ಭಾರತೀಯರು ವಿದೇಶಗಳಲ್ಲಿ ಹೊಂದಿರುವ ಶೆಲ್ ಕಂಪೆನಿಗಳ ಅಂಕಿಅಂಶಗಳಿಲ್ಲ: ಸಂಸತ್ ಗೆ ತಿಳಿಸಿದ ಕೇಂದ್ರ

Update: 2023-03-27 16:33 GMT

ಹೊಸದಿಲ್ಲಿ, ಮಾ. 27: ಭಾರತೀಯ ನಾಗರಿಕರು ವಿದೇಶಗಳಲ್ಲಿ ಹೊಂದಿರುವ ಶೆಲ್ (ಬೇನಾಮಿ) ಕಂಪೆನಿಗಳ ಬಗ್ಗೆ ತನ್ನಲ್ಲಿ ಯಾವುದೇ ಅಂಕಿ ಅಂಶಗಳಿಲ್ಲ ಎಂದು ಕೇಂದ್ರ ಸರಕಾರ ಕಳೆದ ವಾರ ಸಂಸತ್ ಗೆ ತಿಳಿಸಿದೆ.

ಭಾರತೀಯ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್ವಾದಿ)ದ ಸಂಸದ ಜಾನ್ ಬ್ರಿಟ್ಟಾಸ್ ಕೇಳಿದ ಪ್ರಶ್ನೆಗೆ ಹಣಕಾಸು ಖಾತೆ ಸಹಾಯಕ ಸಚಿವ ಪಂಕಜ್ ಚೌಧರಿ ರಾಜ್ಯಸಭೆಯಲ್ಲಿ ಈ ಉತ್ತರ ನೀಡಿದ್ದಾರೆ. ತನ್ನ ಸಚಿವಾಲಯಕ್ಕೆ ಸಂಬಂಧಿಸಿದ ಕಾನೂನುಗಳಲ್ಲಿ ವಿದೇಶಗಳಲ್ಲಿರುವ ಶೆಲ್ ಕಂಪೆನಿಗಳ ಬಗ್ಗೆ ಯಾವುದೇ ವ್ಯಾಖ್ಯೆಯಿಲ್ಲ ಎಂದು ಸಚಿವರು ಹೇಳಿದರು.

ಗೌತಮ್ ಅದಾನಿಯ ಅಣ್ಣ ವಿನೋದ್ ಅದಾನಿ, ಶೇರುಗಳನ್ನು ಸಂಗ್ರಹಿಸಿಡಲು, ಮಾರುಕಟ್ಟೆಯಲ್ಲಿ ಹಸ್ತಕ್ಷೇಪ ನಡೆಸಲು ಮತ್ತು ಕಪ್ಪುಹಣ ಬಿಳುಪು ಮಾಡಲು ವಿದೇಶಗಳಲ್ಲಿ ಭಾರೀ ಸಂಖ್ಯೆಯ ಶೆಲ್ ಕಂಪೆನಿಗಳ ಜಾಲವೊಂದನ್ನು ನಿರ್ಮಿಸಿ ನಿರ್ವಹಿಸುತ್ತಿದ್ದಾರೆ. ಅದಾನಿ ಸಮೂಹದ ಕಂಪೆನಿಗಳ ಆರ್ಥಿಕ ಆರೋಗ್ಯ ಉತ್ತಮವಾಗಿದೆ ಎನ್ನುವುದನ್ನು ತೋರಿಸುವುದಕ್ಕಾಗಿ ಹೀಗೆ ಮಾಡಲಾಗುತ್ತಿದೆ ಎಂದು ‘ದ ಮಾರ್ನಿಂಗ್ ಕಾಂಟೆಕ್ಸ್ಟ್’ನ ವರದಿಯೊಂದು ಆರೋಪಿಸಿದೆ.

ವಿನೋದ್ ಅದಾನಿಯು ವಿದೇಶಗಳಲ್ಲಿರುವ ಶೆಲ್ ಕಂಪೆನಿಗಳ ಮೂಲಕ ಅಂಬುಜಾ ಸಿಮೆಂಟ್ಸ್ ಮತ್ತು ಎಸಿಸಿ ಲಿಮಿಟೆಡ್ ಕಂಪೆನಿಗಳ ಫಲಾನುಭವಿ ಮಾಲೀಕನಾಗಿದ್ದಾರೆ ಎಂದು ವರದಿ ಹೇಳಿಕೊಂಡಿದೆ.

ಎರಡು ಸಿಮೆಂಟ್ ಕಂಪೆನಿಗಳನ್ನು ಖರೀದಿಸಿರುವುದಾಗಿ ಅದಾನಿ ಗುಂಪು ಕಳೆದ ವರ್ಷ ಶೇರು ವಿನಿಮಯ ಕೇಂದ್ರಗಳಿಗೆ ಸಲ್ಲಿಸಿರುವ ಮಾಹಿತಿಗಳಲ್ಲಿ ಹೇಳಿರುವುದರಿಂದ ಈ ವರದಿಗಳು ಮಹತ್ವ ಪಡೆದುಕೊಂಡಿವೆ.

ಹಾಗಾದರೆ ಸರಕಾರ ಕಾರ್ಯ ಪಡೆ ಹೇಗೆ ಸ್ಥಾಪಿಸಿತು?

ಸರಕಾರದ ಉತ್ತರಕ್ಕೆ ಪ್ರತಿಕ್ರಿಯಿಸಿದ ಬ್ರಿಟ್ಟಾಸ್, ಕೇಂದ್ರ ಹಣಕಾಸು ಸಚಿವಾಲಯವು 2018ರಲ್ಲಿ ನೀಡಿರುವ ಹೇಳಿಕೆಯನ್ನು ಅದರ ಗಮನಕ್ಕೆ ತಂದಿದ್ದಾರೆ. ಶೆಲ್ ಕಂಪೆನಿಗಳನ್ನು ಪತ್ತೆಹಚ್ಚಲು ಕಾರ್ಯಪಡೆಯೊಂದನ್ನು ತಾನು ಸ್ಥಾಪಿಸಿರುವುದಾಗಿ ಸಚಿವಾಲಯವು ಅಂದು ಹೇಳಿತ್ತು.

‘‘ಶೆಲ್ ಕಂಪೆನಿ ಎಂದರೆ ಏನು ಎನ್ನುವುದು ಭಾರತ ಸರಕಾರಕ್ಕೆ ಗೊತ್ತಿಲ್ಲದಿದ್ದರೆ, ಈ ವಿಷಯದಲ್ಲಿ ಅದು ಕಾರ್ಯಪಡೆಯೊಂದನ್ನು ಹೇಗೆ ಸ್ಥಾಪಿಸಿತು? ಇದು ನಿಜವಾಗಿಯೂ ಮಿಲಿಯನ್ ಡಾಲರ್ ಪ್ರಶ್ನೆ’’ ಎಂದು ಬ್ರಿಟ್ಟಾಸ್ ಸೋಮವಾರ ಹೇಳಿದರು.

Similar News