ಮುಂಬೈ: ಅತಿಕ್ರಮ ನಿರ್ಮಾಣವೆಂದು ದರ್ಗಾ ಕಟ್ಟಡ ಕೆಡವಿದ ಬಿಎಂಸಿ

Update: 2023-03-24 15:27 GMT

ಮುಂಬೈ: ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್‌ಎಸ್) ಅಧ್ಯಕ್ಷ ರಾಜ್ ಠಾಕ್ರೆ ಅವರು ಅತಿಕ್ರಮಣ ಜಮೀನಿನಲ್ಲಿ ನಿರ್ಮಿಸಲಾಗಿದೆ ಎಂದು ಆರೋಪಿಸಿದ ಬಳಿಕ ಮಾಹಿಮ್ ಕರಾವಳಿ ಪ್ರದೇಶದಲ್ಲಿರುವ ದರ್ಗಾದ ಕಟ್ಟಡವನ್ನು ಬೃಹನ್‌ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ಗುರುವಾರ ನೆಲಸಮಗೊಳಿಸಿದೆ.

ಎಂಎನ್‌ಎಸ್ ಪಕ್ಷದ ರ್ಯಾಲಿಯ ವೇಳೆ ಠಾಕ್ರೆ ಅವರು‌ ತಮ್ಮ ಭಾಷಣದ ನಡುವೆ, ಕಡಲ ಕಿನಾರೆಯಲ್ಲಿರುವ ಮಾಹಿಮ್‌ ದರ್ಗಾದ ಕಟ್ಟಡದ ವೀಡಿಯೊವನ್ನು ಪ್ರದರ್ಶಿಸಿ, ಈ ಕಟ್ಟಡ ಅಕ್ರಮವಾಗಿ ನಿರ್ಮಿಸಲಾಗಿದೆ, ಇದರ ವಿರುದ್ಧ ಅಧಿಕಾರಿಗಳು ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದ್ದರು. 

ಭಾಷಣ ಮುಗಿದ ಕೂಡಲೇ ಪೊಲೀಸ್ ಕಮಿಷನರ್ ವಿವೇಕ್ ಫನ್ಸಾಲ್ಕರ್ ಅವರು ಜಂಟಿ ಕಮಿಷನರ್ (ಕಾನೂನು ಮತ್ತು ಸುವ್ಯವಸ್ಥೆ) ಸತ್ಯನಾರಾಯಣ್ ಮತ್ತು ಹೆಚ್ಚುವರಿ ಕಮಿಷನರ್ (ಕೇಂದ್ರ ಪ್ರದೇಶ) ಅನಿಲ್ ಕುಂಬಾರೆ ಅವರಲ್ಲಿ ವರದಿಯನ್ನು ಸಲ್ಲಿಸುವಂತೆ ಕೇಳಿದ್ದರು. ಗುರುವಾರ ಬೆಳಿಗ್ಗೆ, ಬಿಎಂಸಿಯ ಸಿಬ್ಬಂದಿ ಮತ್ತು ಕಲೆಕ್ಟರೇಟ್ ಸಿಬ್ಬಂದಿ ಮಾಹಿಮ್‌ಗೆ ತೆರಳಿ ದರ್ಗಾದ ಕಟ್ಟಡವನ್ನು ಕೆಡವಿದ್ದಾರೆ ಎಂದು hindustantimes.com ವರದಿ ಮಾಡಿದೆ. 

ಈ ಕಟ್ಟಡವನ್ನು ಹಜತ್ ಹಿದರ್ ಹಯಾತುನ್ ನಬಿ ಟ್ರಸ್ಟ್ ನಿರ್ವಹಿಸುತ್ತಿದೆ ಎಂದು ಮಾಹಿಮ್ ದರ್ಗಾದ ಟ್ರಸ್ಟಿ ಸೊಹೈಲ್ ಖಾಂಡ್ವಾನಿ ಹೇಳಿದ್ದಾರೆ. ಇದು ಹಝ್ರತ್‌ ಮಖ್ದೂಮ್ ಷಾ ಅವರು "ಆಧ್ಯಾತ್ಮಿಕ ಪ್ರವಚನ" ನೀಡಲು ಹೋಗುತ್ತಿದ್ದ ಸ್ಥಳಗಳಲ್ಲಿ ಒಂದಾಗಿದೆ ಎಂದು ಅವರು ಹೇಳಿದ್ದಾರೆ.

Similar News