ಹಣಕಾಸಿನ ಕೊರತೆ,ತಂತ್ರಜ್ಞಾನ ಬಲೆಯಲ್ಲಿ ಉಸಿರುಗಟ್ಟಿರುವ ನರೇಗಾ ಯೋಜನೆ: ವರದಿ

Update: 2023-03-26 13:03 GMT

ಹೊಸದಿಲ್ಲಿ,ಮಾ.26: ಮೊಬೈಲ್ ಆ್ಯಪ್ ಮೂಲಕ ಹಾಜರಾತಿಯನ್ನು ಕಡ್ಡಾಯಗೊಳಿಸಿದ ಬಳಿಕ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ನರೇಗಾದಡಿ ಕೆಲಸ ಕಳೆದ ವರ್ಷದ ಡಿಸೆಂಬರ್ಗೆ ಹೋಲಿಸಿದರೆ ಈ ವರ್ಷದ ಜನವರಿಯಲ್ಲಿ ಶೇ.10ರಷ್ಟು ಇಳಿಕೆಯಾಗಿದೆ. ಫೆಬ್ರವರಿಯಲ್ಲಿಯೂ ಇದೇ ಮಟ್ಟ ಮುಂದುವರಿದಿದ್ದು,ಮಾ.25ರವರೆಗಿನ ಲಭ್ಯ ಡೇಟಾದಂತೆ ಇನ್ನಷ್ಟು ಕಡಿಮೆಯಾಗುವಂತೆ ಕಂಡುಬರುತ್ತಿದೆ ಎಂದು newsclick.in ವರದಿ ಮಾದಿದೆ.

ಡಿಸೆಂಬರ್ 2022ರಲ್ಲಿ ಸುಮಾರು 1.85 ಕೋ.ಕುಟುಂಬಗಳು ನರೇಗಾ ಯೋಜನೆಯಡಿ ಕೆಲಸ ಪಡೆದಿದ್ದವು. ಮುಂದಿನ ತಿಂಗಳು ಕೆಲಸವನ್ನು ಪಡೆದವರಿಗೆ ಆ್ಯಪ್ ಆಧಾರಿತ ಹಾಜರಾತಿಯನ್ನು ಕಡ್ಡಾಯಗೊಳಿಸಲಾಗಿತ್ತು. ಇದು ದೂರದ ಪ್ರದೇಶಗಳಲ್ಲಿ ಅಂತರ್ಜಾಲದ ಅಲಭ್ಯತೆಯಿಂದಾಗಿ ಮತ್ತು ಇತರ ತಾಂತ್ರಿಕ ದೋಷಗಳಿಂದಾಗಿ ವ್ಯಾಪಕ ದೂರುಗಳಿಗೆ ಕಾರಣವಾಗಿದೆ. ವ್ಯವಸ್ಥೆಯ ವೈಫಲ್ಯದಿಂದಾಗಿ ತಾವು ಕೆಲಸ ಮಾಡಿದ್ದೇವೆ ಎನ್ನುವುದನ್ನು ದಾಖಲಿಸಲೇ ಅಸಹಾಯಕ ಕಾರ್ಮಿಕರು ಗಂಟೆಗಟ್ಟಲೆ ಕಾಯುವಂತಾಗಿದೆ ಅಥವಾ ಕೆಲಸವನ್ನು ಮಾಡಿದ್ದರೂ ಕೂಲಿಯನ್ನು ಕಳೆದುಕೊಳ್ಳುತ್ತಿದ್ದಾರೆ. ಈ ಎಲ್ಲ ತಿಂಗಳುಗಳಲ್ಲಿ ನರೇಗಾದಡಿ ಕೆಲಸ ಕಡಿಮೆಯಾಗಲು ಇದು ಪ್ರಮುಖ ಕಾರಣವಾಗಿದೆ.

ಇದು ಋತುಮಾನದ ಇಳಿಕೆಯ ಪ್ರಕರಣವಲ್ಲ. ಕಳೆದ ವರ್ಷವೂ ಕೆಲಸ ಕಡಿಮೆಯಾಗಿತ್ತಾದರೂ ಈ ಪ್ರಮಾಣದಲ್ಲಿ ಆಗಿರಲಿಲ್ಲ. ಡಿಸೆಂಬರ್ಗೆ ಹೋಲಿಸಿದರೆ ಸಾಮಾನ್ಯವಾಗಿ ಜನವರಿ-ಫೆಬ್ರವರಿ ತಿಂಗಳುಗಳಲ್ಲಿ ಯೋಜನೆಯಡಿ ಕೆಲಸ ಹೆಚ್ಚುತ್ತದೆ ಎನ್ನುವುದನ್ನು ಹಿಂದಿನ ವರ್ಷಗಳ ಡೇಟಾ ತೋರಿಸಿದೆ.

ನರೇಗಾ ಯೋಜನೆಯ ಪೋರ್ಟಲ್ನಲ್ಲಿ ಲಭ್ಯ ಮಾಹಿತಿಯಂತೆ ಈ ವರ್ಷದ ಮಾ.25ರವರೆಗೆ ಸುಮಾರು 10.24 ಕೋ.ಜನರು ಕೆಲಸಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. ಈ ಪೈಕಿ ಕೇವಲ 8.6 ಕೋ.ಜನರಿಗೆ ಕೆಲಸ ಸಿಕ್ಕಿದೆ. ಅಂದರೆ ಶೇ.16ರಷ್ಟು ಅರ್ಜಿದಾರರಿಗೆ ಯೋಜನೆಯಡಿ ಕೆಲಸ ನಿರಾಕರಿಸಲಾಗಿದೆ.

ಮೊಬೈಲ್ ಆಧಾರಿತ ಹಾಜರಾತಿಯು ಸರಕಾರವು ಹೆಚ್ಚು ಒಲವು ಹೊಂದಿರುವ ತಂತ್ರಜ್ಞಾನ ಪರಿಹಾರಗಳಲ್ಲಿ ಒಂದಾಗಿದ್ದು,ಅದು ಸುಗಮ ಕಾರ್ಯಾಚರಣೆಯ ಭರವಸೆಯನ್ನು ನೀಡುತ್ತದೆ. ಆದರೆ ವಾಸ್ತವದಲ್ಲಿ ಜನರನ್ನು ಹಿಂಡಿ ಹಿಪ್ಪೆ ಮಾಡುತ್ತಿದೆ. ಸಾರ್ವಜನಿಕ ವಿತರಣೆ ವ್ಯವಸ್ಥೆ (ಪಿಡಿಎಸ್),ಶಾಲೆಗಳಲ್ಲಿ ಶಿಕ್ಷಕರ ಹಾಜರಾತಿ ಮತ್ತು ವಿವಿಧ ಇತರ ಯೋಜನೆಗಳಲ್ಲಿ ಈಗಾಗಲೇ ಇಂತಹ ದುರಂತ ಪರಿಣಾಮಗಳು ಕಂಡು ಬಂದಿವೆ.

ಪೋರ್ಟಲ್ನಲ್ಲಿ ಲಭ್ಯ ಮಾಹಿತಿಯಂತೆ ಕಳೆದ ವರ್ಷಕ್ಕೆ ಹೋಲಿಸಿದರೆ ವಿಳಂಬಿತ ವೇತನಗಳ ಪ್ರಮಾಣ ಶೇ.64ರಷ್ಟು ಏರಿಕೆಯಾಗಿದೆ. ಕೂಲಿ ಪಾವತಿಯಲ್ಲಿ 16 ದಿನ ಅಥವಾ ಅದಕ್ಕೂ ಹೆಚ್ಚಿನ ವಿಳಂಬವಾದರೆ ಅದನ್ನು ‘ವಿಳಂಬಿತ ವೇತನ ’ ಎಂದು ವ್ಯಾಖ್ಯಾನಿಸಲಾಗಿದೆ. ಕಳೆದ ವರ್ಷ ಇಂತಹ ವಿಳಂಬಿತ ವೇತನಗಳ ಮೊತ್ತ 2,213 ಕೋ.ರೂ.ಗಳಾಗಿದ್ದರೆ ಈ ವರ್ಷದ ಮಾ.25ರವರೆಗೆ ಅದು 3,630 ಕೋ.ರೂ.ಗಳಿಗೆ ಜಿಗಿದಿದೆ.

ಪಾವತಿಯಾಗದ ವೇತನಗಳ ಸ್ಥಿತಿ ಇದಕ್ಕಿಂತ ಕೆಟ್ಟದ್ದಾಗಿದೆ. ಕೌಶಲ್ಯರಹಿತ ಕಾರ್ಮಿಕರಿಗೆ ಬಾಕಿಯಾಗಿರುವ ವೇತನದ ಮೊತ್ತ 1,010 ಕೋ.ರೂ.ಗಳಷ್ಟಿದೆ. ಇದು ಕಳೆದ ವರ್ಷದ 424 ಕೋ.ರೂ.ಗಳಿಗೆ ಹೋಲಿಸಿದರೆ ಶೇ.138ರಷ್ಟು ಅಧಿಕವಾಗಿದೆ.

2022-23ನೇ ಸಾಲಿನ ಮುಂಗಡಪತ್ರದಲ್ಲಿ ನರೇಗಾ ಯೋಜನೆಗೆ 73,000 ಕೋ.ರೂ.ಗಳನ್ನು ಹಂಚಿಕೆ ಮಾಡಲಾಗಿತ್ತು ಮತ್ತು ಬಳಿಕ ಅದನ್ನು 89,400 ಕೋ.ರೂ.ಗಳಿಗೆ ಪರಿಷ್ಕರಿಸಲಾಗಿತ್ತು. ಇದು 2021-22ರಲ್ಲಿ ವ್ಯಯಿಸಲಾಗಿದ್ದ 98,467.85 ಕೋ.ರೂ.ಗಿಂತ ಕಡಿಮೆಯಾಗಿದೆ.

ಪೋರ್ಟಲ್ನಲ್ಲಿಯ ಮಾಹಿತಿಯಂತೆ ವಿತ್ತವರ್ಷ 2022-23ರ ಆರಂಭದಲ್ಲಿ 97,639 ಕೋ.ರೂ. ಲಭ್ಯವಿತ್ತು. ಇದು ಹಿಂದಿನ ವರ್ಷದ ಹಂಚಿಕೆಗಳು ಮತ್ತು ಕ್ಯಾರಿಓವರ್ಗಳ ಮೊತ್ತವಾಗಿದೆ. ಮಾ.25ಕ್ಕೆ ಇದ್ದಂತೆ ಯೋಜನೆಯು 11,921 ಕೋ.ರೂ.ಗಳ ಕೊರತೆಯನ್ನು ತೋರಿಸುತ್ತಿದೆ. ಅಂದರೆ ಹಂಚಿಕೆಯಾಗಿದ್ದಕ್ಕಿಂತ 11,921 ಕೋ.ರೂ.ಹೆಚ್ಚಿನ ಹಣವನ್ನು ವ್ಯಯಿಸಲಾಗಿದೆ. ಹಿಂದಿನ ವರ್ಷಗಳಲ್ಲಿ ಈ ಕೊರತೆ 4,162 ಕೋ.ರೂ.ಗಳಷ್ಟಿತ್ತು.

ಅಂದರೆ ಯೋಜನೆಯಡಿ 1.6 ಕೋ.ಜನರಿಗೆ ಕೆಲಸ ನಿರಾಕರಿಸಲ್ಪಟ್ಟಿದ್ದರೂ ಹಂಚಿಕೆಯಾಗಿರುವುದಕ್ಕಿಂತ ಹೆಚ್ಚಿನ ಹಣ ವೆಚ್ಚವಾಗುತ್ತಿದೆ. ಯೋಜನೆಯಡಿ ಹೆಚ್ಚಿನ ಕೆಲಸಕ್ಕಾಗಿ ಜನರಿಂದ ತೀವ್ರ ಒತ್ತಡವಿದ್ದರೂ ಸರಕಾರವು ಹೆಚ್ಚಿನ ಹಣವನ್ನು ಹಂಚಿಕೆ ಮಾಡಲು ಸಿದ್ಧವಿಲ್ಲ,ಬದಲಿಗೆ ಜನರು ಯೋಜನೆಯಡಿ ಕೆಲಸ ಕೋರುವುದನ್ನು ತಗ್ಗಿಸಲು ಎಲ್ಲ ಕ್ರಮಗಳನ್ನೂ ಕೈಗೊಳ್ಳುತ್ತಿದೆ. ಕಡ್ಡಾಯ ಆ್ಯಪ್ ಆಧಾರಿತ ಹಾಜರಾತಿಯು ಇಂತಹ ತಂತ್ರಗಳಲ್ಲಿ ಒಂದಾಗಿದೆ. ವೇತನ ಪಾವತಿಯಲ್ಲಿ ವಿಳಂಬ ಇನ್ನೊಂದು ತಂತ್ರವಾಗಿದೆ.

ಲವಲೇಶವಾದರೂ ರಾಜಕೀಯ ಪ್ರಜ್ಞೆಯಿರುವ ಸರಕಾರಕ್ಕೆ ನರೇಗಾ ಯೋಜನೆಯನ್ನು ಉಸಿರುಗಟ್ಟಿಸುವ ಮೂಲಕ ತಾನು ಬೆಂಕಿಯೊಂದಿಗೆ ಆಟವಾಡುತ್ತಿದ್ದೇನೆ ಎನ್ನುವುದು ಅರ್ಥವಾಗುತ್ತದೆ. ಇತ್ತೀಚಿನ ವಿವಿಧ ಚುನಾವಣೆಗಳಲ್ಲಿ ನಿರುದ್ಯೋಗವು ಮತದಾರರ ಮನಸ್ಸಿನಲ್ಲಿದ್ದ ಅತ್ಯಂತ ದೊಡ್ಡ ಆರ್ಥಿಕ ಸಮಸ್ಯೆಗಳಲ್ಲಿ ಒಂದಾಗಿತ್ತು.

ಉದ್ಯೋಗಗಳನ್ನು ಒದಗಿಸುವಲ್ಲಿ ವೈಫಲ್ಯವು ಚುನಾವಣಾ ಪ್ರಚಾರಗಳಲ್ಲಿ ಅಬ್ಬರದ ಭರವಸೆಗಳ ಹೊರತಾಗಿಯೂ ತೀವ್ರವಾದ ಅಸಮಾಧಾನ ಮತ್ತು ಭ್ರಮನಿರಸನಕ್ಕೆ ಕಾರಣವಾಗಲಿದೆ. ನರೇಗಾ ಯೋಜನೆಯು ಈ ಸಂಪೂರ್ಣ ವೈಫಲ್ಯವನ್ನು ಸರಿದೂಗಿಸಲು ಸಾಧ್ಯವಿಲ್ಲ,ಆದರೆ ಸಂಕಷ್ಟದಲ್ಲಿರುವ ಜನರಿಗೆ ಅದು ಸ್ವಲ್ಪ ಮಟ್ಟಿಗಾದರೂ ಪರಿಹಾರವನ್ನು ನೀಡುತ್ತದೆ. ಆದರೆ ಕಲ್ಯಾಣ ಕಾರ್ಯಕ್ರಮಗಳ ಮೇಲಿನ ಸರಕಾರದ ವೆಚ್ಚವನ್ನು ತಗ್ಗಿಸಲು ನರೇಗಾ ಯೋಜನೆಯನ್ನೇ ಉಸಿರುಗಟ್ಟಿಸುವುದು ಮೂರ್ಖ ನೀತಿಯಾಗುತ್ತದೆ.

ಕೃಪೆ: newsclick.in

Similar News