ರೈತ ಸ್ನೇಹಿ ಟಿಪ್ಪು ಸುಲ್ತಾನ್

Update: 2023-03-27 07:39 GMT

ಟಿಪ್ಪು ರೈತರನ್ನು ತುಂಬಾ ಅಕ್ಕರೆಯಿಂದ ಕಾಣುತ್ತಿದ್ದನು. ಕ್ಷಾಮ ಡಾಮರಗಳು ಸಂಭವಿಸಿದಾಗ ಅವರಿಗೆ ತಕಾವಿ ಸಬ್ಸಿಡಿ ಸಾಲಗಳನ್ನು ಮಂಜೂರು ಮಾಡುತ್ತಿದ್ದನು. ಇದು ರೈತರನ್ನು ಬಡ್ಡಿ ಲೇವಾದೇವಿಗಾರರ ಹಾಗೂ ಭ್ರಷ್ಟ ಅಧಿಕಾರಿಗಳ ಗಾಳಕ್ಕೆ ಬೀಳದಂತೆ ತಡೆಯುತ್ತಿತ್ತು. ಕೃಷಿ ಕಾರ್ಮಿಕನಿಗೆ ಕೂಲಿ ಕೊಡದೆ ಬಿಟ್ಟಿ ದುಡಿಸಿಕೊಳ್ಳಬಾರದೆಂಬ ಕಟ್ಟಾಜ್ಞೆಯೂ ಜಾರಿಯಲ್ಲಿದ್ದಿತು.

ಸ್ವತಂತ್ರ ಕರ್ನಾಟಕದ ಹರಿಕಾರ ಟಿಪ್ಪು ಸುಲ್ತಾನ್. ಅವನ ಕೃಷಿ ನೀತಿ ಇತಿಹಾಸದಲ್ಲಿ ಬಹಳ ಮಹತ್ವಪೂರ್ಣವಾದುದು ಮತ್ತು ಅತ್ಯಾ ಧುನಿಕವೆಂಬಂತಿತ್ತು. 1980ರ ದಶಕದಲ್ಲಿ ಮುಖ್ಯಮಂತ್ರಿ ದೇವರಾಜ ಅರಸರು ಜಾರಿಗೆ ತಂದ ಉಳುವವನಿಗೆ ಭೂಮಿ ಎಂಬ ಭೂ ಸುಧಾರಣಾಕಾಯ್ದೆಯನ್ನು ನೆನಪಿಸುವಂತಿದೆ. ದೇಶದ ಆರ್ಥಿಕತೆಗೆ ಕೃಷಿಯೇ ಬೆನ್ನೆಲುಬು ಎಂಬುದು ಅವನಿಗೆ ಚೆನ್ನಾಗಿ ತಿಳಿದಿತ್ತು. ರೈತ ಸ್ನೇಹಿಯಾದ ಅವನು ಅವರ ಅಭಿವೃದ್ಧಿಗೆ ಅನೇಕಾನೇಕ ಕ್ರಮಗಳನ್ನು ಕೈಗೊಂಡಿದ್ದ. ಈ ದೃಷ್ಟಿಯಿಂದ ಅವಲೋಕಿಸಿದಾಗ ಹೈದರ್, ಟಿಪ್ಪು ಸುಲ್ತಾನ ಅವಧಿಯು ಭಾರತದ ಇತಿಹಾಸದಲ್ಲಿ ಬಹಳ ಮಹತ್ವಪೂರ್ಣವಾದುದು. ಈಸ್ಟ್ ಇಂಡಿಯಾ ಕಂಪೆನಿಯ ಬಂಡವಾಳ ಶಾಹಿ ಬೇರೂರಿದ ಸಂದರ್ಭದಲ್ಲಿ ಟಿಪ್ಪು ಕರ್ನಾಟಕದಲ್ಲಿ ತೀವ್ರ ತರ ಆರ್ಥಿಕಾಭಿವೃದ್ಧಿ ಯನ್ನು ತರಲು ಯತ್ನಿಸಿದನು. ವಿದೇಶಿ ಬಂಡವಾಳಶಾಹಿಗೆ ಭಿನ್ನವಾದ ಮತ್ತು ತನ್ನದೇ ಆದ ಬದಲಿ ಆರ್ಥಿಕ ನೀತಿಯೊಂದನ್ನು ಕಂಡುಕೊಳ್ಳಲು ಆತ ಪ್ರಯತ್ನಿಸಿದನು. ಅದು ಬರೋಬ್ಬರಿ ವಿಕಾಸ ಗೊಂಡಿದ್ದರೆ ಉತ್ತಮ ಫಲಗಳನ್ನು ನೀಡುವುದಿತ್ತು. ಬಿ.ಶೇಕ್ ಅಲಿಯವರು ಎಂದಂತೆ ಭಾರತೀಯ ಆರ್ಥಿಕ ವ್ಯವಸ್ಥೆಗೆ ಪಾಶ್ಚಾತ್ಯ ವ್ಯಾಪಾರಶಾಹಿಯನ್ನು ಕಸಿಮಾಡಿ ಸ್ಥಳೀಯ ಊಳಿಗಮಾನ್ಯ ಪದ್ಧತಿಯ ಹಾನಿಕಾರಕ ಪರಿಣಾಮಗಳನ್ನು ಹೋಗಲಾಡಿಸಿ, ಟಿಪ್ಪು ಭಾರತದ ಬಂಡವಾಳಶಾಹಿ ಬೆಳೆಯಲು ಪ್ರೋತ್ಸಾಹಿಸಿದಂತೆ ತೋರುತ್ತದೆ.

ಆದ್ದರಿಂದ ಭಾರತೀಯ ಆಳರಸರ ನಡುವೆ ಟಿಪ್ಪುವಿನ ಪಾತ್ರ ತುಂಬ ಢಾಳಾಗಿ ಎದ್ದು ಕಾಣುತ್ತದೆ. ಕೃಷಿ, ವ್ಯಾಪಾರ, ಕೈಗಾರಿಕೆ ಹೀಗೆ ಪ್ರತಿಯೊಂದರಲ್ಲಿಯೂ ಆತ ಮೂಲಭೂತ ಬದಲಾವಣೆಗಳನ್ನು ತರಲು ಬಯಸಿದನು. ಈ ನಿಟ್ಟಿನಲ್ಲಿ ಅವನ ಗಮನ ಸೆಳೆದದ್ದು ಕೃಷಿಕ್ಷೇತ್ರ, ಮಾನವ ನಾಗರಿಕತೆಯ ಉಗಮ ವಿಕಾಸಗಳೆಲ್ಲವು ಇದನ್ನೇ ಅವಲಂಬಿಸಿವೆ. ಅನಾದಿಕಾಲದಿಂದ ಬಂದ ಭೂ ಕಂದಾಯ ಪದ್ಧತಿಯೆ ರಾಜಾದಾಯದ ಮೂಲ ಸೆಲೆಯಾಗಿದೆ ಎಂಬುದನ್ನು ಅವನು ಬಲ್ಲವನಾಗಿದ್ದ. ಆದ್ದರಿಂದ ಟಿಪ್ಪು ಊಳಿಗಮಾನ್ಯ ವ್ಯವಸ್ಥೆಯನ್ನು ಆಮೂಲಾಗ್ರವಾಗಿ ಬದಲಿಸಲು ಹೊರಟನು. ಪಾಳೇಗಾರರ ಹತೋಟಿಯಲ್ಲಿದ್ದ ತೆರಿಗೆ ವಸೂಲಿ, ಕಾನೂನು ಮತ್ತು ಪೌರ ಅಧಿಕಾರ ಚಲಾಯಿಸುವ ಹಕ್ಕನ್ನು ಕಿತ್ತುಕೊಂಡನು. ಕಂದಾಯ ಸಂಗ್ರಹವನ್ನು ಸರಕಾರದ ಅಧೀನಕ್ಕೆ ಒಳಪಡಿಸಿದನು. ಇಡೀ ರಾಜ್ಯವನ್ನು ಐದು ಸಾವಿರ ವರಮಾನಗಳ ತುಕಡಿಗಳನ್ನಾಗಿ ಬೇರ್ಪಡಿಸಿ, ಆ ಪ್ರತಿಯೊಂದು ತುಕಡಿಗೂ ಒಬ್ಬ ಅಮಲದಾರ, ಒಬ್ಬ ಶಿರಸ್ತೇದಾರ, ಮೂವರು ಗುಮಾಸ್ತರು, ಒಬ್ಬ ತರ್ಫ್‌ದಾರ, ಒಬ್ಬ ಸರಾಫ, ಒಬ್ಬ ಮುನಷಿ, ಒಬ್ಬ ಗೊಲ್ಲ ಹಾಗೂ ಆರು ಜನ ಸಹಾಯಕರನ್ನು ನೇಮಿಸಿದನು. ಈಗಿನ ಜಿಲ್ಲೆಗಳಂತಿರುವ ಇವುಗಳ ಮೇಲಿನ ಉಸ್ತುವಾರಿಗೆ ಪ್ರಧಾನ ಅಧಿಕಾರಿಯನ್ನು ನೇಮಿಸಿದನು.

ಈ ಬದಲಾವಣೆಯ ಮುಖ್ಯ ಉದ್ದೇಶವೆಂದರೆ ರೈತರು ಮತ್ತು ಸರಕಾರದ ನಡುವೆ ನೇರ ಸಂಬಂಧವನ್ನು ಏರ್ಪಡಿಸುವುದು; ಮಧ್ಯವರ್ತಿಗಳ ಹಾವಳಿಯನ್ನು ತಪ್ಪಿಸುವುದು; ಸೋರಿ ಹೋಗುತ್ತಿದ್ದ ರಾಜಾದಾಯವನ್ನು ತಡೆಗಟ್ಟುವುದು. ಹೀಗೆ ಭೂ ಹಿಡುವಳಿಗಳನ್ನು ಸರಕಾರವೇ ವಹಿಸಿಕೊಂಡಿದ್ದು ಇಲ್ಲಿ ಮಹತ್ವದ ಬದಲಾವಣೆ. ಇದರಿಂದ ಹಳೆಯ ಭೂ ಮಾಲಕರ ಪ್ರಭಾವ ಬಹುಮಟ್ಟಿಗೆ ತಗ್ಗಿತು. ಖಚಿತವಾಗಿ ಕೆಲವು ಸಂದರ್ಭಗಳಲ್ಲಿ ಮಾತ್ರ ಟಿಪ್ಪು ಗುತ್ತಿಗೆ ಬೇಸಾಯ ಪದ್ಧತಿಗೂ ಅವಕಾಶ ಮಾಡಿಕೊಟ್ಟಿದ್ದನು. ಇದರಿಂದ ಕೆಲವು ಬಿಡಿ ರೈತರಿಗೆ ಅನುಕೂಲವಾಗಿದ್ದಿತು.

ಗುತ್ತಿಗೆ ನಿಯಮಾವಳಿಗಳು ಕಠಿಣವಾಗಿದ್ದವು. ಗುತ್ತಿಗೆದಾರರು ಎಲ್ಲಿಯವರೆಗೆ ಕಂದಾಯ ಸಲ್ಲಿಸುತ್ತಿದ್ದರೋ ಅಲ್ಲಿಯವರೆಗೆ ಮಾತ್ರ ಅವರು ಭೂಮಿಯನ್ನು ಇಟ್ಟುಕೊಳ್ಳಬಹುದಾಗಿತ್ತು. ಕರಾರು ಮುಗಿದೊಡನೆ ಆ ಭೂಮಿಯನ್ನು ಬೇರೆ ಗುತ್ತಿಗೆದಾರನಿಗೆ ಕೊಡಲಾ
ಗುತ್ತಿತ್ತು. ಒಟ್ಟಾರೆ ಭೂಮಿಯು ಉಳುವವನಿಗೆ ಮಾತ್ರ ಎಂಬ ಅನಧಿಕೃತ ಶಾಸನ ಜಾರಿಯಲ್ಲಿತ್ತು. ಪಾಳು ಬಿಟ್ಟವನು ಅದರ ಗುತ್ತಿಗೆಯ ಹಕ್ಕನ್ನು ಕಳೆದುಕೊಳ್ಳುತ್ತಿದ್ದನು. ಹೀಗಾಗಿ ಹಿಡುವಳಿಗಳು ವೃಥಾ ಪಾಳು ಬಿದ್ದು ರಾಜಾದಾಯಕ್ಕೆ ಧಕ್ಕೆಯಾಗುವ ಸಂಭವವೇ ಇರುತ್ತಿರಲಿಲ್ಲ. ಟಿಪ್ಪುವಿನ ಭೂ ಉತ್ಪಾದನಾ ವ್ಯವಸ್ಥೆಗೆ ಹಿಡಿದ ಕನ್ನಡಿ ಇದು.

ಮಳೆಯನ್ನು ಆಧರಿಸಿ ಬೆಳೆವ ಬೆಳೆಯಲ್ಲಿ ಮೂರನೇ ಒಂದರಷ್ಟು ಭಾಗವನ್ನೂ, ನೀರಾವರಿ ಸೌಲಭ್ಯವಿದ್ದರೆ ಬೆಳೆಯ ಅರ್ಧದಷ್ಟು ಭಾಗವನ್ನೂ ಸರಕಾರಕ್ಕೆ ಸಲ್ಲಿಸಬೇಕಾಗಿತ್ತು. ಆದರೆ ಈ ನಿಯಮ ಏಕಪ್ರಕಾರವಾಗಿರದೆ ಮಣ್ಣಿನ ತರತಮಗುಣಕ್ಕನುಗುಣವಾಗಿ ರಿಯಾಯಿತಿ ದೊರೆಯುತ್ತಿತ್ತು ಎಂದು ಮನ್ರೋ ಎಂಬ ಇತಿಹಾಸಕಾರ ಅಭಿಪ್ರಾಯ ಪಡುತ್ತಾನೆ.

ಕಬ್ಬು, ಗೋಧಿ ಮತ್ತು ಬಾರ್ಲಿ ಮುಂತಾದ ಆಹಾರ ಧಾನ್ಯಗಳ ಉತ್ಪಾದನೆಗೂ ಮತ್ತು ತೇಗ, ನೀಲಿ, ಹೊನ್ನೆ, ಶ್ರೀಗಂಧ, ಅಡಿಕೆ ಮತ್ತು ಮಾವು ಈ ಮುಂತಾದ ನಗದು ವರಮಾನ ವೃಕ್ಷಗಳ ಅಭಿವೃದ್ಧಿಗೂ ಟಿಪ್ಪು ಹೆಚ್ಚು ಪ್ರಾಮುಖ್ಯತೆ ನೀಡುತ್ತಿದ್ದನು. ಆದರೆ ಕೆಟ್ಟ ನಡವಳಿಕೆಗೆ ಕಾರಣವಾಗುವ ಭಂಗಿ, ಅಫೀಮು, ಗಸಗಸೆ ಮುಂತಾದ ಬೆಳೆಗಳನ್ನು ನಿಷೇಧಿಸಿದ್ದನು. ರೇಷ್ಮೆ ಮುಂತಾದ ನಗದು ಬೆಳೆಗಳಿಗೆ ವಿಶೇಷ ಉತ್ತೇಜನ ನೀಡುತ್ತಿದ್ದನು. ರೇಷ್ಮೆ ಹುಳುವಿನ ಸಂಶೋಧನಾ ಕೇಂದ್ರವನ್ನು ಸ್ಥಾಪಿಸಿ, ಅದಕ್ಕಾಗಿ ತೋಟಗಾರಿಕೆ ಬೆಳೆಗಳ ಮೇಲೆ ವಿಶೇಷ ಆಸಕ್ತಿ ಇತ್ತು. ಅದರ ಪರಿಣಾಮವಾಗಿ ಇವತ್ತಿಗೂ ಶ್ರೀರಂಗಪಟ್ಟಣ ಮತ್ತು ಬೆಂಗಳೂರಿನಲ್ಲಿ ಲಾಲ್‌ಬಾಗ್ ಎಂಬ ಹೆಸರಿನ ತೋಟಗಳಿವೆ. ಅವುಗಳಲ್ಲಿ ಮಾವು, ಸೇಬು, ಕಿತ್ತಲೆ, ಅಂಜೂರ ಮುಂತಾದ ಹಣ್ಣು ಬೆಳೆಗೆ ಆದ್ಯತೆ ಇತ್ತು. ಹಾಗೆಯೇ ಲಾಲ್ ಗುಲಾಬಿ ಹೂ ವನಗಳೂ ಅದರಲ್ಲಿದ್ದವು.

ಟಿಪ್ಪು ರೈತರನ್ನು ತುಂಬಾ ಅಕ್ಕರೆಯಿಂದ ಕಾಣುತ್ತಿದ್ದನು. ಕ್ಷಾಮ ಡಾಮರಗಳು ಸಂಭವಿಸಿದಾಗ ಅವರಿಗೆ ತಕಾವಿ ಸಬ್ಸಿಡಿ ಸಾಲಗಳನ್ನು ಮಂಜೂರು ಮಾಡುತ್ತಿದ್ದನು. ಇದು ರೈತರನ್ನು ಬಡ್ಡಿ ಲೇವಾದೇವಿಗಾರರ ಹಾಗೂ ಭ್ರಷ್ಟ ಅಧಿಕಾರಿಗಳ ಗಾಳಕ್ಕೆ ಬೀಳದಂತೆ ತಡೆಯುತ್ತಿತ್ತು. ಕೃಷಿ ಕಾರ್ಮಿಕನಿಗೆ ಕೂಲಿ ಕೊಡದೆ ಬಿಟ್ಟಿ ದುಡಿಸಿಕೊಳ್ಳಬಾರದೆಂಬ ಕಟ್ಟಾಜ್ಞೆಯೂ ಜಾರಿಯಲ್ಲಿದ್ದಿತು.

ಕಂದಾಯವನ್ನು ಮೂರು ಕಂತುಗಳಲ್ಲಿ ವಸೂಲಿ ಮಾಡಲಾಗುತ್ತಿತ್ತು. ಕೆಲವೊಮ್ಮೆ ನೈಸರ್ಗಿಕ ಕಾರಣಗಳ ನಿಮಿತ್ತ ಕಂದಾಯದಲ್ಲಿ ವಿನಾಯಿತಿ ದೊರೆಯುತ್ತಿತ್ತು. ಅಧಿಕೃತವಾದ ಇನಾಂ ಭೂಮಿಯನ್ನು ಮುಂದುವರಿಸಿ ಅನಧಿಕೃತವಾದುವುಗಳನ್ನು ಮುಟ್ಟು ಗೋಲು ಹಾಕಿಕೊಳ್ಳಲಾಗುತ್ತಿತ್ತು. ದೇವಾಲಯ, ಮಸೀದಿ ಹಾಗೂ ಬ್ರಾಹ್ಮಣರಿಗೆ ಹೊಸದಾಗಿ ಇನಾಂಗಳನ್ನು ಬಿಟ್ಟು ಕೊಡಲಾಗಿತ್ತು.

ಖಾಸಗಿಯಾಗಿ, ಕೆರೆ, ಕಟ್ಟೆ, ಬಾವಿ ಕಾಲುವೆಗಳನ್ನು ನಿರ್ಮಿಸುವ ಹಾಗೂ ಅವುಗಳನ್ನು ದುರಸ್ತಿ ಮಾಡಿಸಿಕೊಳ್ಳುವವರಿಗೂ ಇನಾಂಗಳನ್ನು ಕೊಟ್ಟು ಟಿಪ್ಪು ಪ್ರೋತ್ಸಾಹಿಸುತ್ತಿದ್ದನು. ಒಟ್ಟಾರೆ ಜಲಾಶಯಗಳನ್ನು ನಿರ್ಮಿಸುವ, ನಿರ್ವಹಿಸುವ, ಸಂರಕ್ಷಿಸುವ ನೀರಗಂಟಿಗಳಿಗೆ ಸಾಕಷ್ಟು ಉತ್ತೇಜನವಿತ್ತೆಂದು ಬುಖಾನನ್ ಅಭಿಪ್ರಾಯಪಡುತ್ತಾನೆ. ಕೆಲವು ಇನಾಂಗಳು ಆಜೀವ ಪರ್ಯಂತವೂ ಇನ್ನು ಕೆಲವು ಆನುವಂಶೀಯ ವಾಗಿಯೂ ದತ್ತವಾಗುತ್ತಿದ್ದವು. ಟಿಪ್ಪು ತನ್ನ ಅಧಿಕಾರಿಗಳಲ್ಲಿ ಕೆಲವರಿಗೂ ಇನಾಂ ಕೊಟ್ಟಿರುತ್ತಾನೆ. ಅವರ ಕಾರ್ಯದಕ್ಷತೆಗೆ ಬಹುಮಾನವಾಗಿತ್ತು ಇದು.

ಕಂದಾಯ ನಿಗದಿ ಮತ್ತು ವಸೂಲಿ ಜವಾಬ್ದಾರಿ ಪೂರ್ತಿ ಜಿಲ್ಲಾಧಿಕಾರಿ ಆಸಿಫ್‌ನನ್ನು ಅವಲಂಬಿಸಿತ್ತು. ಟಿಪ್ಪು ಬಹುಮಟ್ಟಿಗೆ ನ್ಯಾಯ ವಿಧಾಯಕ ತೆರಿಗೆ ವಸೂಲಿ ವಿಧಾನವನ್ನು ಅಳವಡಿಸಿಕೊಂಡಿದ್ದನು. ಸ್ಥಳ ಪರಿಶೀಲನೆಯ ನಂತರವೇ ಕಂದಾಯವನ್ನು ನಿಗದಿ ಮಾಡಲಾಗುತ್ತಿತ್ತು. ಅವೆಲ್ಲವೂ ಬರವಣಿಗೆಯಲ್ಲಿ ದಾಖಲಾಗುತ್ತಿದ್ದ ಕಾರಣ ಅವುಗಳಲ್ಲಿ ಏರುಪೇರಾಗಲು ಸಾಧ್ಯವಿರಲಿಲ್ಲ. ಅಕಸ್ಮಾತ್ ಏರುಪೇರಾದರೆ ಆಸಿಫ್‌ನನ್ನು ಹೊಣೆಗಾರನನ್ನಾಗಿ ಮಾಡಲಾಗುತ್ತಿತ್ತು.

ಅಧಿಕಾರಿಗಳ ಭ್ರಷ್ಟತೆ ಹಾಗೂ ದೌರ್ಬಲ್ಯಗಳ ಬಗ್ಗೆ ಟಿಪ್ಪುವಿಗೆ ಚೆನ್ನಾಗಿ ಅರಿವಿತ್ತು. ಆದ್ದರಿಂದ ಕಟ್ಟೆಚ್ಚರದ ತಪಾಸಣೆಗೆ ಆಜ್ಞೆ ಮಾಡಿದ್ದನು. ಮನ ಬಂದಂತೆ ದಂಡ ವಿಧಿಸುವ ಹಾಗೂ ಅನ್ಯಾಯದ ತೆರಿಗೆ ವಸೂಲಾತಿಗೆ ನಿಷೇಧವಿತ್ತು. ಊರಿಗೊಬ್ಬ ಪಟೇಲನಿರುತ್ತಿದ್ದ. ಆತ ತನ್ನ ಕಾರ್ಯಭಾರವನ್ನು ಸಮರ್ಥ ರೀತಿಯಲ್ಲಿ ನಿರ್ವಹಿಸದಿದ್ದರೆ ಇನ್ನೊಬ್ಬ ಉತ್ತಮ ರೈತನನ್ನು ಪಟೇಲನ ಸ್ಥಾನದಲ್ಲಿ ನೇಮಿಸಲಾಗುತ್ತಿತ್ತು. ಲೆಕ್ಕಪತ್ರಗಳು ಕರಾರುವಾಕ್ಕಾಗಿ ಇಲ್ಲದಿದ್ದರೆ ಶ್ಯಾನುಭೋಗನೇ ಉತ್ತರದಾಯಿತ್ವಕ್ಕೆ ಬದ್ಧನಾಗಿರಬೇಕಾಗಿತ್ತು.

ಹಿಡುವಳಿಗಳನ್ನು ತರಿ ಹಾಗೂ ಖುಷ್ಕಿ ಎಂದು ವರ್ಗೀಕರಿಸಿ ಅವುಗಳಿಗೆ ಬೇಕಾದ ಬೀಜ, ಗೊಬ್ಬರದ ಪ್ರಮಾಣಗಳನ್ನೂ ನಿಗದಿ ಮಾಡಲಾಗುತ್ತಿತ್ತು. ತಾನು ಸಲ್ಲಿಸಬೇಕಾದ ಗುತ್ತಿಗೆ ಎಷ್ಟೆಂಬುದರ ಬಗ್ಗೆ ಗುತ್ತಿಗೆದಾರನಿಗೆ ಮೊದಲೇ ತಿಳುವಳಿಕೆ ಇರುತ್ತಿತ್ತು. ಇದು ಅವನಿಗೆ ಭೂಮಿಯ ಬಗ್ಗೆ ಕಾಳಜಿ ಬರುವಂತೆ ಪ್ರೇರೇಪಣೆ ನೀಡು ತ್ತಿತ್ತು. ಕಾರ್ಯಧ್ಯಕ್ಷನಾದ ರೈತನಿಗೆ ಹೆಚ್ಚೆಚ್ಚು ಹಿಡುವಳಿಗಳನ್ನು ನೀಡಲಾಗುತ್ತಿತ್ತು. ಖುಷ್ಕಿ ಮತ್ತು ತರೀ ಭೂಮಿಗಳಿಗೆ ಪ್ರತ್ಯೇಕ ಕಂದಾಯ ದರಗಳಿದ್ದವು. ಮತ್ತೊಂದು ಗಮನಾರ್ಹ ಸಂಗತಿಯೆಂದರೆ ಆಸಿಫನೇ ಸ್ವತಃ ಕೃಷಿಕನ ಹಿಡುವಳಿಗಳಿಗೆ ಸಂಬಂಧಿಸಿದ ಸರ್ವೇ ನಡೆಸಿ ಮಣ್ಣಿನ ತರತಮ ಗುಣಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಕಂದಾಯವನ್ನು ನಿಗದಿಗೊಳಿಸಬೇಕಾಗಿತ್ತು. ಈ ಬಗೆಯ ಪ್ರತ್ಯಕ್ಷ ಸರ್ವೇಗಳಿಂದ ರೈತರ ಜಮೀನಿನ ನಿಜಪರಿಸ್ಥಿತಿ ಸರಕಾರದ ಅರಿವಿಗೆ ಬರುತ್ತಿತ್ತು. ಸಾಮಾನ್ಯವಾಗಿ ವರ್ಷಾಂತ್ಯದ ರಮಝಾನ್ ವೇಳೆಯಲ್ಲಿ ಟಿಪ್ಪು ರಾಜ್ಯದ ಮೂಲೆ ಮೂಲೆಗಳಿಂದ ಬಂದ ಮಾಹಿತಿಗಳನ್ನು ಪರೀಕ್ಷಿಸಿ ಕ್ರಮ ತೆಗೆದುಕೊಳ್ಳುತ್ತಿದ್ದನು.

ಪ್ರತೀ ವರ್ಷವೂ ಮಳೆ ಬೆಳೆಯ ಪ್ರಮಾಣ, ಪಾಳು ಬಿದ್ದಿರುವ ಭೂಮಿಗಳು, ಕೆರೆ ಕಟ್ಟೆ ಬಾವಿ ಕಾಲುವೆಗಳ ವಿವರಗಳನ್ನೊಳಗೊಂಡ ಸರ್ವೇಯನ್ನು ಕಂದಾಯ ಇಲಾಖೆಯು ಕೈಗೊಳ್ಳಬೇಕಾಗಿತ್ತು. ಮಣ್ಣನ್ನು ನಾಲ್ಕು ತೆರನಾಗಿ ವಿಂಗಡಿಸಿ ಸರಕಾರವೇ ಬೀಜ ವಿತರಿಸಿ
ಆ ಒಂದೊಂದರಲ್ಲೂ ಪ್ರತಿ ಖಂಡುಗ ಬೀಜಕ್ಕೆ ಯಾವ ಪ್ರಮಾಣ ದಲ್ಲಿ ಫಸಲು ಬಂದಿದೆ ಎಂಬುದನ್ನು ದಾಖಲಿಸಿ ಕೇಂದ್ರಕ್ಕೆ ಕಳುಹಿಸ ಬೇಕಾಗಿದ್ದಿತು. ಇಷ್ಟೆಲ್ಲ ಮಾಹಿತಿಗಳ ವಿವರಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿದರೆ ಟಿಪ್ಪುವಿಗಿದ್ದ ಕೃಷಿ ಸಂಬಂಧವಾದ ಪರಿಜ್ಞಾನ ನಮಗೆ ವಿಸ್ಮಯ ತರಿಸುತ್ತದೆ. ಅವನ ಕೃಷಿ ನೀತಿಯನ್ನು ಸಾರಾಂಶ ರೂಪವಾಗಿ ಹೇಳಬೇಕೆಂದರೆ ರೈತರಿಗೆ ಪ್ರಚೋದನಾತ್ಮಕವೂ ಅಧಿಕಾರಿಗಳ ಸಂಬಂಧದಲ್ಲಿ ನಿಷ್ಠುರ ಪ್ರಯೋಗಾತ್ಮಕವೂ ಆಗಿತ್ತೆಂದು ತಿಳಿದುಬರುತ್ತದೆ.

 ರೈತರ ಪುರೋಭಿವೃದ್ಧಿಗೆ ಅಡ್ಡಲಾಗಿ ಬರುವ ಪ್ರತಿಯೊಂದು ಎಡರು ತೊಡರುಗಳನ್ನು ಪರಿಹರಿಸಬೇಕೆಂಬುದೇ ಟಿಪ್ಪುವಿನ ಮೂಲ ಧ್ಯೇಯವಾಗಿದ್ದಿತು. ಏಕೆಂದರೆ ಹೊಲ ಗದ್ದೆಗಳಲ್ಲಿ ದುಡಿಯುವ ರೈತಾಪಿ ವರ್ಗವು ರಾಷ್ಟ್ರದ ಉತ್ಪಾದನೆಯನ್ನು ಹೆಚ್ಚಿಸುವವರು ಎಂಬ ಸ್ಪಷ್ಟ ತಿಳುವಳಿಕೆ ಅವನಿಗಿದ್ದಿತು. ಆದ್ದರಿಂದ ಯಾವುದೇ ಬೆಲೆ ತೆತ್ತಾದರೂ ಅವರ ಹಿತ ಕಾಯಬೇಕೆಂದು ಆತ ಕಾರ್ಯಶೀಲನಾಗಿದ್ದನು. ಯಾವ ಕಾರಣಕ್ಕೂ ಯಾವ ಬಗೆಯ ಬಲಪ್ರಯೋಗವೂ ಅವರ ಮೇಲೆ ಸಲ್ಲದೆಂದು ಕಟ್ಟಾಜ್ಞೆ ವಿಧಿಸಿದ್ದ.

ಆದುದರಿಂದಲೇ ನಮ್ಮ ಜನಪದರು ಟಿಪ್ಪು ಸುಲ್ತಾನನನ್ನು ಕುರಿತು ಲಾವಣಿಗಳನ್ನು ಕಟ್ಟಿ ಹಾಡಿದರು. ಸಾಹಿತಿಗಳು ಪದ್ಯ, ಕಥೆ, ಕಾದಂಬರಿ, ನಾಟಕ ಮುಂತಾಗಿ ರಚಿಸಿದರು. ಕಲಾವಿದರು ಟಿಪ್ಪುವನ್ನು ಕುರಿತಾಗಿ ಅನೇಕ ಕಲಾಕೃತಿಗಳು ಮತ್ತು ಭಿತ್ತಿ ಚಿತ್ರಗಳನ್ನು ಬರೆದರು. ಫ್ರೆಂಚ್ ಸಂಶೋಧಕನೊಬ್ಬ, ಪ್ರಪಂಚದ ಚರಿತ್ರೆಯಲ್ಲಿ ತನ್ನ ನಾಡಿನ ರಕ್ಷಣೆಗಾಗಿ ಇಬ್ಬರು ಮಕ್ಕಳನ್ನು ಶತ್ರುವಿಗೆ ಒತ್ತೆ ಇಟ್ಟಿದ್ದು ಮಾತ್ರವಲ್ಲದೆ, ರಣಾಂಗಣದಲ್ಲಿ ಬ್ರಿಟಿಷರ ವಿರುದ್ಧ ಯುದ್ಧ ಮಾಡುತ್ತಲೇ ಮಡಿದ ಏಕೈಕ ದೊರೆ ಟಿಪ್ಪು ಮಾತ್ರ ಎಂದಿದ್ದಾನೆ. ಐತಿಹಾಸಿಕ ಸತ್ಯ ಇಂತಿದ್ದರೂ ರಾಜ್ಯದ ಆಡಳಿತದ ಚುಕ್ಕಾಣಿ ಹಿಡಿದಿರುವ ಬಿಜೆಪಿಯು, ಪ್ರಸಕ್ತ ಮತ ಗಳಿಕೆಗಾಗಿ ವಕ್ಕಲಿಗರ ಸ್ವಾಭಿಮಾನಕ್ಕೆ ಬರೆ ಎಳೆದು, ಅಲ್ಪಸಂಖ್ಯಾತರನ್ನು ಹಣಿದು, ಉರಿಗೌಡ -ನಂಜೇಗೌಡ ಎಂಬ ವಕ್ಕಲಿಗ ಯೋಧರು ಟಿಪ್ಪು ಹತ್ಯೆ ಮಾಡಿದರು ಎಂದು ಸುಳ್ಳು ಕತೆ ಕಟ್ಟಿ, ಸಾಧಿಸ ಹೊರಟಿರುವುದು ವಿಪರ್ಯಾಸ!

Similar News