ಕಾರಿಗೆ ಫುಲ್ ಟ್ಯಾಂಕ್ ಪೆಟ್ರೋಲ್ ಹಾಕಿಸಬೇಡಿ: ಸರ್ಕಾರ ಈ ಸಲಹೆ ನೀಡಲು ಕಾರಣವೇನು?

Update: 2023-03-27 15:04 GMT

ಹೊಸ ದಿಲ್ಲಿ: ನೀವು ನಿಮ್ಮ ಕಾರು, ಸ್ಕೂಟರ್ ಅಥವಾ ಮೋಟರ್ ಬೈಕ್ ರಿಸರ್ವ್ ಸ್ಥಿತಿಗೆ ಬಂದು, ಅವುಗಳ ಟ್ಯಾಂಕ್ ಅನ್ನು ಪೂರ್ತಿ ಭರ್ತಿ ಮಾಡಲು ಪೆಟ್ರೋಲ್ ಬಂಕ್‌ಗೆ ತೆಗೆದುಕೊಂಡು ಹೋದಾಗ, ನಿಮ್ಮ ವಾಹನವು ಮೂಲ ವಾಹನ ತಯಾರಕರು ಪ್ರತಿಪಾದಿಸಿರುವ ಫುಲ್ ಟ್ಯಾಂಕ್ ಸಾಮರ್ಥ್ಯಕ್ಕಿಂತ ಹೆಚ್ಚು ಪೆಟ್ರೋಲ್/ಡೀಸೆಲ್ ತುಂಬಿಸಿಕೊಳ್ಳುವುದನ್ನು ನೀವು ಗಮನಿಸಿಯೇ ಇರುತ್ತೀರಿ.

ಇದೀಗ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ಸರಬರಾಜು ಸಚಿವಾಲಯವು ವಾಹನಗಳ ಮಾಲಕರಿಗೆ ವಾಹನಗಳ ಟ್ಯಾಂಕ್ ಅನ್ನು ಪೂರ್ತಿ ಭರ್ತಿ ಮಾಡದಂತೆ ಮಾರ್ಚ್ 6, 2023ರಂದು ಸುತ್ತೋಲೆಯೊಂದನ್ನು ಹೊರಡಿಸಿದೆ ಎಂದು timesofindia.com ವರದಿ ಮಾಡಿದೆ.

ಈ ಸುತ್ತೋಲೆಯ ಪ್ರಕಾರ, ಕಾನೂನು ಮಾಪನ ವಿಭಾಗವು ಪೆಟ್ರೋಲಿಯಂ ವರ್ತಕರ ಒಕ್ಕೂಟದಿಂದ ದ್ವಿಚಕ್ರ ವಾಹನಗಳು ಹಾಗೂ ನಾಲ್ಕು ಚಕ್ರ ವಾಹನಗಳ ಸೇವಾ ಹೊತ್ತಿಗೆಯಲ್ಲಿ ಟ್ಯಾಂಕ್ ಸಾಮರ್ಥ್ಯವನ್ನು ತಪ್ಪಾಗಿ ನಮೂದಿಸಲಾಗಿದೆ ಎಂದು ಮನವಿ ಪತ್ರ ಸಲ್ಲಿಸಿದ್ದಾರೆ. ಆ ಮನವಿ ಪತ್ರದಲ್ಲಿ ಸಾಮಾನ್ಯವಾಗಿ ಸೇವಾ ಹೊತ್ತಿಗೆಯಲ್ಲಿ ನಮೂದಿಸಿರುವ ಟ್ಯಾಂಕ್ ಸಾಮರ್ಥ್ಯವು ವಾಸ್ತವದ ಟ್ಯಾಂಕ್ ಸಾಮರ್ಥ್ಯಕ್ಕಿಂತ ಶೇ. 15-20ರಷ್ಟು ಕಡಿಮೆ ಎಂದು ಹೇಳಲಾಗಿದೆ.

ಹೆಚ್ಚುವರಿ ಉಳಿಕೆ ಟ್ಯಾಂಕ್ ಸಾಮರ್ಥ್ಯಕ್ಕೆ ಕೆಲವು ಭದ್ರತಾ ಕ್ರಮಗಳು ಸೇರಿದಂತೆ ಹಲವು ಕಾರಣಗಳಿವೆ:

►ಪೆಟ್ರೋಲ್ ಪಂಪ್‌ಗಳ ಅಂತರ್ಗತ ಟ್ಯಾಂಕ್‌ಗಳಲ್ಲಿನ ಇಂಧನದ ಉಷ್ಣಾಂಶವು ವಾತಾವರಣದ ಉಷ್ಣಾಂಶಕ್ಕಿಂತ ಕಡಿಮೆಯಿರುವುದರಿಂದ ಅಳತೆಗಿಂತ ಹೆಚ್ಚು ಸಾಮರ್ಥ್ಯದ ಭರ್ತಿಯಿಂದ ಆವಿಯಾಗುವ ರಾಸಾಯನಿಕ ವಸ್ತು ಸೋರಿಕೆಯಾಗುವುದನ್ನು ತಡೆಗಟ್ಟಲು.

►ಗ್ಯಾಸೊಲಿನ್ ಅನಿಲವು ಆವಿಯಾಗಲು ಸ್ಥಳಾವಕಾಶದ ಅವಶ್ಯಕತೆ ಇರುತ್ತದೆ. ಅದನ್ನು ಒದಗಿಸದಿದ್ದರೆ ಎಂಜಿನ್ ದಕ್ಷತೆ ಕುಂಠಿತಗೊಳ್ಳುತ್ತದೆ. ಅಲ್ಲದೆ, ಪೂರ್ಣಪ್ರಮಾಣದಲ್ಲಿ ದಹನಗೊಳ್ಳದ ಇಂಧನವು ಹೆಚ್ಚು ಹೈಡ್ರೋಕಾರ್ಬನ್ ಮಾಲಿನ್ಯಕ್ಕೆ ಕಾರಣವಾಗುತ್ತದೆ.

►ಒಂದು ವೇಳೆ ವಾಹನದ ಟ್ಯಾಂಕನ್ನು ಪೂರ್ತಿಯಾಗಿ ಭರ್ತಿ ಮಾಡಿ ಮೇಲ್ಮುಖವಾಗಿ ಅಥವಾ ಇಳಿಜಾರಿನಲ್ಲಿ ನಿಲ್ಲಿಸಿದಾಗ ಇಂಧನ ಸೋರಿಕೆಗೆ ಕಾರಣವಾಗುತ್ತದೆ. ಇಂಧನವು ಭಾರಿ ಪ್ರಮಾಣದ ದಹನಾತ್ಮಕ ವಸ್ತುವಾಗುವುದರಿಂದ ಅಪಾಯ ಸಂಭವಿಸುವ ಸಾಧ್ಯತೆಯೂ ಇದೆ.

►ವಾಹನ ಮಾಲಕರಿಗೆ ಟ್ಯಾಂಕನ್ನು ಭರ್ತಿ ಮಾಡಕೂಡದು, ಬದಲಿಗೆ ಘೋಷಿಸಿರುವ ಕಡಿಮೆ ಪ್ರಮಾಣದಷ್ಟು ಮಾತ್ರ ಇಂಧನ ಭರ್ತಿ ಮಾಡಬೇಕು ಎಂದು ಸಲಹೆ ನೀಡಬೇಕು ಎಂದು ಮೂಲ ವಾಹನ ಉತ್ಪಾದಕರಿಗೆ ಸಚಿವಾಲಯವು ಆಗ್ರಹಿಸಿದೆ.

ಈ ಹಿಂದೆ, ಕಾರು ಮಾಲಕರು ಪೆಟ್ರೋಲ್ ಬಂಕ್ ಹುಡುಗರೊಂದಿಗೆ ಮೂಲ ವಾಹನ ಉತ್ಪಾದಕರ ಸೇವಾ ಹೊತ್ತಿಗೆಯಲ್ಲಿ ನಮೂದಿಸಿರುವ ಟ್ಯಾಂಕ್ ಸಾಮರ್ಥ್ಯಕ್ಕಿಂತ ಹೆಚ್ಚು ಇಂಧನ ತುಂಬಿಸಲಾಗಿದೆ ಎಂದು ತೋರಿಸಿದ್ದೀರಿ ಎಂದು ವಾಗ್ವಾದ ನಡೆಸಿರುವ ಹಲವಾರು ಘಟನೆಗಳು ನಡೆದಿವೆ.

ಹೀಗಾಗಿ ಮೂಲ ವಾಹನ ಉತ್ಪಾದಕರು ಪೂರ್ಣ ಟ್ಯಾಂಕ್ ಸಾಮರ್ಥ್ಯ ಹಾಗೂ ವಾಸ್ತವವಾಗಿ ತುಂಬಿಸಬೇಕಿರುವ ಇಂಧನ ಸಾಮರ್ಥ್ಯ ಎರಡನ್ನೂ ತಮ್ಮ ಸೇವಾ ಹೊತ್ತಿಗೆಯಲ್ಲಿ ನಮೂದಿಸುವುದು ಉಚಿತವಾಗಲಿದೆ.

Similar News