ಉಡುಪಿ: 'ಶ್ರೀ ಕೃಷ್ಣ ರಸಾಯನಮ್' ತಾಳಮದ್ದಳೆ ಸಮಾರೋಪ ಸಮಾರಂಭ

Update: 2023-03-28 04:09 GMT

ಉಡುಪಿ: ಉಜಿರೆ ವಿಠಲ ಶಾಸ್ತ್ರಿ ಸಾಂಸ್ಕೃತಿಕ ಪ್ರತಿಷ್ಠಾನದ ರಜತಪರ್ವದ ಹಾಗೂ ಗುರಿಕಾರ ನೆಡ್ಳೆ ನರಸಿಂಹ ಭಟ್ಟರ 'ಸಂಸ್ಮೃತಿ' ಸಪ್ತಾಹ ಪ್ರಯುಕ್ತ ಹಮ್ಮಿಕೊಂಡಿದ್ದ 'ಶ್ರೀ ಕೃಷ್ಣ ರಸಾಯನಮ್' ತಾಳಮದ್ದಳೆ ಸರಣಿಯು ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ರವಿವಾರ ಸಮಾರೋಪಗೊಂಡಿತು.

ಸಮಾರಂಭದಲ್ಲಿ ಪರ್ಯಾಯ ಶ್ರೀ ಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರ ತೀರ್ಥ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಕಲಾವಿದರನ್ನು ಆಶೀರ್ವದಿಸಿದರು.

ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಜೈಮಿನಿ ಭಾರತದ ಕಥಾವಸ್ತು, 'ಸುಧನ್ವ ಮೋಕ್ಷ ' ಆಖ್ಯಾನವಾದ 'ಕೃಷ್ಣ ದರ್ಶನ' ಪ್ರಸಂಗದ ತಾಳಮದ್ದಳೆ ಪ್ರಸ್ತುತಗೊಂಡಿತು.

ಭಾಗವತರಾಗಿ ಪುತ್ತಿಗೆ ರಘುರಾಮ ಹೊಳ್ಳ, ಮದ್ದಳೆವಾದನದಲ್ಲಿ ಕೃಷ್ಣಪ್ರಕಾಶ ಉಳಿತ್ತಾಯ ಹಾಗೂ ಚೆಂಡೆವಾದಕರಾಗಿ ಕಲ್ಮಡ್ಕ ಶಂಕರ ಭಟ್ ಹಿಮ್ಮೇಳದಲ್ಲಿ ಭಾಗವಹಿಸಿದರು.

ಸುಧನ್ವನ ಪಾತ್ರದಲ್ಲಿ ವಿದ್ವಾನ್ ಉಮಾಕಾಂತ ಭಟ್ ಕೆರೆಕೈ, ಅರ್ಜುನನಾಗಿ ಉಜಿರೆ ಅಶೋಕ ಭಟ್ ಹಾಗೂ ಕೃಷ್ಣನಾಗಿ ಸುಜಯೀಂದ್ರ ಹಂದೆ ಅರ್ಥ ಹೇಳಿದರು.

ಈ ತಾಳಮದ್ದಳೆ ಸಪ್ತಾಹಕ್ಕೆ ನೆಡ್ಳೆ ನರಸಿಂಹ ಭಟ್ಟ ಯಕ್ಷಗಾನ ಪ್ರತಿಷ್ಠಾನ, ಯೆಯ್ಯಾಡಿ ಇದರ ಮುಖ್ಯಸ್ಥ ಹಾಗೂ 'ನರನ್ಸ್'  ಫುಡ್ ಪ್ರಾಡಕ್ಸ್ಟ್ ಆಡಳಿತ ನಿರ್ದೇಶಕ ನೆಡ್ಳೆ ರಾಮ ಭಟ್ ಪ್ರಾಯೋಜಕತ್ವ ನೀಡಿದರು.

ಶ್ರೀ ಮಠದ ಮ್ಯಾನೇಜರ್ ಗೋಪಾಲಕೃಷ್ಣ ಉಪಾಧ್ಯಾಯ ಸ್ವಾಗತಿಸಿದರು. ಕುರಿಯ ಪ್ರತಿಷ್ಠಾನದ ಸಂಚಾಲಕ ಉಜಿರೆ ಅಶೋಕ ಭಟ್ ವಂದಿಸಿದರು.

'ಸುದರ್ಶನಗ್ರಹಣ' ಪ್ರಸಂಗದ ತಾಳಮದ್ದಳೆ

'ಶ್ರೀ ಕೃಷ್ಣ ರಸಾಯನಮ್' ಸರಣಿಯ ಆರನೆಯ ದಿನವಾದ ಶನಿವಾರ 'ಸುದರ್ಶನಗ್ರಹಣ' ಪ್ರಸಂಗದ ತಾಳಮದ್ದಳೆ ಪ್ರದರ್ಶನಗೊಂಡಿತು.

ಮಹಾಭಾರತದ 'ಭೀಷ್ಮ ಪರ್ವ'ದಲ್ಲಿ ನಿರೂಪಿತವಾಗಿರುವ ಕಥೆಯನ್ನು ಆಧರಿಸಿರುವ "ಸುದರ್ಶನಗ್ರಹಣ" ಪ್ರಸಂಗದ ತಾಳಮದ್ದಳೆಯಲ್ಲಿ ಭಾಗವತರಾಗಿ ರವಿಚಂದ್ರ ಕನ್ನಡಿಕಟ್ಟೆ, ಮದ್ದಳೆವಾದನದಲ್ಲಿ ಕೃಷ್ಣಪ್ರಕಾಶ ಉಳಿತ್ತಾಯ ಹಾಗೂ ಚೆಂಡೆವಾದಕರಾಗಿ ಯೋಗೀಶ ಉಳೆಪಾಡಿ ಭಾಗವಹಿಸಿದರು.

ಕೃಷ್ಣನ ಪಾತ್ರದಲ್ಲಿ ವಿದ್ವಾನ್ ಉಮಾಕಾಂತ ಭಟ್ ಕೆರೇಕೈ, ಭೀಷ್ಮನಾಗಿ ಉಜಿರೆ ಅಶೋಕ ಭಟ್ ಹಾಗೂ ಅರ್ಜುನನಾಗಿ ಸತೀಶ ಶೆಟ್ಟಿ ಮೂಡುಬಗೆ ಅರ್ಥ ಹೇಳಿದರು.

ಶ್ರೀ ಮಠದ ಮ್ಯಾನೇಜರ್ ಗೋಪಾಲಕೃಷ್ಣ ಉಪಾಧ್ಯಾಯ ಸ್ವಾಗತಿಸಿದರು. ಉಜಿರೆಯ ಕುರಿಯ ವಿಠಲ ಶಾಸ್ತ್ರಿ ಸಾಂಸ್ಕೃತಿಕ ಪ್ರತಿಷ್ಠಾನದ ಸಂಚಾಲಕ  ಉಜಿರೆ ಅಶೋಕ ಭಟ್ ವಂದಿಸಿದರು.

ಹುಬ್ಬಳ್ಳಿಯಲ್ಲಿ ಉದ್ಯಮಿಗಳಾಗಿರುವ 'ಡಯಾನ ಪೈಂಟ್ಸ್'ನ ಆಡಳಿತ ನಿರ್ದೇಶಕ, ಕಲಾಪೋಷಕರೂ ಆದ ಆರ್.ಜಿ. ಭಟ್ ವರ್ಗಾಸರ ಶಿರಸಿ ಆರ್ಥಿಕ ಪ್ರಾಯೋಜಕತ್ವ ನೀಡಿದರು.

Similar News