ರಾಹುಲ್ ಗಾಂಧಿಗೆ ಶಿಕ್ಷೆ ವಿಧಿಸಿರುವುದನ್ನು ವಿರೋಧಿಸಿ ರಾಷ್ಟ್ರಪತಿ ಭವನಕ್ಕೆ ಪ್ರತಿಪಕ್ಷಗಳ ಮೆರವಣಿಗೆ

Update: 2023-03-24 09:35 GMT

ಹೊಸದಿಲ್ಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಶಿಕ್ಷೆ ವಿಧಿಸಿದ್ದನ್ನು ವಿರೋಧಿಸಿ ಪ್ರತಿಪಕ್ಷಗಳು ಶುಕ್ರವಾರ  ವಿಜಯ್ ಚೌಕ್‌ನಿಂದ ರಾಷ್ಟ್ರಪತಿ ಭವನದತ್ತ ಮೆರವಣಿಗೆ ನಡೆಸುತ್ತಿದ್ದಾರೆ. ನಾಯಕರು ತಮ್ಮ ಗಮ್ಯಸ್ಥಾನವನ್ನು ತಲುಪದಂತೆ ತಡೆಯುವ ಪ್ರಯತ್ನವಾಗಿ ಭಾರೀ ಭದ್ರತೆಯನ್ನು  ನಿಯೋಜನೆ ಮಾಡಲಾಗಿದೆ.

2019 ರ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯಲ್ಲಿ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರಿಗೆ ಸೂರತ್ ನ್ಯಾಯಾಲಯ ಶಿಕ್ಷೆ ವಿಧಿಸಿರುವುದನ್ನು ಪ್ರತಿಭಟಿಸುತ್ತಿರುವ ವಿಪಕ್ಷಗಳು ಅದಾನಿ-ಹಿಂಡನ್‌ಬರ್ಗ್ ವಿವಾದದ ಬಗ್ಗೆ ಜಂಟಿ ಸಂಸದೀಯ ಸಮಿತಿ (ಜೆಪಿಸಿ) ತನಿಖೆಗೆ ತಮ್ಮ ಬೇಡಿಕೆಯನ್ನು ಪುನರುಚ್ಚರಿಸುವ ಮೂಲಕ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿ ಮಾಡಲು ಸಮಯ ಕೇಳಿವೆ.

"ಪ್ರಜಾಪ್ರಭುತ್ವ ಅಪಾಯದಲ್ಲಿದೆ"  ದೊಡ್ಡ ಬ್ಯಾನರ್‌ನೊಂದಿಗೆ ಸಾಗುತ್ತಿದ್ದ ಸಂಸದರನ್ನು ಬಂಧಿಸಿ ಬಸ್‌ನಲ್ಲಿ ಸಮೀಪದ ಪೊಲೀಸ್ ಠಾಣೆಗಳಿಗೆ ಕರೆದೊಯ್ಯುತ್ತಿದ್ದಂತೆ ಮೆರವಣಿಗೆ ಚದುರಿಹೋಯಿತು.

ಮೆರವಣಿಗೆಗೆ ಅನುಮತಿ ಪಡೆದಿರಲಿಲ್ಲ, ರಾಷ್ಟ್ರಪತಿ ಅವರು  ಭೇಟಿಗೆ  ಸಮಯ ನೀಡಿರಲಿಲ್ಲ ಎಂದು  ಪೊಲೀಸರು ತಿಳಿಸಿದ್ದಾರೆ.

 ಕೇಂದ್ರ ಸರಕಾರದ  ರಾಜಕೀಯ ಸೇಡಿನ ಕ್ರಮ ಎಂದು ಆರೋಪಿಸಿ ಹಲವು ರಾಜ್ಯಗಳಲ್ಲಿ ಕಾಂಗ್ರೆಸ್ ಘಟಕಗಳು ಏಕಕಾಲದಲ್ಲಿ ಪ್ರತಿಭಟನೆ ನಡೆಸಿವೆ.

ಸೂರತ್ ಕೋರ್ಟ್ ತೀರ್ಪಿನ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್ ಮತ್ತು ಪಕ್ಷದ ಇತರ ಮುಖಂಡರು ಮತ್ತು ಕಾರ್ಯಕರ್ತರನ್ನು ಕರ್ನಾಟಕ ಪೊಲೀಸರು ಬಂಧಿಸಿದ್ದಾರೆ.

ರಾಹುಲ್ ಗಾಂಧಿ ಅವರ 'ಮೋದಿ ಉಪನಾಮ' ಹೇಳಿಕೆಗಾಗಿ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯಲ್ಲಿ ದೋಷಾರೋಪಣೆ ಮಾಡಿರುವುದನ್ನು ವಿರೋಧಿಸಿ ಪಕ್ಷದ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದು, ದಿಲ್ಲಿಯ ಕಾಂಗ್ರೆಸ್ ಪ್ರಧಾನ ಕಚೇರಿಯ ಹೊರಗೆ ಭಾರೀ ಭದ್ರತೆಯನ್ನು ಏರ್ಪಡಿಸಲಾಗಿದೆ.

ರಾಹುಲ್  ಗಾಂಧಿಯವರು  'ಕಳ್ಳ' ಹೇಳಿಕೆಯ ಮೂಲಕ ಒಬಿಸಿ ಸಮುದಾಯವನ್ನು ಅವಮಾನಿಸಿದ ನಂತರ ಸ್ವತಂತ್ರ ನ್ಯಾಯಾಂಗದಿಂದ ಶಿಕ್ಷೆಯಾಗಿದೆ ಎಂದು ಬಿಜೆಪಿ ಹೇಳಿದೆ.

Similar News