ಒಡಿಶಾ ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿನಿ ಸಾವು, ರ‍್ಯಾಗಿಂಗ್‌ ಆರೋಪ

Update: 2023-03-29 03:27 GMT

ಜಾಜ್‌ಪುರ: ಒಡಿಶಾದ ಜಾಜ್‌ಪುರ ಜಿಲ್ಲೆಯ ಹಾಸ್ಟೆಲ್ ಒಂದರಲ್ಲಿ ಮಂಗಳವಾರ 18 ವರ್ಷ ವಯಸ್ಸಿನ ಪಾಲಿಟೆಕ್ನಿಕ್ ವಿದ್ಯಾರ್ಥಿನಿಯ ಶವ ಪತ್ತೆಯಾಗಿದೆ.

ಮೂರನೇ ವರ್ಷದ ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ವಿದ್ಯಾರ್ಥಿನಿಯ ಶವ, ಕೊರೀ ಪೊಲೀಸ್ ಠಾಣೆ ವ್ಯಾಪ್ತಿಯ ಆಕೆಯ ಕಾಲೇಜ್ ಕ್ಯಾಂಪಸ್‌ನ ಹಾಸ್ಟೆಲ್ ಕೊಠಡಿಯಲ್ಲಿ ಫ್ಯಾನ್‌ನಲ್ಲಿ ನೇತಾಡುತ್ತಿತ್ತು ಎಂದು ಪೊಲೀಸರು ಹೇಳಿದ್ದಾರೆ.

ಈ ಘಟನೆ ಕ್ಯಾಂಪಸ್‌ನಲ್ಲಿ ಉದ್ವಿಗ್ನತೆಗೆ ಕಾರಣವಾಗಿದ್ದು, ಈ ಸಾವಿಗೆ ಕಾಲೇಜು ಆಡಳಿತ ಹೊಣೆ ಎಂದು ಮೃತ ಯುವತಿಯ ಕುಟುಂಬದವರು ಆಪಾದಿಸಿದ್ದಾರೆ. ಕ್ಯಾಂಪಸ್‌ನಲ್ಲಿ ರ್ಯಾಗಿಂಗ್ ನಿರಂತರವಾಗಿ ಮುಂದುವರಿದ ಕಾರಣದಿಂದ ಯುವತಿ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಆಪಾದಿಸಲಾಗಿದೆ.

"ಅದೇ ಕಾಲೇಜಿನ ವಿದ್ಯಾರ್ಥಿಯೊಬ್ಬ ನನ್ನ ಮಗಳಿಗೆ ಸಂದೇಶ ಕಳುಹಿಸಿ, ಕ್ಯಾಂಪಸ್ ನೇಮಕಾತಿಗೆ ಆಯ್ಕೆಯಾಗಿರುವುದಾಗಿ ಹೇಳಿದ್ದ. ಆದರೆ ಇದಕ್ಕೆ ಹಾಜರಾಗಲು ಅವಕಾಶ ನೀಡುವುದಿಲ್ಲ ಎಂದು ಬೆದರಿಕೆ ಹಾಕಿದ್ದ. ಆಕೆ ಹೆದರಿ ಹಾಸ್ಟೆಲ್‌ನಲ್ಲಿ ಇನ್ನು ಇರುವುದೇ ಇಲ್ಲ ಎಂದು ಹೇಳಿದ್ದಳು. ನಿನ್ನೆ ಮತ್ತೊಬ್ಬ ವಿದ್ಯಾರ್ಥಿ ಆಕೆಯ ಮೇಲೆ ಹಲ್ಲೆಗೆ ಯತ್ನಿಸಿದ್ದ" ಎಂದು ಯುವತಿಯ ತಾಯಿ ಹೇಳಿದ್ದಾರೆ.

ಈ ವಿದ್ಯಾರ್ಥಿಗಳು ಮತ್ತಷ್ಟು ಕಿರುಕುಳ ನೀಡಬಹುದು ಎಂಬ ಭಯದಿಂದ ಈ ವಿಷಯವನ್ನು ಕಾಲೇಜು ಆಡಳಿತಕ್ಕೆ ತಿಳಿಸಿರಲಿಲ್ಲ ಎಂದು ವಿವರಿಸಿದ್ದಾರೆ. ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Similar News