ಸನಾತನ ಸಂಸ್ಥೆ ಭಯೋತ್ಪಾದಕ ಸಂಘಟನೆ ಅಲ್ಲ: ಬಾಂಬೆ ಹೈಕೋರ್ಟ್

Update: 2023-03-26 18:17 GMT

ಮುಂಬೈ, ಮಾ. 23:  ಕಾನೂನು ಬಾಹಿರ ಚಟುವಟಿಕೆ ತಡೆ ಕಾಯ್ದೆ (ಯುಎಪಿಎ) ಅಡಿಯಲ್ಲಿ ಹಿಂದುತ್ವ ಸಂಘಟನೆ ಸನಾತನ ಸಂಸ್ಥೆ ಭಯೋತ್ಪಾದಕ ಸಂಘಟನೆ ಅಲ್ಲ ಎಂದು ಬಾಂಬೆ ಉಚ್ಚ ನ್ಯಾಯಾಲಯ ಕಳೆದ ವಾರ ಹೇಳಿದೆ.

ಬದಲಾಗಿ ಇದು ನೋಂದಾಯಿತ ಚಾರಿಟೆಬಲ್ ಟ್ರಸ್ಟ್ ಆಗಿದ್ದು, ಸಾಮಾಜದ ಕುತೂಹಲಿಗಳಿಗೆ ಆಧ್ಯಾತ್ಮ ಜ್ಞಾನವನ್ನು ನೀಡುವ ಉದ್ದೇಶ ಹೊಂದಿದೆ ಎಂದು ನ್ಯಾಯಾಲಯ ತಿಳಿಸಿದೆ.

ಕಾನೂನು ಬಾಹಿರ ಚಟುವಟಿಕೆ ತಡೆ ಕಾಯ್ದೆ ಅಡಿಯ ಪ್ರಕರಣವೊಂದರಲ್ಲಿ ಆರೋಪಿಯಾಗಿರುವ ವಿಜಯ್ ಲೋಧಿಗೆ ಮಾರ್ಚ್ 23ರಂದು ಜಾಮೀನು ಮಂಜೂರು ಮಾಡುವ ಸಂದರ್ಭ ನ್ಯಾಯಮೂರ್ತಿಗಳಾದ ಸುನೀಲ್ ಶುಕ್ರೆ ಹಾಗೂ ಕಮಲ್ ಖಾಟಾ ಅವರನ್ನೊಳಗೊಂಡ ವಿಭಾಗೀಯ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

ಸನಾತನ ಸಂಸ್ಥೆಗಾಗಿ ತನ್ನ ಮನೆಯಲ್ಲಿ ಸ್ಫೋಟಗಳನ್ನು ಸಿದ್ಧಪಡಿಸುತ್ತಿದ್ದ ಹಾಗೂ ದಾಸ್ತಾನು ಮಾಡುತ್ತಿದ್ದ ಆರೋಪದಲ್ಲಿ ಮಹಾರಾಷ್ಟ್ರ ಭಯೋತ್ಪಾದನೆ ನಿಗ್ರಹ ದಳ ಲೋಧಿಯನ್ನು ಬಂಧಿಸಿತ್ತು.

ಮಹಾರಾಷ್ಟ್ರ ಹಾಗೂ ಇತರ ನೆರೆಯ ರಾಜ್ಯಗಳಲ್ಲಿ ಭಯೋತ್ಪಾದಕ ತಂಡವನ್ನು ರಹಸ್ಯವಾಗಿ ರಚಿಸುವ ಮೂಲಕ ಹಿಂದೂ ರಾಷ್ಟ್ರ ರೂಪಿಸುವ ಉದ್ದೇಶ ಹೊಂದಿದ ಸನಾತನ ಸಂಸ್ಥೆಯ ಸಕ್ರಿಯ ಸದಸ್ಯ ಲೋಧಿ.

ಲೋಧಿ ಭಾರತವನ್ನು ಅಸ್ಥಿರಗೊಳಿಸುವ ಪಿತೂರಿಯ ಭಾಗವಾಗಿದ್ದಾನೆ ಎಂದು ಭಯೋತ್ಪಾದನೆ ನಿಗ್ರಹ ದಳ ಆರೋಪಿಸಿತ್ತು.

ಗೋವಾ ಹಾಗೂ ಮಹಾರಾಷ್ಟ್ರದಲ್ಲಿ ಅಸ್ತಿತ್ವದಲ್ಲಿರುವ ಸನಾತನ ಸಂಸ್ಥೆ ವಿಚಾರವಾದಿ ನರೇಂದ್ರ ದಾಭೋಲ್ಕರ್, ಎಂ.ಎಂ. ಕಲುಬುರ್ಗಿ, ಗೋವಿಂದ ಪಾನ್ಸರೆ ಹಾಗೂ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಪ್ರಮುಖ ಪಾತ್ರ ವಹಿಸಿರುವ ಆರೋಪಕ್ಕೆ ಒಳಗಾಗಿದೆ.

Similar News