ಸುಪ್ರೀಂಕೋರ್ಟ್‌ ವಿಚಾರಣೆಗೂ ಮುನ್ನ ಲಕ್ಷದ್ವೀಪ ಸಂಸದ ಫೈಝಲ್‌ ರ ಲೋಕಸಭಾ ಸದಸ್ಯತ್ವ ಮರುಸ್ಥಾಪನೆ

Update: 2023-03-29 05:54 GMT

ಹೊಸದಿಲ್ಲಿ: ಲಕ್ಷದ್ವೀಪದ ಸಂಸದ ಪಿಪಿ ಮೊಹಮ್ಮದ್‌ ಫೈಝಲ್‌ ಅವರನ್ನು ಕೊಲೆಯತ್ನ ಪ್ರಕರಣವೊಂದರಲ್ಲಿ ದೋಷಿ ಎಂದು ಘೋಷಿಸಿದ್ದ ಲಕ್ಷದ್ವೀಪ ಸೆಷನ್ಸ್‌ ನ್ಯಾಯಾಲಯದ ಆದೇಶವನ್ನು ಕೇರಳ ಹೈಕೋರ್ಟ್‌ ಜನವರಿ 25 ರಂದು ವಜಾಗೊಳಿಸಿದ ಹಿನ್ನೆಲೆಯಲ್ಲಿ ಲೋಕಸಭಾ ಸೆಕ್ರಟೇರಿಯಟ್‌ ಇಂದು ಅಧಿಸೂಚನೆ ಹೊರಡಿಸಿ ಅವರನ್ನು ಅನರ್ಹಗೊಳಿಸಿದ ಕ್ರಮವನ್ನು ವಾಪಸ್‌ ಪಡೆದು ಅವರ ಲೋಕಸಭಾ ಸದಸ್ಯತ್ವವನ್ನು ಮರುಸ್ಥಾಪಿಸಿದೆ.

ತಮ್ಮನ್ನು ದೋಷಿ ಎಂದು ಘೋಷಿಸಿದ ಕೋರ್ಟ್‌ ಆದೇಶಕ್ಕೆ ತಡೆಯಾಜ್ಞೆ ದೊರೆತಿರುವ ಹೊರತಾಗಿಯೂ ತಮ್ಮನ್ನು ಅನರ್ಹಗೊಳಿಸಿದ ಕ್ರಮವನ್ನು ವಾಪಸ್‌ ಪಡೆಯಲು ನಿರಾಕರಿಸಿದ್ದನ್ನು ಪ್ರಶ್ನಿಸಿ ಎನ್‌ಸಿಪಿ ಸಂಸದರಾಗಿರುವ ಮೊಹಮ್ಮದ್‌ ಫೈಝಲ್‌ ಅವರು ಸುಪ್ರೀಂ ಕೋರ್ಟಿಗೆ ಸಲ್ಲಿಸಿರುವ ಅರ್ಜಿಯ ವಿಚಾರಣೆ ಇಂದು ನಡೆಯಲಿರುವ ಮುನ್ನವೇ ಲೋಕಸಭಾ ಸೆಕ್ರಟೇರಿಯಟ್‌ ಅವರ ಸದಸ್ಯತ್ವವನ್ನು ಮರುಸ್ಥಾಪಿಸಿ ಆದೇಶ ಹೊರಡಿಸಿದೆ.

ಪ್ರಕರಣದ ವಿಚಾರಣೆ ಇಂದು ನ್ಯಾಯಮೂರ್ತಿಗಳಾದ ಕೆ ಎಂ ಜೋಸೆಫ್‌ ಮತ್ತು ಬಿ ವಿ ನಾಗರತ್ನ ಅವರ ಪೀಠ ನಡೆಸಲಿದೆ.

ಈ ವರ್ಷದ ಜನವರಿ 11 ರಂದು ಲಕ್ಷದ್ವೀಪದ ಸೆಷನ್ಸ್‌ ನ್ಯಾಯಾಲಯವೊಂದು ಫೈಝಲ್‌ ಮತ್ತು ಮೂವರು ಇತರರನ್ನು 2009 ರಲ್ಲಿ ನಡೆದ ಕೊಲೆಯತ್ನ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ 10 ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು. ಈ ಕೋರ್ಟ್‌ ಆದೇಶದ ಬೆನ್ನಲ್ಲೇ ಫೈಝಲ್‌ ಅವರನ್ನು ಸಂಸದ ಸ್ಥಾನದಿಂದ ಅನರ್ಹಗೊಳಿಸಲಾಗಿತ್ತು ಹಾಗೂ ಅವರ ಕ್ಷೇತ್ರಕ್ಕೆ ಚುನಾವಣಾ ಆಯೋಗ ಉಪಚುನಾವಣೆ ಘೋಷಿಸಿತ್ತು.

ಆದರೆ ಜನವರಿ 25 ರಂದು ಕೇರಳ ಹೈಕೋರ್ಟಿನ ಏಕಸದಸ್ಯ ಪೀಠವು ಫೈಝಲ್‌ ಅವರನ್ನು ದೋಷಿಯೆಂದು ಘೋಷಿಸಿದ್ದ ತೀರ್ಪಿಗೆ ತಡೆಯಾಜ್ಞೆ ವಿಧಿಸಿತ್ತು. ಆ ಆದೇಶ ಹೊರಡಿಸುವ ವೇಳೆ ಕೇರಳ ಹೈಕೋರ್ಟಿನ ನ್ಯಾಯಮೂರ್ತಿ ಬೇಚು ಕುರಿಯನ್‌ ಥಾಮಸ್‌ ಅವರು ಮುಂದಿನ ಲೋಕಸಭಾ ಚುನಾವಣೆಗೆ ಇನ್ನೇನು ಒಂದೂವರೆ ವರ್ಷಗಳಿರುವಾಗ ಈಗ ಉಪಚುನಾವಣೆ ನಡೆಸಿ ಅನಗತ್ಯ ಖರ್ಚು ಮಾಡುವ ಕುರಿತು ಕಳವಳ ವ್ಯಕ್ತಪಡಿಸಿದ್ದರು.

ಮೇಲಾಗಿ ಈ ಪ್ರಕರಣದಲ್ಲಿ ಆರೋಪಿಯು ಯಾವುದೇ ಅಪಾಯಕಾರಿ ಶಸ್ತ್ರಗಳನ್ನು ಬಳಸಿಲ್ಲ ಹಾಗೂ ಸಂತ್ರಸ್ತನಿಗೆ ಯಾವುದೇ ಗಂಭೀರ ಗಾಯಗಳುಂಟಾಗದೇ ಇರುವುದನ್ನು ಅವರು ಉಲ್ಲೇಖಿಸಿದ್ದರು.

ಈ ಆದೇಶದ ನಂತರ ಉಪಚುನಾವಣೆಯ ಕುರಿತಂತೆ ಮುಂದಿನ ಹೆಜ್ಜೆಯಿಡದೇ ಇರಲು ಚುನಾವಣಾ ಆಯೋಗ ನಿರ್ಧರಿಸಿತ್ತು.  ಹೈಕೋರ್ಟ್‌ ಆದೇಶದ ವಿರುದ್ಧ ಲಕ್ಷದ್ವೀಪ ಆಡಳಿತವು ಸುಪ್ರೀಂ ಕೋರ್ಟ್‌ ಕದ ತಟ್ಟಿದ್ದರೂ ಹೈಕೋರ್ಟ್‌ ಆದೇಶಕ್ಕೆ ತಡೆಯಾಜ್ಞೆ ವಿಧಿಸಲು ಸುಪ್ರೀಂ ಕೋರ್ಟ್‌ ತನ್ನ ಫೆಬ್ರವರಿ 20 ರ ಆದೇಶದಲ್ಲಿ ನಿರಾಕರಿಸಿತ್ತು.

ಆದರೆ ಲೋಕಸಭಾ ಸೆಕ್ರಟೇರಿಯಟ್‌ ತನ್ನನ್ನು ಸಂಸದ ಸ್ಥಾನದಲ್ಲಿ ಮರುಸ್ಥಾಪಿಸಲು ನಿರಾಕರಿಸಿದ್ದನ್ನು ಪ್ರಶ್ನಿಸಿ ಫೈಝಲ್‌ ಸುಪ್ರೀಂ ಕೋರ್ಟ್‌ ಕದ ತಟ್ಟಿದ್ದರು.

Similar News