ವಿಶ್ವ ಚಾಂಪಿಯನ್‌ಶಿಪ್‌ ನ ಹಣದಿಂದ ತಂದೆ, ತಾಯಿಯನ್ನು ಉಮ್ರಾ ಯಾತ್ರೆಗೆ ಕಳುಹಿಸಲು ನಿಖಾತ್‌ ಝರೀನ್‌ ನಿರ್ಧಾರ

Update: 2023-03-27 09:22 GMT

ಹೊಸದಿಲ್ಲಿ: ವಿಶ್ವಚಾಂಪಿಯನ್‌ ಶಿಪ್‌ ನಲ್ಲಿ ಗೆದ್ದರೆ ಮರ್ಸಿಡಿಸ್‌ ಖರೀದಿಸುವ ತನ್ನ ಹಿಂದಿನ ನಿರ್ಧಾರವನ್ನು ಬದಲಾಯಿಸಿರುವ ನಿಖಾತ್‌ ಝರೀನ್‌ ಇದೀಗ ತನಗೆ ದೊರೆತ ಬಹುಮಾನದ ಹಣದಿಂದ ತನ್ನ ತಂದೆ ತಾಯಿಯನ್ನು ಉಮ್ರಾ ಯಾತ್ರಗೆ ಕಳುಹಿಸಬೇಕೆಂದು ನಿರ್ಧರಿಸಿದ್ದಾಗಿ ವರದಿಯಾಗಿದೆ.

ರವಿವಾರ ನಡೆದ ವಿಶ್ವ ಚಾಂಪಿಯನ್‌ಶಿಪ್‌ ಬಾಕ್ಸಿಂಗ್‌ ಫೈನಲ್‌ ನಲ್ಲಿ ವಿಯೆಟ್ನಾಂನ ನ್ಗುಯೆನ್ ಥಿ ಟಾಮ್ ವಿರುದ್ಧ ನಿಖತ್ 5-0 ಅಂತರದಿಂದ ಗೆದ್ದು ಎರಡನೇ ವಿಶ್ವ ಚಾಂಪಿಯನ್‌ಶಿಪ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡರು. ಪ್ರಶಸ್ತಿಯೊಂದಿಗೆ ಒಂದು ಲಕ್ಷ ಅಮೆರಿಕನ್‌ ಡಾಲರ್‌ ಹಾಗೂ ಮಹೀಂದ್ರಾ ಥಾರ್‌ ಅನ್ನು ಉಡುಗೊರೆಯಾಗಿ ಪಡೆದಿದ್ದರು. ತಮ್ಮ ಬಹುಮಾನದ ಹಣದಲ್ಲಿ ಮರ್ಸಿಡಿಸ್‌ ಖರೀದಿಸುವುದಾಗಿ ಅವರು ಈ ಹಿಂದೆ ಹೇಳಿದ್ದರು. 

"ಸದ್ಯ ರಂಝಾನ್‌ ತಿಂಗಳು ನಡೆಯುತ್ತಿದೆ, ನಾನು ನನ್ನ ಹೆತ್ತವರನ್ನು ಉಮ್ರಾ ಯಾತ್ರೆಗೆ ಕಳುಹಿಸಲು ಬಯಸಿದ್ದೇನೆ. ಈ ಕುರಿತು ನಾನು ಮನೆಯಲ್ಲಿ ಮಾತನಾಡುತ್ತೇನೆ ಎಂದು ನಿಝಾಮಾಬಾದ್‌ ಮೂಲದ ನಿಖಾತ್‌ ಝರೀನ್‌ ಪಂದ್ಯದ ಬಳಿಕ ಸುದ್ದಿಗಾರರಿಗೆ ತಿಳಿಸಿದರು. ಉಮ್ರಾ ಎನ್ನುವುದು ಮಕ್ಕಾ ಹಾಗೂ ಮದೀನಾ ಸಂದರ್ಶನವಾಗಿದ್ದು, ಹಜ್‌ಗಿಂತಲೂ ಕೊಂಚ ಕಡಿಮೆ ವಿಧಿವಿಧಾನಗಳಿರುತ್ತವೆ.

"ಪ್ರತಿಯೊಬ್ಬರಿಗೂ ಯಶಸ್ಸಿನ ಮಂತ್ರವಿದೆ. ನಾನು ವಿಷಯಗಳನ್ನು ದೃಶ್ಯೀಕರಿಸುತ್ತೇನೆ. ನಾನು ಸಕಾರಾತ್ಮಕವಾಗಿ ಯೋಚಿಸಲು ಇಷ್ಟಪಡುತ್ತೇನೆ. ನಾನು 'ಚಾಂಪಿಯನ್' ಎಂದು ಬರೆದು ಸ್ಟಿಕಿ ನೋಟ್‌ನಲ್ಲಿ ಚಿನ್ನದ ಪದಕವನ್ನು ಬಿಡಿಸಿ ಅದನ್ನು ನನ್ನ ಹಾಸಿಗೆಯ ಮೇಲೆ ಅಂಟಿಸಿದ್ದೇನೆ. ಪ್ರತಿದಿನ ನಾನು ಎಚ್ಚರವಾದಾಗ ಅದನ್ನು ನೋಡುತ್ತೇನೆ, ನಾನು ಮಲಗಲು ಹೋದಾಗ ಅದನ್ನು ನೋಡುತ್ತೇನೆ. ಇದು ನನ್ನನ್ನು ಚೆನ್ನಾಗಿ ತಯಾರಾಗಲು ಪ್ರೇರೇಪಿಸುತ್ತದೆ. ಕಳೆದ ವಿಶ್ವ ಚಾಂಪಿಯನ್‌ಶಿಪ್‌ಗಳಿಗಾಗಿ ನಾನು ಅದನ್ನು ಮಾಡಿದ್ದೇನೆ ಎಂದು ಝರೀನ್‌ ಹೇಳಿದ್ದಾರೆ.

Similar News