾಳೆ, ಅಥವಾ ಸಮಸ್ಯೆ ತಾಳಲಾರದೆ ಹೆತ್ತವರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎಂದು ಈ ಶಾಸಕರು ಹೇಳಿದ್ದಾರೆ.

ʻʻನಾವು ಪ್ರೇಮ ವಿವಾಹದ ವಿರೋಧಿಗಳಲ್ಲ, ಆದರೆ ಹೆತ್ತವರ ಅನುಮತಿಯಿಲ್ಲದೆ ನಡೆಯುವ ವಿವಾಹಗಳಿಗೆ ನಮ್ಮ ವಿರೋಧವಿದೆ ಎಂದು ಅವರು ಹೇಳಿದ್ದಾರೆ.

Similar News