ಸಾವರ್ಕರ್‌ಗೆ ರಾಹುಲ್ ಗಾಂಧಿ ಅವಮಾನ ಪ್ರಕರಣ: ಕಾಂಗ್ರೆಸ್ ಹಾಗೂ ಉದ್ಧವ್ ಠಾಕ್ರೆ ಬಣ ನಡುವೆ ಬಗೆಹರಿದ ಬಿಕ್ಕಟ್ಟು: ವರದಿ

Update: 2023-03-29 08:50 GMT

ಮುಂಬೈ: ಹಿಂದುತ್ವವಾದಿ ವಿ.ಡಿ.ಸಾವರ್ಕರ್ ಅವರನ್ನು ರಾಹುಲ್ ಗಾಂಧಿ ಅವಮಾನಿಸಿದ್ದಕ್ಕೆ ಎಚ್ಚರಿಕೆ ನೀಡಿದ್ದ ಶಿವಸೇನಾ (ಉದ್ಧವ್ ಠಾಕ್ರೆ ಬಣ)ವು ಬುಧವಾರ, ಈ ವಿಷಯ ಬಗೆಹರಿದಿದ್ದು, ಬಿಜೆಪಿ ಹಾಗೂ ನರೇಂದ್ರ ಸರ್ಕಾರದ ವಿರುದ್ಧದ ಹೋರಾಟದಲ್ಲಿ ವಿರೋಧ ಪಕ್ಷಗಳ ಒಗ್ಗಟ್ಟು ಗಟ್ಟಿಯಾಗಿರಲಿದೆ ಎಂದು ಪ್ರತಿಪಾದಿಸಿದೆ ಎಂದು indianexpress.com ವರದಿ ಮಾಡಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಉದ್ಧವ್ ಠಾಕ್ರೆ ಬಣದ ಶಿವಸೇನಾ ಸಂಸದ ಹಾಗೂ ಉದ್ಧವ್ ಠಾಕ್ರೆ ಅವರ ನಿಕಟವರ್ತಿ ಸಂಜಯ್ ರಾವತ್, ಈ ವಿಷಯವು ನಮ್ಮ ಪಾಲಿಗೆ ಕೊನೆಯಾಗಿದೆ ಎಂದು Indian Express ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ. ನಾನು ಈ ವಿಷಯದ ಕುರಿತು ರಾಹುಲ್ ಗಾಂಧಿಯೊಂದಿಗೆ ಮಾತನಾಡಿದೆ ಎಂದೂ ಅವರು ಹೇಳಿದ್ದಾರೆ.

ನಾವು ಎರಡು ದಿನಗಳ ಹಿಂದೆ ಸಾವರ್ಕರ್ ಕುರಿತ ಹೇಳಿಕೆ ಬಗ್ಗೆ ಕಳವಳ ವ್ಯಕ್ತಪಡಿಸಿದ್ದೆವು ಮತ್ತು ಮಲ್ಲಿಕಾರ್ಜುನ ಖರ್ಗೆ ನಿವಾಸದಲ್ಲಿನ ಸಭೆಗೆ ಹಾಜರಾಗಿರಲಿಲ್ಲ. ಆದರೆ, ಮಹಾರಾಷ್ಟ್ರ ಮತ್ತು ದೇಶಾದ್ಯಂತ ವಿರೋಧ ಪಕ್ಷಗಳ ಒಗ್ಗಟ್ಟು ಮುಂದುವರಿಯಲಿದೆ. ನಾವು ವ್ಯಕ್ತಪಡಿಸಿದ ಕಳವಳಕ್ಕೆ ನಾವು ಫಲಿತಾಂಶ ಪಡೆದಿದ್ದೇವೆ. ನಾವಿಂದು (ಬುಧವಾರ) ನಡೆಯಲಿರುವ ವಿರೋಧ ಪಕ್ಷಗಳ ಸಭೆಯಲ್ಲಿ ಭಾಗವಹಿಸಲಿದ್ದೇವೆ ಮತ್ತು ಲೋಕಸಭೆಯಲ್ಲಿನ ಪ್ರತಿಭಟನೆಯಲ್ಲೂ ಪಾಲ್ಗೊಳ್ಳಲಿದ್ದೇವೆ ಎಂದು ಬುಧವಾರ ಸಂಜಯ್ ರಾವತ್ ತಿಳಿಸಿದ್ದಾರೆ.

ರವಿವಾರ ಮಾಲೇಗಾಂವ್‌ನಲ್ಲಿ ಭಾಷಣ ಮಾಡಿದ್ದ ಉದ್ಧವ್ ಠಾಕ್ರೆ, ಸಾವರ್ಕರ್‌ಗೆ ಅವಮಾನಿಸುವುದನ್ನು ಶಿವಸೇನೆ (ಉದ್ಧವ್ ಠಾಕ್ರೆ ಬಣ) ಇನ್ನು ಮುಂದೆ ಸಹಿಸುವುದಿಲ್ಲ ಎಂದು ರಾಹುಲ್ ಗಾಂಧಿಗೆ ಎಚ್ಚರಿಸಿದ್ದರು. "ಸಾವರ್ಕರ್ ನಮ್ಮ ಪಾಲಿನ ಆರಾಧ್ಯ ದೈವ. ಅವರಿಗೆ ಯಾವುದೇ ಬಗೆಯ ಅವಮಾನ ಮಾಡುವುದನ್ನು ನಾವು ಸಹಿಸುವುದಿಲ್ಲ" ಎಂದು ಠಾಕ್ರೆ ಕಿಡಿ ಕಾರಿದ್ದರು.

ರಾಹುಲ್ ಗಾಂಧಿ ಏನಾದರೂ ಸಾವರ್ಕರ್ ವಿಷಯವನ್ನು ಮತ್ತೆ ಪ್ರಸ್ತಾಪಿಸುವುದಿಲ್ಲ ಎಂದು ಭರವಸೆ ನೀಡಿದ್ದಾರೆಯೇ ಎಂಬ ಸುದ್ದಿಗಾರರ ಪ್ರಶ್ನೆಗೆ, "ಈ ವಿಷಯದ ಕುರಿತು ಮತ್ತೆ ಏನೂ ಮಾತನಾಡಲು ನಾವು ಬಯಸುವುದಿಲ್ಲ. ನಾನು ಹೇಳಿದಂತೆ ಈ ವಿಷಯ ಈಗಾಗಲೇ ಬಗೆಹರಿದಿದೆ" ಎಂದು ಸಂಜಯ್ ರಾವತ್ ಸ್ಪಷ್ಟಪಡಿಸಿದ್ದಾರೆ.

Similar News