ಬೃಹತ್‌ ಡೇಟಾ ಸೋರಿಕೆ ಜಾಲ ಬೇಧಿಸಿದ ಪೊಲೀಸರು; 7 ಮಂದಿಯ ಬಂಧನ

1.2 ಕೋಟಿ ವಾಟ್ಸ್ ಆ್ಯಪ್‌, 17 ಲಕ್ಷ ಫೇಸ್ಬುಕ್‌ ಬಳಕೆದಾರರು ಟಾರ್ಗೆಟ್‌

Update: 2023-03-24 09:28 GMT

ಹೊಸದಿಲ್ಲಿ: ದೇಶಾದ್ಯಂತದ ಸುಮಾರು 16.8 ಕೋಟಿ ನಾಗರಿಕರ ಖಾಸಗಿ ಮತ್ತು ಗೌಪ್ಯ ಡೇಟಾ ಹಾಗೂ ಸುಮಾರು 2.55 ಲಕ್ಷ ರಕ್ಷಣಾ ಸಿಬ್ಬಂದಿಗಳ ಮಾಹಿತಿ ಸೇರಿದಂತೆ ಸರಕಾರದ ಮತ್ತು ಪ್ರಮುಖ ಸಂಶ್ಥೆಗಳ ಸೂಕ್ಷ್ಮ ಮಾಹಿತಿಯ ಕಳ್ಳತನ ಹಾಗೂ ಮಾರಾಟದಲ್ಲಿ ಶಾಮೀಲಾದ ಏಳು ಜನರ ಗ್ಯಾಂಗ್‌ ಒಂದನ್ನು ಸೈಬರಾಬಾದ್‌ ಪೊಲೀಸರು ಬಂಧಿಸಿದ್ದಾರೆ ಹಾಗೂ ಈ ಮೂಲಕ ರಾಷ್ಟ್ರೀಯ ಭದ್ರತೆ ಮೇಲೆ ಗಂಭೀರ ಪರಿಣಾಮ ಬೀರಬಹುದಾದ ಬೃಹತ್‌ ಡೇಟಾ ಸೋರಿಕೆ ಜಾಲವನ್ನು ಬೇಧಿಸಿದ್ದಾರೆ.

ಸುಮಾರು 1.2 ಕೋಟಿ ವಾಟ್ಸ್ ಆ್ಯಪ್‌ (WhatsApp) ಬಳಕೆದಾರರು, 17 ಲಕ್ಷ ಫೇಸ್ಬುಕ್‌ (Facebook) ಬಳಕೆದಾರರು, 12 ಲಕ್ಷ ಸಿಬಿಎಸ್‌ಇ ವಿದ್ಯಾರ್ಥಿಗಳು, 40 ಲಕ್ಷ ಉದ್ಯೋಗ ಅರಸುವವರು, 1.47 ಕೋಟಿ ಕಾರು ಮಾಲಕರು, 11 ಲಕ್ಷ ಸರಕಾರಿ ಉದ್ಯೋಗಿಗಳು ಹಾಗೂ 15 ಲಕ್ಷ ಐಟಿ ವೃತ್ತಿಪರರ ಮಾಹಿತಿ ಸೋರಿಕೆಯಾಗಿದೆ ಎಂದು ಹೇಳಲಾಗಿದೆ.

ಆರೋಪಿಗಳು ಸುಮಾರು 140 ವಿಧದ ಮಾಹಿತಿಯನ್ನು ಮಾರಾಟ ಮಾಡುತ್ತಿದ್ದರೆಂದು ಪೊಲೀಸರು ತಿಳಿಸಿದ್ದು ರಕ್ಷಣಾ ಸಿಬ್ಬಂದಿಗಳ ಸೂಕ್ಷ್ಮ ಮಾಹಿತಿ ಹಾಗೂ ನಾಗರಿಕರ, ನೀಟ್‌ ವಿದ್ಯಾರ್ಥಿಗಳ ಮೊಬೈಲ್‌ ಸಂಖ್ಯೆಗಳನ್ನು ಮಾರಾಟ ಮಾಡುತ್ತಿದ್ದರು ಎಂದು ಸೈಬರಾಬಾದ್‌ ಪೊಲೀಸ್‌ ಆಯುಕ್ತ ಎಂ ಸ್ಟೀಫನ್‌ ರವೀಂದ್ರ ತಿಳಿಸಿದ್ದಾರೆ.

ಏಳು ಡೇಟಾ ಬ್ರೋಕರ್‌ಗಳನ್ನು ದಿಲ್ಲಿಯಿಂದ  ಬಂಧಿಸಲಾಗಿದೆ. ನೊಯ್ಡಾ ಮತ್ತಿತರ ಸ್ಥಳಗಳ ಕಾಲ್‌ ಸೆಂಟರ್‌ಗಳಿಂದ ಅವರು ಕಾರ್ಯಾಚರಿಸುತ್ತಿದ್ದರು, ಅವರು ಡೇಟಾವನ್ನು ಕನಿಷ್ಠ 100 ವಂಚಕರಿಗೆ ಸೈಬರ್‌ ಅಪರಾಧ ನಡೆಸುವ ಸಲುವಾಗಿ ಮಾರಾಟ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ರಕ್ಷಣಾ ಸಿಬ್ಬಂದಿಯ ರ್ಯಾಂಕ್‌, ಅವರ ಇಮೇಲ್‌ ಐಡಿ ಅವರ ಪೋಸ್ಟಿಂಗ್‌ ಸ್ಥಳಗಳ ಮಾಹಿತಿಯನ್ನೂ ಕದಿಯಲಾಗಿದೆ. ಆರೋಪಿಗಳು ಸಂಪರ್ಕ ವಿವರಗಳ ಡೈರೆಕ್ಟರಿ ಸೇವಾ ಪೂರೈಕೆದಾರ ಮತ್ತಿತರ ವೇದಿಕೆಗಳ ಮುಖಾಂತರ ಡೇಟಾ ಮಾರಾಟಲಾಗುತ್ತಿತ್ತು, ಸುಮಾರು 50,000 ನಾಗರಿಕರ ಡೇಟಾವನ್ನು ರೂ. 2,000 ರಷ್ಟು ಕಡಿಮೆ ಬೆಲೆಗೆ ಮಾರಾಟ ಮಾಡಿದ್ದಾರೆಂದೂ ಪೊಲೀಸರು ಕಂಡುಕೊಂಡಿದ್ದಾರೆ.

ವಿವಿಧ ಸಂಸ್ಥೆಗಳಿಂದ ಸೋರಿಕೆಯಾದ ಡೇಟಾವನ್ನು  ಒಟ್ಟುಗೂಡಿಸಿದ ಆರೋಪಿಗಳು ಸೇವಾ ಪೂರೈಕೆದಾರ ಏಜಂಟರಾಗಿ ನೋಂದಣಿ ಮಾಡಿಕೊಂಡಿದ್ದರಲ್ಲದೆ ನಂತರ ಡೇಟಾವನ್ನು ಸೈಬರ್‌ ಅಪರಾಧಿಗಳಿಗೆ ಮಾರಾಟ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ಮಾನನಷ್ಟ ಪ್ರಕರಣದಲ್ಲಿ ದೋಷಿ ಎಂದು ಸಾಬೀತಾದ ಮರುದಿನವೇ ಸಂಸತ್ತಿನಿಂದ ರಾಹುಲ್‌ ಗಾಂಧಿ ಅನರ್ಹ 

Similar News