ರಾಹುಲ್‌ ಗಾಂಧಿಯನ್ನು ನಿಂದಿಸಲು 'ಕಳ್ಳನ ಕಥೆ' ಹೇಳಿದ ಸುಧೀರ್‌ ಚೌಧರಿ: ಯುವ ಕಾಂಗ್ರೆಸ್‌ ನಿಂದ ಕಾನೂನು ನೋಟಿಸ್‌

Update: 2023-03-27 14:47 GMT

ಹೊಸದಿಲ್ಲಿ: 'ಆಜ್‌ ತಕ್‌' (Aaj Tak) ವಾಹಿನಿ ಮತ್ತದರ ಪ್ರಮುಖ ನಿರೂಪಕ ಸುಧೀರ್‌ ಚೌಧರಿ (Sudhir Chaudhary) ಅವರ ವಿರುದ್ಧ ಯುವ ಕಾಂಗ್ರೆಸ್‌ ನೋಟಿಸ್‌ ಜಾರಿಗೊಳಿಸಿದೆ. ಪ್ರೈಮ್‌ ಟೈಮ್‌ ಶೋ ಬ್ಲ್ಯಾಕ್‌ ಎಂಡ್‌ ವೈಟ್‌ನಲ್ಲಿ ಕಳೆದ ವಾರ ಪ್ರಸಾರಗೊಂಡ ʼಇಮ್ಯಾಜಿನರಿ ಸ್ಟೋರಿʼಯಲ್ಲಿ ರಾಹುಲ್‌ ಗಾಂಧಿ ಅವರನ್ನು ಅವಮಾನಿಸಲಾಗಿದೆ ಎಂದು ಯುವ ಕಾಂಗ್ರೆಸ್‌ ಆರೋಪಿಸಿದೆ.

ಈ ನಿರ್ದಿಷ್ಟ ವೀಡಿಯೋವನ್ನು  ಆಜ್‌ ತಕ್‌ ವಾಹಿನಿ ಎಲ್ಲಾ ಪ್ಲಾಟ್‌ಫಾರ್ಮ್‌ಗಳಿಂದ ತೆಗೆದುಹಾಕದ ಹೊರತು ವಾಹಿನಿ ಮತ್ತು ನಿರೂಪಕ ಚೌಧುರಿ ವಿರುದ್ಧ ಸಿವಿಲ್‌ ಮತ್ತು ಕ್ರಿಮಿನಲ್‌ ಪ್ರಕರಣ ದಾಖಲಿಸಲಾಗುವುದು ಎಂದು ನೋಟಿಸ್‌ನಲ್ಲಿ ಹೇಳಲಾಗಿದೆ.

"ರಾಹುಲ್‌ ಗಾಂಧಿ ಅವರು ನೀರವ್‌ ಮೋದಿ ಮಾಡಿದ ತಪ್ಪಿಗೆ ಆಕ್ಷೇಪಿಸಿ ಈ ಕುರಿತು ಸರಕಾರದ ಹೊಣೆಗಾರಿಕೆ ಬಗ್ಗೆ ಮಾತನಾಡಿದ್ದರೆಂದು ತಿಳಿದಿರುವ ಹೊರತಾಗಿ ಕಳ್ಳತನದ ಅಪರಾಧಕ್ಕಾಗಿ ಸೆರೆಹಿಡಿಯಲಾದ ಯಾರೊಂದಿಗೋ ರಾಹುಲ್‌ ಗಾಂಧಿಯನ್ನು ದುರುದ್ದೇಶದಿಂದ ಹೋಲಿಕೆ ಮಾಡಿದ್ದಾರೆ," ಎಂದು ವಕೀಲ ಕಪಿಲ್‌ ಮದನ್‌ ಅವರ ಮೂಲಕ ಯುವ ಕಾಂಗ್ರೆಸ್‌ ಕಾನೂನು ಘಟಕ ಕಳುಹಿಸಿದ  ನೋಟಿಸ್‌ ತಿಳಿಸಿದೆ.

ರಾಹುಲ್‌ ಗಾಂಧಿ ಅವರನ್ನು 'ಮೋದಿ ಉಪನಾಮೆ' ಕುರಿತು ಅವರು ಆಡಿದ ಮಾತುಗಳಿಗೆ ಸಂಬಂಧಿಸಿದ ಮಾನನಷ್ಟ ಪ್ರಕರಣದಲ್ಲಿ ದೋಷಿಯೆಂದು ಘೋಷಿಸಲಾದ ಬೆನ್ನಲ್ಲೇ ಸಂಸದರಾಗಿ ಅವರನ್ನು ಅನರ್ಹಗೊಳಿಸಿದ ನಂತರ ಮಾರ್ಚ್‌ 24 ರಂದು ಪ್ರಸಾರವಾದ ಕಾರ್ಯಕ್ರಮದಲ್ಲಿ ಸುಧೀರ್‌ ಚೌಧುರಿ ಆಕ್ಷೇಪಾರ್ಹ ಮಾತುಗಳನ್ನಾಡಿದ್ದರು.

ರಾಹುಲ್‌ ಅವರ ಹೇಳಿಕೆಯನ್ನು ಟೀಕಿಸುವ ಸಲುವಾಗಿ ಸುಧೀರ್‌ ಚೌಧುರಿ ತಮ್ಮ ಶೋದಲ್ಲಿ ಕಾಲ್ಪನಿಕ್‌ ಕಹಾನಿ (ಕಲ್ಪನೆಯ ಕಥೆ) ಅನ್ನು ಹೇಳಿದರಲ್ಲದೆ ಇತರರ ಅಪರಾಧಗಳನ್ನು ಬೊಟ್ಟು ಮಾಡುವ ಮೂಲಕ ರಾಹುಲ್‌ ಅವರ ತಪ್ಪುಗಳು ಕಡಿಮೆಯಾಗುವವೇ ಎಂದು ಪ್ರಶ್ನಿಸಲು ಈ ಕಥೆ ಹೇಳುತ್ತಿರುವುದಾಗಿ ತಿಳಿಸಿದ್ದರು.

ಹೆದ್ದಾರಿಯಲ್ಲಿ ಜನರ ದರೋಡೆಗೈದ ಕ್ರಿಮಿನಲ್‌ ಒಬ್ಬನನ್ನು ಪೊಲೀಸರು  ಸೆರೆಹಿಡಿದು ಪ್ರಶ್ನಿಸಿದ್ದರು ಎಂದು ಕಥೆಯನ್ನು ಸುಧೀರ್‌ ಚೌಧುರಿ ವಿವರಿಸಿದ್ದರು. ತನಗಿಂತಲೂ ದೊಡ್ಡ ಕಳ್ಳರಾದ ನೀರವ್‌ ಮೋದಿ, ಲಲಿತ್‌ ಮೋದಿ ಮತ್ತು ಮೆಹುಲ್‌ ಚೊಕ್ಸಿ ಇದ್ದಾರೆಂದು ಈ ಸಣ್ಣ ಕಳ್ಳ ಹೇಳುತ್ತಾನೆ ಹಾಗೂ ಪೊಲೀಸರು ಅವರನ್ನೇಕೆ ಹಿಡಿಯುವುದಿಲ್ಲ ಹಾಗೂ ಪೊಲೀಸರಿಗೆ ಅವರನ್ನು ಬಂಧಿಸಲು ಅಸಾಧ್ಯವಾದರೆ ತಮ್ಮಂತಹ ಸಣ್ಣ ಅಪರಾಧಿಗಳನ್ನು ಏಕೆ ಬಂಧಿಸುತ್ತಿದ್ದಾರೆ ಎಂದು ಪ್ರಶ್ನಿಸುತ್ತಾನೆ ಎಂದು ತಮ್ಮ ಕಥೆ ವಿವರಿಸಿದ್ದರು.

ಇತರರ ಅಪರಾಧಗಳನ್ನು ಪಟ್ಟಿ ಮಾಡುವ ಮೂಲಕ ಸ್ವಂತ ಅಪರಾಧಗಳು ಕಡಿಮೆಯಾಗುವುದಿಲ್ಲ ಹಾಗೂ ಕಾಂಗ್ರೆಸ್‌ ಪಕ್ಷ ಇದನ್ನೇ ಮಾಡುತ್ತಿದೆ ಎಂದು ಸುಧೀರ್‌ ಚೌಧುರಿ ಹೇಳಿದ್ದರು.

ಯುವ ಕಾಂಗ್ರೆಸ್‌ ಕಳುಹಿಸಿದ ಕಾನೂನು ನೋಟಿಸ್‌ ಅನ್ನು ಯುವ ಕಾಂಗ್ರೆಸ್‌ ಅಧ್ಯಕ್ಷ ಬಿ ವಿ ಶ್ರೀನಿವಾಸ್‌ ಟ್ವಿಟರ್‌ನಲ್ಲಿ ಪೋಸ್ಟ್‌ ಮಾಡಿದ ನಂತರ  ಪ್ರತಿಕ್ರಿಯಿಸಿದ ಸುಧೀರ್‌ ಚೌಧುರಿ," ನಾನು ಭಾರತದ ದನಿಗಾಗಿ ಹೋರಾಡುತ್ತಿದ್ದೇನೆ. ನಾನು ಯಾವುದೇ ಬೆಲೆ ತೆರಲು ಸಿದ್ಧ," ಎಂದು ಬರೆದಿದ್ದಾರೆ.

Similar News