ಸರಕಾರವು ನೇಮಕಾತಿಗಳನ್ನು ತಡೆ ಹಿಡಿಯುತ್ತಿರುವುದು ‘ಅತ್ಯಂತ ಕಳವಳಕಾರಿ’: ಸುಪ್ರೀಂಕೋರ್ಟ್ ಕೊಲೀಜಿಯಂ

Update: 2023-03-23 16:27 GMT

ಹೊಸದಿಲ್ಲಿ, ಮಾ. 23: ನ್ಯಾಯಾಧೀಶರಾಗಿ ನೇಮಕಗೊಳಿಸಲು ತಾನು ಶಿಫಾರಸು ಮಾಡಿರುವ ಅಭ್ಯರ್ಥಿಗಳ ಹೆಸರುಗಳನ್ನು ಕೇಂದ್ರ ಸರಕಾರವು ತಡೆಹಿಡಿಯಬಾರದು ಎಂದು ಸುಪ್ರೀಂ ಕೋರ್ಟ್ ಕೊಲೀಜಿಯಮ್ ಮಂಗಳವಾರ ಹೇಳಿದೆ.

ವಕೀಲ ಆರ್. ಜಾನ್ ಸತ್ಯನ್ರನ್ನು ಮದರಾಸು ಹೈಕೋರ್ಟ್ ನ್ಯಾಯಾಧೀಶರಾಗಿ ನೇಮಕ ಮಾಡುವಂತೆ ತಾನು ಮಾಡಿರುವ ಶಿಫಾರಸನ್ನು ಪ್ರಸ್ತಾಪಿಸುತ್ತಾ, ಮುಖ್ಯ ನ್ಯಾಯಾಧೀಶ ಡಿ.ವೈ. ಚಂದ್ರಚೂಡ್ ನೇತೃತ್ವದ ಕೊಲೀಜಿಯಮ್ ಈ ಹೇಳಿಕೆ ನೀಡಿದೆ. ಸತ್ಯನ್ರ ಹೆಸರನ್ನು ಕೊಲೀಜಿಯಮ್ ಜನವರಿ 17ರಂದು ಮತ್ತೊಮ್ಮೆ ದೃಢೀಕರಿಸಿದೆ. ಆದರೂ ಅವರ ನೇಮಕಾತಿಗೆ ಸರಕಾರ ಇನ್ನೂ ಅಂಗೀಕಾರ ನೀಡಿಲ್ಲ.

ತನ್ನ ಶಿಫಾರಸುಗಳನ್ನು ಸರಕಾರವು ತಡೆಹಿಡಿಯಬಾರದು ಅಥವಾ ನಿರ್ಲಕ್ಷಿಸಬಾರದು, ಯಾಕೆಂದರೆ ‘‘ಹೀಗೆ ಮಾಡಿದರೆ ಅವರ ಹಿರಿತನಕ್ಕೆ ಧಕ್ಕೆಯಾಗುತ್ತದೆ ಹಾಗೂ ನಂತರ ಶಿಫಾರಸುಗೊಳ್ಳುವವರು ಹಿರಿತನದಲ್ಲಿ ಅವರನ್ನು ಹಿಂದಿಕ್ಕಿ ಮುಂದುವರಿಯುತ್ತಾರೆ’’ ಎಂದು ಕೊಲೀಜಿಯಮ್ ಹೇಳಿದೆ.

‘‘ಈ ಹಿಂದೆ ಶಿಫಾರಸು ಮಾಡಲಾಗಿರುವ ಅಭ್ಯರ್ಥಿಗಳ ಹಿರಿತನ ನಷ್ಟವಾಗಿರುವುದನ್ನು ಕೊಲೀಜಿಯಮ್ ಗಮನಿಸಿದೆ ಹಾಗೂ ಇದು ಅತ್ಯಂತ ಕಳವಳದ ಸಂಗತಿಯಾಗಿದೆ’’ ಎಂದು ಅದು ಹೇಳಿದೆ.

‘ದ ಕ್ವಿಂಟ್’ ವೆಬ್ಸೈಟ್ನ ವರದಿಯೊಂದನ್ನು ಸತ್ಯನ್ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದರು. ಆ ವರದಿಯು ಪ್ರಧಾನಿ ನರೇಂದ್ರ ಮೋದಿಯನ್ನು ಟೀಕಿಸಿತ್ತು. ಹಾಗಾಗಿ, ಇಂಟಲಿಜನ್ಸ್ ಬ್ಯೂರೋ ಸತ್ಯನ್ ಬಗ್ಗೆ ನಕಾರಾತ್ಮಕ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ ಎಂಬುದಾಗಿ ತನ್ನ ಜನವರಿ 17ರ ನಿರ್ಣಯದಲ್ಲಿ ಕೊಲೀಜಿಯಮ್ ಹೇಳಿತ್ತು.

ಮಂಗಳವಾರ, ಆರ್. ಶಕ್ತಿವೇಲ್, ಪಿ. ಧನಬಾಲ್, ಚಿನ್ನಸಾಮಿ ಕುಮಾರಪ್ಪನ್ ಮತ್ತು ಕೆ. ರಾಜಶೇಖರ್- ಈ ನಾಲ್ವರು ನ್ಯಾಯಾಧೀಶರಿಗೆ ಮದರಾಸು ಹೈಕೋರ್ಟ್ನ ನ್ಯಾಯಾಧೀಶರಾಗಿ ಭಡ್ತಿ ನೀಡಲು ಕೊಲೀಜಿಯಮ್ ಶಿಫಾರಸು ಮಾಡಿದೆ. ಹಿರಿಯ ವಕೀಲ ಹರ್ಪ್ರೀತ್ ಸಿಂಗ್ ಬ್ರಾರ್ರನ್ನು ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್ನ ನ್ಯಾಯಾಧೀಶರಾಗಿ ನೇಮಿಸುವ ತನ್ನ ಶಿಫಾರಸನ್ನೂ ಅದು ಪುನರುಚ್ಚರಿಸಿದೆ.

Similar News