×
Ad

'ದೇರಮಾಮುನ ದೂರನೋಟೊಲು 'ತುಳು ಕಾದಂಬರಿಗೆ ಪಣಿಯಾಡಿ ಪ್ರಶಸ್ತಿ

Update: 2023-03-24 15:04 IST

ಉಡುಪಿ, ಮಾ.24: ಉಡುಪಿ ತುಳುಕೂಟ ವತಿಯಿಂದ ನೀಡಲಾಗುವ 2022-2023ನೇ ಸಾಲಿನ ಪ್ರತಿಷ್ಠಿತ ಎಸ್.ಯು.ಪಣಿಯಾಡಿ ಸ್ಮಾರಕ ಪಣಿಯಾಡಿ ತುಳು ಕಾದಂಬರಿ ಪ್ರಶಸ್ತಿಗೆ ಮಂಗಳೂರು ಕಾವೂರಿನ ಕನ್ನಡ, ತುಳು ಸಾಹಿತಿ ಯಶೋದಾ ಮೋಹನ್ ಅವರ 'ದೇರಮಾಮುನ ದೂರನೋಟೊಲು' ಕಾದಂಬರಿ ಆಯ್ಕೆಯಾಗಿದೆ. ತುಳು ಸಾಹಿತ್ಯ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಹಿರಿಯ ಸಾಹಿತಿ ದಿ.ಎಸ್.ಯು.ಪಣಿಯಾಡಿ ಸ್ವಾತಂತ್ರ್ಯ ಹೋರಾಟಗಾರರಾಗಿಯೂ ಗುರುತಿಸಿಕೊಂಡವರು. ಇವರ ಸವಿನೆನಪಿಗಾಗಿ ಉಡುಪಿ ತುಳುಕೂಟವು ಕಳೆದ 28 ವರ್ಷಗಳಿಂದ ಪಣಿಯಾಡಿ ತುಳು ಕಾದಂಬರಿ ಪ್ರಶಸ್ತಿ ನೀಡುತ್ತಿದೆ.

ಸಾಹಿತಿ ಯಶೋದಾ ಮೋಹನ್ ಮಂಗಳೂರು ಆಕಾಶವಾಣಿ ಸೇರಿದಂತೆ ವಿವಿಧ ಪತ್ರಿಕೆಗಳಿಗೆ ಹಲವಾರು ಕಥೆ, ಕವನ, ಲೇಖನಗಳನ್ನು ರಚಿಸಿ ಸಾಹಿತ್ಯ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದಾರೆ. ಕರ್ನಾಟಕ ತುಳು ಸಾಹಿತ್ಯ ಅಕಾಡಮಿ ವತಿಯಿಂದ ನಡೆದ ಕಥಾ ಸ್ಪರ್ಧೆಯಲ್ಲಿ ಪ್ರಥಮ ಪ್ರಶಸ್ತಿ ಗಳಿಸಿದ್ದಾರೆ. ಇವರ ಕತೆಗಳು ತೆಲುಗು, ಕೊಂಕಣಿ ಭಾಷೆಗಳಿಗೆ ಅನುವಾದಗೊಂಡಿವೆ.

ಕರಾವಳಿ ಲೇಖಕಿಯರ ಮತ್ತು ವಾಚಕಿಯರ ಸಂಘದ ಸದಸ್ಯರಾಗಿ ರುವ ಇವರು, ತುಳು ಐಸಿರಿ ಸಂಸ್ಥೆಯಲ್ಲಿ ಕೋಶಾಧಿಕಾರಿಯಾಗಿದ್ದರು. ಮಾತ್ರವಲ್ಲದೆ ತುಳುವಿಕಿಪಿಡಿಯಾಗೆ ಲೇಖನಗಳನ್ನು ಬರೆದ ಅನುಭವ ಹೊಂದಿದ್ದಾರೆ.

ಪಣಿಯಾಡಿ ಕಾದಂಬರಿ ಸ್ಪರ್ಧೆಯ ತೀರ್ಪುಗಾರರಾಗಿ ನಿವೃತ್ತ ಉಪನ್ಯಾಸಕ ಡಾ.ಗಣನಾಥ ಎಕ್ಕಾರು, ಹಿರಿಯ ಸಾಹಿತಿ ಅಂಶುಮಾಲಿ, ಪತ್ರಕರ್ತ ಹಾಗೂ ನಾಟಕಕಾರ ಪ್ರಕಾಶ ಸುವರ್ಣ ಕಟಪಾಡಿ ಸಹಕರಿಸಿದ್ದರು ಎಂದು ತುಳುಕೂಟ ಉಡುಪಿ ಅಧ್ಯಕ್ಷ ಬಿ.ಜಯಕರ್ ಶೆಟ್ಟಿ ಇಂದ್ರಾಳಿ, ಕಾದಂಬರಿ ಪ್ರಶಸ್ತಿ ಸಂಚಾಲಕಿ ಶಿಲ್ಪಾ ಜೋಶಿ, ಪ್ರಧಾನ ಕಾರ್ಯದರ್ಶಿ ಗಂಗಾಧರ್ ಕಿದಿಯೂರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Similar News