ಅಮೃತಪಾಲ್ ಸಿಂಗ್ ಪ್ರಕರಣ: ತರಣ್‌ತರಣ್, ಫಿರೋಝ್‌ಪುರದಲ್ಲಿ ಮೊಬೈಲ್ ಇಂಟರ್‌ನೆಟ್ ಸೇವೆ ನಿರ್ಬಂಧ ವಿಸ್ತರಣೆ

Update: 2023-03-23 17:20 GMT

ಚಂಡಿಗಢ, ಮಾ. 23: ಪಂಜಾಬ್ ಸರಕಾರ ತರಣ್ ತರಣ್ ಹಾಗೂ ಫಿರೋಝ್‌ಪುರ ಜಿಲ್ಲೆಗಳಲ್ಲಿ ಶುಕ್ರವಾರ ಮಧ್ಯಾಹ್ನದ ವರೆಗೆ ಮೊಬೈಲ್ ಇಂಟರ್‌ನೆಟ್ ಹಾಗೂ ಎಸ್‌ಎಂಎಸ್ ಸೇವೆಗಳಿಗೆ ನಿರ್ಬಂಧ ವಿಧಿಸಿದೆ.

ಆದರೆ, ಮೊಗಾ, ಸಂಗ್ರೂರ್, ಅಮೃತಸರದ ಅಜ್ನಲಾ ಉಪ ವಿಭಾಗ ಹಾಗೂ ಮೊಹಲಿಯ  ಕೆಲವು ಪ್ರದೇಶಗಳಲ್ಲಿ ಈ ನಿರ್ಬಂದವನ್ನು ಹಿಂದೆ ತೆಗೆದುಕೊಂಡಿದೆ. ಪಂಜಾಬ್‌ನ ಉಳಿದ ಭಾಗಗಳಲ್ಲಿ ಮೊಬೈಲ್ ಇಂಟರ್‌ನೆಟ್ ಸೇವೆಯನ್ನು ಮಾರ್ಚ್ 21ರಂದು ಪುನರಾರಂಭಿಸಲಾಗಿತ್ತು. 

ಸಾರ್ವನಿಕ ಸುರಕ್ಷೆ, ಹಿಂಸಾಚಾರಕ್ಕೆ ಪ್ರಚೋದಿಸುವುದನ್ನು  ಹಾಗೂ ಶಾಂತಿ, ಸುವ್ಯವಸ್ಥೆಗೆ ಯಾವುದೇ ಅಡ್ಡಿ ಉಂಟಾಗುವುದನ್ನು ತಡೆಯಲು ತರಣ್ ತರಣ್ ಹಾಗೂ ಫಿರೋಝ್‌ಪುರ ಜಿಲ್ಲೆಯಲ್ಲಿ ಮೊಬೈಲ್ ಇಂಟರ್‌ನೆಟ್ ಸೇವೆಗಳನ್ನು ನಿರ್ಬಂಧಿಸಲಾಗಿದೆ ಎಂದು ರಾಜ್ಯ ಗೃಹ ವ್ಯವಹಾರಗಳ ಹಾಗೂ ನ್ಯಾಯ ಖಾತೆ ಗುರುವಾರ ಜಾರಿಗೊಳಿಸಿದ ಆದೇಶ ಹೇಳಿದೆ. 

ಪಂಜಾಬಿನ ಭೌಗೋಳಿಕ ವ್ಯಾಪ್ತಿಯಲ್ಲಿ ಎಲ್ಲ ಮೊಬೈಲ್ ಇಂಟರ್‌ನೆಟ್ ಸೇವೆಗಳು, ಎಲ್ಲ ಎಸ್‌ಎಂಎಸ್ ಸೇವೆಗಳು (ಬ್ಯಾಂಕಿಂಗ್ ಹಾಗೂ ಮೊಬೈಲ್ ರಿಚಾರ್ಜ್ ಸೇವೆಗಳನ್ನು ಹೊರತುಪಡಿಸಿ) ಹಾಗೂ ವಾಯ್ಸ್ ಕಾಲ್ ಹೊರತುಪಡಿಸಿ ಮೊಬೈಲ್ ನೆಟ್‌ವರ್ಕ್‌ನಲ್ಲಿ ಎಲ್ಲ ಡೋಂಗ್ಲ್ ಸೇವೆಗಳನ್ನು ತರಣ್ ತರಣ್ ಹಾಗೂ ಫಿರೋಝ್‌ಪುರ ಜಿಲ್ಲೆಗಳಲ್ಲಿ ಮಾರ್ಚ್ ೨೩ರಿಂದ ಮಾರ್ಚ್ ೨೪ರ ವರೆಗೆ ನಿರ್ಬಂಧಿಸಲಾಗಿದೆ ಎಂದು ಸರಕಾರ ಹೇಳಿದೆ.

Similar News