×
Ad

ಮಣಿಪಾಲ: ಎ.1ಕ್ಕೆ ಅಂತರ್ಗತ ಶಿಕ್ಷಣ, ಕೌಶಲ ತರಬೇತಿ ಕಾರ್ಯಾಗಾರ

Update: 2023-03-24 21:10 IST

ಉಡುಪಿ, ಮಾ.24: ಜಿಲ್ಲೆಯಲ್ಲಿ ವಿಶೇಷ ಮಕ್ಕಳಿಗೆ ಕಲಿಸುತ್ತಿರುವ ವಿಶೇಷ ಶಿಕ್ಷಕರು, ವಿಶೇಷ ಮಕ್ಕಳ ಹೆತ್ತವರು ಹಾಗೂ ಪಾಲಕರಿಗಾಗಿ ಜಿಲ್ಲಾ ಮಟ್ಟದ ವಿಶೇಷ ತರಬೇತಿ ಕಾರ್ಯಕ್ರಮ ‘ಅಂತರ್ಗತ ಶಿಕ್ಷಣ ಹಾಗೂ ಕೌಶಲ ತರಬೇತಿ ಕಾರ್ಯಾಗಾರ’ ಎ.1ರಂದು ಮಣಿಪಾಲ ವಿವಿಯ ಇಂಟರಾಕ್ಟ್ ಹಾಲ್‌ನಲ್ಲಿ ನಡೆಯಲಿದೆ.

ಮೈ ಟ್ರೂ ಸ್ಕಿಲ್ (ಎಂಟಿಎಸ್) ಎಂಬ ಸಂಸ್ಥೆಯು ಮಣಿಪಾಲ ಮಾಹೆಯ ವಿಶೇಷ ಚೇತನ ಮಕ್ಕಳ ಪುನಶ್ಚೇತನ ಹಾಗೂ ತರಬೇತಿ ಕೇಂದ್ರ ‘ಆಸರೆ’ಯ ಸಹ ಯೋಗದೊಂದಿಗೆ ಈ ಕಾರ್ಯಾಗಾರವನ್ನು ಆಯೋಜಿಸುತ್ತಿದೆ ಎಂದು ಎಂಟಿಎಸ್ ಸಂಸ್ಥೆಯ ಸಿಓಓ ಸ್ಮಿತಾ ಪಾಟೀಲ್ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಕಾರ್ಯಾಗಾರದಲ್ಲಿ ಸುಮಾರು 100ರಿಂದ 120 ಮಂದಿ ವಿಶೇಷ ಮಕ್ಕಳ ಹೆತ್ತವರು,ಶಿಕ್ಷಕರು ಹಾಗೂ ಪಾಲಕರು ಭಾಗವಹಿಸುವ ನಿರೀಕ್ಷೆ ಇದೆ. ಇದಕ್ಕೆ ಜಿಲ್ಲಾ ವಿಕಲಚೇತನರ ಅಭಿವೃದ್ಧಿ ಇಲಾಖೆಯು ಸಂಪೂರ್ಣ ಸಹಕಾರವನ್ನು ನೀಡುತ್ತಿದೆ ಎಂದವರು ಹೇಳಿದರು.

ಕಾರ್ಯಾಗಾರದಲ್ಲಿ ಅಮೆರಿಕದ ನಿವಾಸಿಯಾಗಿರುವ, ತೆಲಂಗಾಣದಲ್ಲಿ ಮಾರ್ಗಿಕಾ ಎಂಬ ಸರಕಾರೇತರ ಸಂಸ್ಥೆಯನ್ನು ಸ್ಥಾಪಿಸಿ ಅದರ ಮೂಲಕ ವಿಶೇಷ ಚೇತನ ಮಕ್ಕಳನ್ನು ನೋಡಿಕೊಳ್ಳುತ್ತಿರುವ ಡಾ.ನೀನಾ ರಾವ್ ಅವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಲಿದ್ದಾರೆ ಎಂದು ಸ್ಮಿತಾ ಪಾಟೀಲ್ ವಿವರಿಸಿದರು.

ಇದೇ ಸಂದರ್ಭದಲ್ಲಿ ಡಾ.ನೀನಾ ಅವರು ಸಂಕಲಿಸಿರುವ ವಿಶೇಷ ಚೇತನ ಮಕ್ಕಳೇ ರಚಿಸಿದ ಕಥೆ, ಕವನ ಹಾಗೂ ಚಿತ್ರಗಳನ್ನು ಒಳಗೊಂಡ ‘ಮೈಂಡ್‌ಸ್ಕೇಪ್’ ಎಂಬ ಕೃತಿಯನ್ನು ಬಿಡುಗಡೆಗೊಳಿಸಲಾಗುವುದು. ಕಾರ್ಯಕ್ರಮದಲ್ಲಿ ಮಣಪಾಲ ಮಾಹೆಯ ಡಾ.ಪದ್ಮರಾಜ್ ಹೆಗ್ಡೆ ಹಾಗೂ  ವಿಕಲಚೇತನರ ಅಧಿಕಾರಿ ರತ್ನಮ್ಮ ಭಾಗವಹಿಸಲಿದ್ದಾರೆ ಎಂದರು.

ತಮ್ಮ ಎಂಟಿಎಸ್ ಸಂಸ್ಥೆಯು ಕಳೆದ ಕೆಲವು ವರ್ಷಗಳಿಂದ ಕರಾವಳಿಯ ಶಾಲಾ ಮಕ್ಕಳಿಗೆ ಶಾಲೆಯಲ್ಲಿ ಜೀವನ ಕೌಶಲಗಳ ಬಗ್ಗೆ ತರಬೇತಿ ನೀಡುತ್ತಿದೆ. 1ರಿಂದ 12ನೇ ತರಗತಿವರೆಗಿನ ಮಕ್ಕಳಿಗೆ ಮೌಲ್ಯಾಧಾರಿತ ಪಾಠವನ್ನು ಬೋಧಿಸುತ್ತಿದೆ.ಅಲ್ಲದೇ ಎಂಟಿಎಸ್ ಸಂಸ್ಥೆ ಪೂರಕ ಶಿಕ್ಷಣಕ್ಕೆ ಬೇಕಾದ ಪಠ್ಯಕ್ರಮ ತಯಾರಿ ಹಾಗೂ ತರಬೇತಿ ಕಾರ್ಯಕ್ರಮದಲ್ಲಿ ನಿರತವಾಗಿದೆ ಎಂದು ಸ್ಮಿತಾ ಪಾಟೀಲ್ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾಹೆಯ ಆಸರೆ ಸಂಸ್ಥೆಯ ಸ್ಥಾಪಕ ಜೈವಿಠಲ್, ಎಂಟಿಎಸ್ ಸಂಸ್ಥೆಯ ಸ್ಥಾಪಕಿ ಸುಪರ್ಣ ಶೆಟ್ಟಿ ಮಣಿಪಾಲ ಉಪಸ್ಥಿತರಿದ್ದರು.

Similar News