ಇದು ಚುನಾವಣಾ ಮೀಸಲಾತಿ ಸೂತ್ರ

Update: 2023-03-26 18:44 GMT

ವಾಸ್ತವವಾಗಿ ಕರ್ನಾಟಕದ ಬಿಜೆಪಿ ಸರಕಾರ ಪ್ರಕಟಿಸಿರುವ ಮೀಸಲಾತಿ ಸೂತ್ರ ಒಮ್ಮೆಲೆ ಜಾರಿಗೆ ಬರುವುದಿಲ್ಲ. ಕೇಂದ್ರಕ್ಕೆ ಹೋಗಿ, ನ್ಯಾಯಾಲಯಗಳ ಅಗ್ನಿಪರೀಕ್ಷೆಯಲ್ಲಿ ಪಾರಾಗಿ ಬರಬೇಕು. ಈಗ ಅಧಿಕಾರದಲ್ಲಿ ಇರುವವರ ಚಿಂತೆ ಅದಲ್ಲ. ಸದ್ಯ ವಿಧಾನಸಭಾ ಚುನಾವಣೆ ಗೆಲ್ಲಬೇಕು.ಇದಕ್ಕಿಂತ ಹೆಚ್ಚಿನ ಗುರಿ, ಉದ್ದೇಶಗಳಿಲ್ಲ



ನ್ಯಾಯಮೂರ್ತಿ ಸಾಚಾರ್ ಆಯೋಗ ಮತ್ತು ನ್ಯಾಯಮೂರ್ತಿ ಚಿನ್ನಪ್ಪರೆಡ್ಡಿ ಆಯೋಗದ ವರದಿ ಪ್ರಕಾರ, ಮುಸಲ್ಮಾನ ಸಮುದಾಯ ಅತ್ಯಂತ ಹಿಂದುಳಿದ ಸಮುದಾಯ. ಆದರೆ ಕರ್ನಾಟಕದ ಬಿಜೆಪಿ ಸರಕಾರ ಮುಸ್ಲಿಮರ ಶೇ.4 ಮೀಸಲನ್ನು ಲಿಂಗಾಯತರು ಮತ್ತು ಒಕ್ಕಲಿಗರಿಗೆ ಹಂಚಿ ಮುಸಲ್ಮಾನರ ಪ್ರತ್ಯೇಕ ಮೀಸಲನ್ನು ರದ್ದುಪಡಿಸಿ ಆರ್ಥಿಕ ವಾಗಿ ಹಿಂದುಳಿದವರ ಆದರೆ ಸಾಮಾಜಿಕವಾಗಿ ಮೇಲ್ವರ್ಗಕ್ಕೆ ಸೇರಿದ ಶೇ.10 ಮೀಸಲು ಪಟ್ಟಿಗೆ ಸೇರಿಸಿದೆ. ಇದು ದಿಡೀರ್ ತೀರ್ಮಾನವಲ್ಲ. ಬಿಜೆಪಿಯಲ್ಲಿ ಮೊದಲಿನಿಂದಲೂ ಈ ಚಿಂತನೆ ನಡೆದಿತ್ತು. ಶಾಸಕ ಅರವಿಂದ ಬೆಲ್ಲದ ಕಳೆದ ವರ್ಷವೇ ಮುಸಲ್ಮಾನರ ಮೀಸಲಾತಿ ರದ್ದತಿಗೆ ಒತ್ತಾಯಿಸಿದ್ದರು.

ಮುಸಲ್ಮಾನರನ್ನು ಸಾಮಾಜಿಕ, ಶೈಕ್ಷಣಿಕವಾಗಿ ಹಿಂದುಳಿದವರ ಮೀಸಲು ಪಟ್ಟಿಯಿಂದ ತೆಗೆದು ಕೇವಲ ಆರ್ಥಿಕವಾಗಿ ಹಿಂದುಳಿದವರ ಮೀಸಲು ಪಟ್ಟಿಗೆ ಸೇರಿಸಿರುವುದು ಅನ್ಯಾಯದ ಪರಮಾವಧಿ. ಇನ್ನು ಮುಂದೆ ಒಂದು ಸಮು ದಾಯವಾಗಿ ಮುಸಲ್ಮಾನರು ಸಾಂವಿಧಾನಿಕ ಸೌಕರ್ಯಗಳನ್ನು ಪಡೆಯುವ ಅವಕಾಶವನ್ನು ನಿರಾಕರಿಸಿದಂತಾಗಿದೆ. ರಾಜ್ಯದ ಬಿಜೆಪಿ ಸರಕಾರದ ಪ್ರಕಾರ ಮುಸಲ್ಮಾನರು ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಮುಂದುವರಿದಿದ್ದಾರೆ. ಹೀಗಾಗಿ ಅವರೀಗ ಜನರಲ್ ಕೆಟಗರಿಗೆ ಬರುತ್ತಾರೆ. ಮುಸಲ್ಮಾನರಲ್ಲಿ ಕೆಲವರು ಆರ್ಥಿಕವಾಗಿ ಹಿಂದುಳಿದಿದ್ದರೆ ಅವರು ಆರ್ಥಿಕವಾಗಿ ದುರ್ಬಲ ವರ್ಗದವರಿ ಗಾಗಿ ಇರುವ ಕೋಟಾದಲ್ಲಿ ಮೀಸಲು ಸೌಲಭ್ಯ ಪಡೆಯಬಹುದು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರೇ, ನೀವೇನೋ ನಾಗಪುರದ ಗುರುಗಳ ಒತ್ತಡಕ್ಕೆ ಮಣಿದು ಮುಸಲ್ಮಾನರನ್ನು ಜನರಲ್ ಕೆಟಗರಿಗೆ ಸೇರಿಸಿದ್ದೀರಿ. ದಯವಿಟ್ಟು ರಾಜ್ಯದ ಯಾವುದೇ ನಗರದಲ್ಲಿ ಆರ್ಥಿಕ ವಾಗಿ ಹಿಂದುಳಿದ ಜನರಲ್ ಕೆಟಗರಿಯವರು ಇರುವ ಬಡಾವಣೆಯಲ್ಲಿ ಒಬ್ಬನೇ ಒಬ್ಬ ಮುಸಲ್ಮಾನನಿಗೆ ಮನೆ ಬಾಡಿಗೆ ಕೊಡಿಸಿ. ಮನೆ ಬಾಡಿಗೆ ಕೊಡದವರು ಮೀಸಲಲ್ಲಿ ಪಾಲು ನೀಡುತ್ತಾರೆಂದು ನಿರೀಕ್ಷಿಸುತ್ತೀರಾ?

ಇನ್ನೊಂದು ವಿಷಯ, ಮುಸಲ್ಮಾನರ ಕ್ಯಾಟಗರಿ ಬದಲಿಸಿ ಅವರ ಶೇ.4 ಮೀಸಲಾತಿಯನ್ನು ಇಬ್ಭಾಗ ಮಾಡಿ ವೀರಶೈವ ಲಿಂಗಾಯತರು ಮತ್ತು ಒಕ್ಕಲಿಗ ರಿಗೆ ಹಂಚಿಕೆ ಮಾಡಿರುವಿರಲ್ಲಾ. ಹೀಗೆ ಮಾಡಿದ್ದು ಯಾವ ಆಧಾರದಲ್ಲಿ? ಈ ಕುರಿತು ಸಾಮಾಜಿಕ , ಶೈಕ್ಷಣಿಕ, ಆರ್ಥಿಕ ಸ್ಥಿತಿ ಗತಿಗಳ ಕುರಿತು ಗಣತಿ ನಡೆಸಿದ್ದಾರೆ. ಯಾವುದೇ ಮಾನದಂಡವಿಲ್ಲದೆ ಯಾವ ಆಧಾರದಲ್ಲಿ ಮುಸಲ್ಮಾನರನ್ನು ಶೈಕ್ಷಣಿಕವಾಗಿ ಮತ್ತು ಸಾಮಾಜಿಕವಾಗಿ ಮುಂದುವರಿದವ ರೆಂದು ತೀರ್ಮಾನಿಸಿದ್ದೀರಿ? ವಿಧಾನಸಭಾ ಚುನಾವಣೆಗಾಗಿ ಈ ಸರ್ಕಸ್ ಮಾಡಿರುವಿರಾ?

ವಾಸ್ತವವಾಗಿ ಮುಸ್ಲಿಮ್ ಅಲ್ಪಸಂಖ್ಯಾತ ಸಮುದಾಯದ ಪರಿಸ್ಥಿತಿ ದಾರುಣವಾಗಿದೆ. ಕೇಂದ್ರದಲ್ಲಿ ಮನಮೋಹನಸಿಂಗ್ ಸರಕಾರವಿದ್ದಾಗ ಮುಸ್ಲಿಮ್ ಸಮುದಾಯದ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಹಿಂದುಳಿದಿರುವಿಕೆಯ ಕುರಿತು ಅಧ್ಯಯನ ನಡೆಸಿ ವರದಿ ನೀಡಲು 2005ರ ಮಾರ್ಚ್ 9 ರಂದು ನ್ಯಾಯಮೂರ್ತಿ ರಾಜೇಂದ್ರ ಸಿಂಗ್ ಸಾಚಾರ್ ಅವರ ಅಧ್ಯಕ್ಷತೆಯಲ್ಲಿ ಏಳು ಜನರ ಸಮಿತಿಯನ್ನು ರಚಿಸಲಾಗಿತು. ಇಡೀ ಭಾರತದ ಮುಸ್ಲಿಮ್ ಸಮುದಾಯದ ಸ್ಥಿತಿಗತಿಗಳ ಬಗ್ಗೆ ಅಧ್ಯಯನ ನಡೆಸಿದ ನ್ಯಾಯಮೂರ್ತಿ ಸಾಚಾರ್ 2006 ನವೆಂಬರ್‌ನಲ್ಲಿ ತಮ್ಮ ವರದಿಯನ್ನು ಕೇಂದ್ರ ಸರಕಾರಕ್ಕೆ ಸಲ್ಲಿಸಿದರು. ಮುಸ್ಲಿಮ್ ತುಷ್ಟೀಕರಣದ ಅಪಪ್ರಚಾರವನ್ನು ತಳ್ಳಿ ಹಾಕಿದ ಸಾಚಾರ್ ಸಮಿತಿ ಶಿಕ್ಷಣ, ಉದ್ಯೋಗ ಮತ್ತು ಬ್ಯಾಂಕಿನ ಸಾಲವನ್ನು ಪಡೆಯುವ ವಿಚಾರದಲ್ಲಿ ತೀರ ಹಿಂದುಳಿದಿದೆ ಎಂಬುದನ್ನು ಅಂಕಿ ಅಂಶಗಳನ್ನು ಒಳಗೊಂಡ ವರದಿಯನ್ನು ನೀಡಿತು. ಆದರೆ ಈವರೆಗೆ ಸಾಚಾರ್ ಸಮಿತಿ ವರದಿ ಜಾರಿಗೆ ಬಂದಿಲ್ಲ.

ಸಾಚಾರ ವರದಿಗೂ ಮುನ್ನ ಕರ್ನಾಟಕದಲ್ಲಿ 1918ರಲ್ಲಿ ಮೈಸೂರಿನ ನಾಲ್ವಡಿ ಕೃಷ್ಣ ರಾಜ ಒಡೆಯರ್ ಅವರು ನೇಮಕ ಮಾಡಿದ ಮಿಲ್ಲರ್ ಆಯೋಗ ಮಾಡಿದ ಶಿಫಾರಸಿನ ಅನ್ವಯ ಮುಸಲ್ಮಾನರಲ್ಲಿನ ಕೆಲ ಪಂಗಡಗಳನ್ನು ಹಿಂದುಳಿದವರ ಪಟ್ಟಿಗೆ ಸೇರಿಸಿ ಮೀಸಲು ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು. 1947 ರ ನಂತರ ರಚನೆ ಯಾದ ನಾಗನಗೌಡ ಆಯೋಗ, ಹಾವನೂರು ಆಯೋಗ, ವೆಂಕಟ ಸ್ವಾಮಿ ಆಯೋಗ ಹಾಗೂ ಚಿನ್ನಪ್ಪರೆಡ್ಡಿ ಆಯೋಗಗಳು ಕೂಡ ಮುಸಲ್ಮಾನ ರಲ್ಲಿನ ಕೆಲ ಪಂಗಡಗಳು ಅತ್ಯಂತ ಹಿಂದುಳಿದಿವೆ ಎಂದು ಅಧ್ಯಯನ ಮಾಡಿ ವರದಿಯನ್ನು ನೀಡಿವೆ.

ವೀರಪ್ಪ ಮೊಯ್ಲಿಯವರು ಕರ್ನಾಟಕದ ಮುಖ್ಯಮಂತ್ರಿಯಾಗಿದ್ದಾಗ ಮುಸ್ಲಿಮ್ ಸಮುದಾಯದ ನಾಲಬಂದ್, ಸೈಕಲ್ಗಾರ್, ಕಸಯಿ, ಮನ್ಸೂರಿ ಮುಂತಾದ ಹದಿನಾಲ್ಕು ಜಾತಿಗಳಿಗೆ ಅತಿ ಹಿಂದುಳಿದ ಕ್ಯಾಟಗರಿಯಲ್ಲಿ ಪ್ರ ವರ್ಗ '1ಬಿ' ಅಡಿಯಲ್ಲಿ ಶೈಕ್ಷಣಿಕ, ಸಾಮಾಜಿಕ ವಾಗಿ ಹಾಗೂ ಆರ್ಥಿಕವಾಗಿ ಹಿಂದುಳಿದ ವರೆಂದು ಶೇ.4 ಮೀಸಲಾತಿ ನೀಡಲು ತೀರ್ಮಾನಿಸಿತು. ಆಂಧ್ರದಂತೆ ಇದು ಧಾರ್ಮಿಕ ಆಧಾರದ ಮೀಸಲಾತಿ ಅಲ್ಲ. ಕರ್ನಾಟಕ ಮಾತ್ರವಲ್ಲ ಕೇರಳ ಮತ್ತು ತಮಿಳುನಾಡುಗಳಲ್ಲಿ ಮುಸಲ್ಮಾನರನ್ನು ಹಿಂದುಳಿದವರ ಪಟ್ಟಿಗೆ ಸೇರಿಸಿ ಮೀಸಲಾತಿ ನೀಡಲಾಗಿದೆ. ಇದು ಸುಪ್ರೀಂಕೋರ್ಟಿಗೆ ಹೋದರೆ ಏನಾಗುತ್ತದೆ? ಅದರ ಚಿಂತೆ ಬಿಜೆಪಿ ಸರಕಾರಕ್ಕೆ ಇಲ್ಲ. ಸದ್ಯ ಚುನಾವಣೆಯಲ್ಲಿ ತನ್ನ ಓಟ್ ಬ್ಯಾಂಕ್‌ಗಳನ್ನು ಗಟ್ಟಿ ಮಾಡಿಕೊಳ್ಳಲು ತನಗೆ ಓಟು ಹಾಕದವರ ಮೀಸಲು ವ್ಯವಸ್ಥೆಗೆ ಕತ್ತರಿ ಪ್ರಯೋಗ ಮಾಡಲು ಹೊರಟಿದೆ. ಒಟ್ಟು ಚುನಾವಣೆ ಯಲ್ಲಿ ಗೆದ್ದರೆ ಸಾಕು ಮುಂದೆ ಕೋರ್ಟಿನಲ್ಲಿ ಬಿದ್ದರೆ ಆಗ ನೋಡೋಣ ಎಂದು ಬಸವರಾಜ ಬೊಮ್ಮಾಯಿಯವರು ಗಾಳ ಹಾಕಿ ಕುಳಿತಿದ್ದಾರೆ.

ಸಮಾಜದ ಅವಕಾಶ ವಂಚಿತ ಸಮುದಾಯಗಳಿಗಾಗಿ ಅವರ ಏಳಿಗೆಗಾಗಿ ಅಸ್ತಿತ್ವಕ್ಕೆ ಬಂದು ಮೀಸಲಾತಿ ಎಂಬುದ ರಾಜಕೀಯ ಅಸ್ತ್ರವಾಗಿ ತುಂಬಾ ವರ್ಷಗಳೇ ಆದವು. ಸ್ವಾತಂತ್ರ ನಂತರ ಬಾಬಾಸಾಹೇಬರು ಮಹಾತ್ಮಾ ಗಾಂಧಿಯವರ ಜೊತೆ ಜಗಳಾಡಿ ಪಟ್ಟು ಹಿಡಿದು ತಂದ ಮೀಸಲು ವ್ಯವಸ್ಥೆ ಈಗ ತನ್ನ ನಿಜವಾದ ಅರ್ಥವನ್ನು ಕಳೆದುಕೊಂಡು ಚುನಾವಣೆ ಬಂದಾಗ ಮತ ಗಳಿಕೆಗಾಗಿ ಬಳಕೆಯಾಗುತ್ತದೆ.

ಮುಸಲ್ಮಾನರ ಮೀಸಲನ್ನು ರದ್ದುಗೊಳಿಸಿ ಅದನ್ನು ಲಿಂಗಾಯತ ಮತ್ತು ಒಕ್ಕಲಿಗರಿಗೆ ತಲಾ ಶೇ.2 ರಷ್ಟು ಹಂಚಿಕೆ ಮಾಡಿರುವ ಕುತಂತ್ರದ ಹಿಂದೆ ಇವೆರಡೂ ಸಮುದಾಯಗಳನ್ನು ಅಲ್ಪಸಂಖ್ಯಾತ ಮುಸಲ್ಮಾನರ ವಿರುದ್ಧ ಎತ್ತು ಕಟ್ಟುವ ಅತ್ಯಂತ ದುಷ್ಟ ಹುನ್ನಾರವಿದೆ. ಇಂಥ ಸಂದರ್ಭದಲ್ಲಿ ಕಾಂಗ್ರೆಸ್ ಮತ್ತು ಜಾತ್ಯತೀತ ಜನತಾದಳಗಳು ಹಾಗೂ ಕಮ್ಯುನಿಸ್ಟ್ ಪಕ್ಷಗಳು ಅನ್ಯಾಯಕ್ಕೊಳಗಾದ ಮುಸ್ಲಿಮ್ ಸಮುದಾಯದ ಪರವಾಗಿ ನಿಲ್ಲಬೇಕಾಗಿದೆ. ಈಗ ಇಬ್ಬಂದಿ ನೀತಿ ಅನುಸರಿಸಿದರೆ ಹತಾಶ ಮುಸಲ್ಮಾನರು ಎಸ್‌ಡಿಪಿಐ ಹಾಗೂ ಉವೈಸಿ ಪಾರ್ಟಿಯ ಕಡೆ ಹೋದರೆ ಅಚ್ಚರಿ ಪಡಬೇಕಾಗಿಲ್ಲ. ಒಮ್ಮೆ ಜಾತಿ ಮತ್ತು ಕೋಮು ರಾಜಕಾರಣ ಆರಂಭವಾದರೆ ಅದು ಎಲ್ಲಿಗೆ ಹೋಗಿ ತಲುಪುತ್ತದೆ ಎಂಬುದು ಗೊತ್ತಿಲ್ಲ.

ಚುನಾವಣಾ ದಿನಾಂಕ ಘೋಷಣೆಯಾಗಿ ನೀತಿ ಸಂಹಿತೆ ಜಾರಿಗೆ ಬರುವ ಮುನ್ನ ಬಸವರಾಜ ಬೊಮ್ಮಾಯಿಯವರ ನೇತೃತ್ವದ ,ನಾಗಪುರ ನಿಯಂತ್ರಿತ ಬಿಜೆಪಿ ಸರಕಾರ ತಂದ ಕೋಮುವಾದಿ, ಜನಾಂಗದ್ವೇಷದ ಮೀಸಲಾತಿ ಸೂತ್ರವನ್ನು ಕರ್ನಾಟಕದ ಜನ ವಿರೋಧಿಸಬೇಕಾಗಿದೆ.

ಒಳ ಮೀಸಲಾತಿ ಹೆಸರಿನಲ್ಲಿ ದಲಿತ ಸಮುದಾಯಗಳಿಗೂ ವಿಶೇಷವಾಗಿ ಎಡಗೈ ಪಂಗಡಕ್ಕೆ ಕೂಡ ನ್ಯಾಯವನ್ನು ಒದಗಿಸಿಲ್ಲ.ಇದರಲ್ಲಿ ಯಾವ ಮಹತ್ತರ ಉದ್ದೇಶವೂ ಇಲ್ಲ. ದಲಿತ,ಅಲ್ಪಸಂಖ್ಯಾತ ಸಮುದಾಯಗಳನ್ನು ಮುಗಿಸುವ ದೀರ್ಘಕಾಲದ ಕಾರ್ಯಸೂಚಿ ಇದರಲ್ಲಿ ಅಡಕವಾಗಿದೆ. ಇವತ್ತು ಮುಸಲ್ಮಾನರ ಮೀಸಲಾತಿ ಕಿತ್ತುಕೊಂಡು ಲಿಂಗಾಯತ ಮತ್ತು ಒಕ್ಕಲಿಗರಿಗೆ ನೀಡಿದವರು,ನಾಳೆ ಪರಿಶಿಷ್ಟ ಜಾತಿಗಳ, ವರ್ಗಗಳ ಮೀಸಲು ತಟ್ಟೆಗೆ ಕೈ ಹಾಕುವುದಿಲ್ಲ ಎನ್ನಲು ಗ್ಯಾರಂಟಿ ಏನು?

ಮುಸಲ್ಮಾನರು ಸರಕಾರಿ ನೌಕರಿಗಳಲ್ಲಿ ಅತ್ಯಂತ ಕಡಿಮೆ ಸಂಖ್ಯೆಯಲ್ಲಿ ಇದ್ದಾರೆ. ಅವರೆಂದೂ ತಮ್ಮ ಪಾಲಿನ ಹಕ್ಕಿಗಾಗಿ ಹೋರಾಡಿದವರಲ್ಲ. ಪುಟ್ಟ ಸೈಕಲ್ ರಿಪೇರಿ, ಗ್ಯಾಸ್ ರಿಪೇರಿ ಅಂಗಡಿಗಳನ್ನು ಮತ್ತು ಗ್ಯಾರೇಜುಗಳನ್ನು, ತರಕಾರಿ, ಹಣ್ಣಿನ ಅಂಗಡಿಗಳನ್ನು ಇಟ್ಟುಕೊಂಡು ಯಾರಿಗೂ ಕೈ ಚಾಚದೆ ಸ್ವಾಭಿಮಾನದಿಂದ ಬದುಕುವ ಮುಸಲ್ಮಾನರು ಇತ್ತೀಚಿನ ವರ್ಷಗಳಲ್ಲಿ ಕೇಳುತ್ತಿ ರುವುದು ಶಾಂತಿಯ, ನೆಮ್ಮದಿಯ ಜೀವನವನ್ನು. ಬದುಕಿಗೆ ಭದ್ರತೆಯನ್ನು. ಅದನ್ನೂ ಕೊಡಲಾಗದ ಸರಕಾರ ಅವರ ತಟ್ಟೆಯಲ್ಲಿದ್ದ ಅನ್ನವನ್ನು ಕೈ ಹಾಕಿ ಬಳೆದುಕೊಂಡು ಲಿಂಗಾಯತರ ಒಕ್ಕಲಿಗರ ತಟ್ಟೆಗೆ ಹಾಕಲು ಹೊರಟಿದೆ. ಬಸವಣ್ಣನವರ ಹೆಸರು ಹೇಳುವ ಲಿಂಗಾಯತರು, ಕೆಂಪೇಗೌಡರ ಮತ್ತು ಕುವೆಂಪು ಅವರ ಹೆಸರು ಹೇಳುವ ಒಕ್ಕಲಿಗರು ಸರಕಾರದ ಕಳವು ಮಾಡಿದ ಈ ಮೀಸಲು ಸೂತ್ರವನ್ನು ತಿರಸ್ಕರಿಸಬೇಕು.

ಸರಕಾರಿ ಉದ್ಯಮಗಳನ್ನು ಖಾಸಗಿಯವರ ಮಡಿಲಿಗೆ ಹಾಕುತ್ತಿರುವ, ಹೊರ ಗುತ್ತಿಗೆ ನೇಮಕಗಳ ಮೇಲೆ ಸರಕಾರವನ್ನು ನಡೆಸುತ್ತಿರುವ ನವ ಉದಾರೀಕರಣದ ಇಂದಿನ ಕಾಲದಲ್ಲಿ ಮೀಸಲಾತಿಯಿಂದಲೂ ಹೆಚ್ಚಿನ ಪ್ರಯೋಜನವಿಲ್ಲ. ಇದು ಓಟು ಧ್ರುವೀಕರಣದ ಪ್ರಹಸನ ಮಾತ್ರ.
ವಾಸ್ತವವಾಗಿ ಕರ್ನಾಟಕದ ಬಿಜೆಪಿ ಸರಕಾರ ಪ್ರಕಟಿಸಿರುವ ಮೀಸಲಾತಿ ಸೂತ್ರ ಒಮ್ಮೆಲೆ ಜಾರಿಗೆ ಬರುವುದಿಲ್ಲ. ಕೇಂದ್ರಕ್ಕೆ ಹೋಗಿ, ನ್ಯಾಯಾಲಯಗಳ ಅಗ್ನಿಪರೀಕ್ಷೆಯಲ್ಲಿ ಪಾರಾಗಿ ಬರಬೇಕು. ಈಗ ಅಧಿಕಾರದಲ್ಲಿ ಇರುವವರ ಚಿಂತೆ ಅದಲ್ಲ. ಸದ್ಯ ವಿಧಾನಸಭಾ ಚುನಾವಣೆ ಗೆಲ್ಲಬೇಕು.ಇದಕ್ಕಿಂತ ಹೆಚ್ಚಿನ ಗುರಿ, ಉದ್ದೇಶಗಳಿಲ್ಲ.

Similar News