ಕೋವಿಡ್‌ ಲಾಕ್‌ಡೌನ್‌ ಕುರಿತ ಚಿತ್ರ 'ಭೀಡ್‌'ಗೆ ಸೆನ್ಸಾರ್‌ ಕತ್ತರಿ ಪ್ರಯೋಗ

ಭಾರತದಲ್ಲಿ 'ವಾಸ್ತವದ ಕುರಿತು ಅಲರ್ಜಿಯಿದೆ' ಎಂದ ನಟಿ ಸ್ವರ ಭಾಸ್ಕರ್‌

Update: 2023-03-28 09:06 GMT

ಮುಂಬೈ: ರಾಜ್‌ಕುಮಾರ್‌ ರಾವ್‌ (Rajkummar Rao) ಮತ್ತು ಭೂಮಿ ಪೆಡ್ನೇಕರ್‌ ಪ್ರಧಾನ ಭೂಮಿಕೆಯಲ್ಲಿರುವ ಚಲನಚಿತ್ರ 'ಭೀಡ್' (Bheed) ಕಳೆದ ಶುಕ್ರವಾರ ಬಿಡುಗಡೆಯಾದಂದಿನಿಂದ ಸುದ್ದಿಯಲ್ಲಿದೆ. ಮಾರ್ಚ್‌ 2020 ರಲ್ಲಿ ದೇಶವ್ಯಾಪಿ ಕೋವಿಡ್‌ ಸೋಂಕಿನ ಹಿನ್ನೆಲೆಯಲ್ಲಿ ವಿಧಿಸಲಾಗಿದ್ದ ಲಾಕ್‌ಡೌನ್‌ನ  ಸಂದರ್ಭದ ನೈಜ ಚಿತ್ರಣವನ್ನು ನೀಡಲು ಈ ಚಲನಚಿತ್ರ ಯತ್ನಿಸಿದೆ.

ಈ ಚಿತ್ರದ ಮೊದಲ ಟ್ರೈಲರ್ ಬಿಡುಗಡೆಯಾದ ಕೆಲವೇ ದಿನಗಳಲ್ಲಿ ವ್ಯಾಪಕ ಟೀಕೆಗಳ ಕಾರಣ ವಾಪಸ್‌ ಪಡೆದುಕೊಳ್ಳಲಾಗಿದ್ದರೆ ನಂತರ ಕೆಲವೊಂದು ಮಾರ್ಪಾಟುಗಳೊಂದಿಗೆ ಅಧಿಕೃತ ಚಾನಲ್‌ಗಳಲ್ಲಿ ಬಿಡುಗಡೆಗೊಂಡಿತ್ತು.

ಇದೀಗ ಚಿತ್ರ ಬಿಡುಗಡೆಗೊಂಡಿದ್ದರೂ ಕೇಂದ್ರ ಸೆನ್ಸಾರ್‌ ಮಂಡಳಿಯು ಅನುಭವ್‌ ಸಿನ್ಹಾ ನಿರ್ದೇಶನದ ಈ ಚಿತ್ರಕ್ಕೆ ಸುಮಾರು 13 ಮಾರ್ಪಾಟುಗಳನ್ನು ಮಾಡಿದೆ. ಈ ಕುರಿತು ಪತ್ರಕರ್ತರೊಬ್ಬರು ಟ್ವೀಟ್‌ ಮಾಡಿದ್ದಾರೆ.

"ಚಿತ್ರದಲ್ಲಿರುವ ಹಲವಾರು ನಿಂದನಾತ್ಮಕ ಪದಗಳು ಹಾಗೂ ಅದಕ್ಕೆ ಸಂಬಂಧಿಸಿದ ಸಬ್‌-ಟೈಟಲ್‌ಗಳಿಗೆ ಕತ್ತರಿ ಹಾಕಲಾಗಿದೆ, ರೊಮಾನ್ಸ್‌ ದೃಶ್ಯಗಳನ್ನು ಕಡಿಮೆ ಮಾಡಲಾಗಿದೆ, ರೆಡ್‌ ಇಂಡಿಯನ್ಸ್‌, ಪುರಾಣ್‌, ಮಹಾಪುರಾಣ್‌ ನಂತಹಪದಗಳನ್ನು ತೆಗೆದುಹಾಕಲಾಗಿದೆ. ಪ್ರಧಾನಿ ಮೋದಿಯ ಭಾಷಣಗಳ ನೇರ, ಪರೋಕ್ಷ ಉಲ್ಲೇಖಗಳನ್ನು ತೆಗೆದುಹಾಕಲಾಗಿದೆ. ಸಬ್‌ಟೈಟಲ್‌ಗಳಲ್ಲಿ ಜಾತಿ ಉಲ್ಲೇಖಗಳನ್ನು ತೆಗೆದುಹಾಕಲಾಗಿದೆ. ತಬ್ಲೀಗಿ ಜಮಾಅತ್‌ ಉಲ್ಲೇಖ ಕಡಿಮೆಗೊಳಿಸಲಾಗಿದೆ, ಲಾಕ್‌ಡೌನ್‌ ವೇಳೆ ವಲಸಿಗ ಕಾರ್ಮಿಕರು ಎದುರಿಸಿದ ಸಮಸ್ಯೆಗಳನ್ನು ದೇಶ ವಿಭಜನೆಯ ಸಂದರ್ಭದ ಸಮಸ್ಯೆಗಳಿಗೆ ಮಾಡಿದ ಹೋಲಿಕೆಗೆ ಕತ್ತರಿ ಹಾಕಲಾಗಿದೆ,

ಭಾರತೀಯ ಸಮಾಜವನ್ನು ಧೃತರಾಷ್ಟ್ರನಿಗೆ ಹೋಲಿಸುವ ಸಂವಾದನವನ್ನು ಕೈಬಿಡಲಾಗಿದೆ. ಕೊರೋನ ಜಿಹಾದ್‌ ಪದ ಬಳಕೆಯಲ್ಲಿ ಜಿಹಾದ್‌ ಪದವನ್ನು ಮ್ಯೂಟ್‌ ಮಾಡಲಾಗಿದೆ. ಚಿತ್ರದಲ್ಲಿನ ಹಕ್ಕು ನಿರಾಕರಣೆಯಲ್ಲಿ ಮಾರ್ಪಾಟು, ವಲಸಿಗ ಕಾರ್ಮಿಕರ ಮೇಲಿನ ಪೊಲೀಸ್‌ ದೌರ್ಜನ್ಯ ಬಿಂಬಿಸುವ ದೃಶ್ಯಗಳಲ್ಲಿ ಕಡಿತ ಮಾಡಲಾಗಿದೆ.

ಈ ಕುರಿತು ಟೀಕಿಸಿರುವ ನಟಿ ಸ್ವರ ಭಾಸ್ಕರ್‌, ಭಾರತಕ್ಕೆ ವಾಸ್ತವದ ಬಗ್ಗೆ ಅಲರ್ಜಿ ಇದೆ ಎಂದು ಕಿಡಿಕಾರಿದ್ದಾರೆ."ವಾಸ್ತವಗಳಷ್ಟು ಯಾವುದೂ ಕಡಿಯುವುದಿಲ್ಲ. ಭಾರತದಲ್ಲಿ ನಮಗೆ ಹೊಸ ರೋಗವಿದೆ, ವಾಸ್ತವದ ಕುರಿತು ಅಲರ್ಜಿ" ಎಂದು ಸ್ವರ ಟ್ವೀಟ್‌ ಮಾಡಿದ್ದಾರೆ.

Similar News