ಅನುಮತಿಯಿಲ್ಲದೆ ರ್‍ಯಾಲಿ ನಡೆಸಿದ ಪ್ರಕರಣ: ಜಿಗ್ನೇಶ್‌ ಮೇವಾನಿ, 9 ಇತರರನ್ನು ದೋಷಮುಕ್ತಗೊಳಿಸಿದ ನ್ಯಾಯಾಲಯ

Update: 2023-03-29 09:11 GMT

ಹೊಸದಿಲ್ಲಿ: ಪೊಲೀಸ್‌ ಅನುಮತಿಯಿಲ್ಲದೆ ಮೆಹ್ಸಾನ ಎಂಬಲ್ಲಿ ಜುಲೈ 2017 ರಲ್ಲಿ ನಡೆಸಿದ ರ್‍ಯಾಲಿಗೆ ಸಂಬಂಧಿಸಿದ ಪ್ರಕರಣದಲ್ಲಿ ಕಾಂಗ್ರೆಸ್‌ ಶಾಸಕ ಜಿಗ್ನೇಶ್‌ ಮೇವಾನಿ ಮತ್ತು ಒಂಬತ್ತು ಮಂದಿ ಇತರರನ್ನು ಮೆಹ್ಸಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯ ಬುಧವಾರ ದೋಷಮುಕ್ತಗೊಳಿಸಿದೆ.

ಮ್ಯಾಜಿಸ್ಟ್ರೇಟ್‌ ನ್ಯಾಯಾಲಯವು ಈ ಹಿಂದೆ ಎಲ್ಲಾ 10 ಮಂದಿ ಆರೋಪಿಗಳಿಗೂ ಮೂರು ತಿಂಗಳು ಜೈಲು ಶಿಕ್ಷೆ ಮತ್ತು ತಲಾ ರೂ. 1000 ದಂಡ ವಿಧಿಸಿತ್ತು. ಈ ಪ್ರಕರಣದಲ್ಲಿ ಪ್ರಾಸಿಕ್ಯೂಶನ್‌ ವಾದವನ್ನು ಮೆಹ್ಸಾನ ನ್ಯಾಯಾಲಯ ಆಧಾರರಹಿತ ಎಂದು ಹೇಳಿದೆ.

ಖುಲಾಸೆಗೊಂಡವರಲ್ಲಿ ಗುಜರಾತ್‌ ಆಪ್ ವಕ್ತಾರೆ ರೇಷ್ಮಾ ಪಟೇಲ್‌ ಕೂಡ ಸೇರಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಚರ್ಚಿಸುವ ಮತ್ತು ಸಂವಾದ ನಡೆಸುವ ಹಕ್ಕನ್ನು ಪುಷ್ಠೀಕರಿಸಿ ಎಲ್ಲರನ್ನೂ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ಸಿ ಎಂ ಪವಾರ್‌ ದೋಷಮುಕ್ತಗೊಳಿಸಿದರು.

ಮೇ 2022 ರಲ್ಲಿ ಮೆಜಿಸ್ಟೀರಿಯಲ್‌ ಕೋರ್ಟ್‌ ಎಲ್ಲರನ್ನೂ ದೋಷಿ ಎಂದು ಘೋಷಿಸಿದ ನಂತರ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯಕ್ಕೆ ಎರಡು ಅಪೀಲುಗಳನ್ನು ಸಲ್ಲಿಸಲಾಗಿತ್ತು. ಒಂದು ಅಪೀಲಿನಲ್ಲಿ ಶಿಕ್ಷೆ ಏರಿಸಬೇಕೆಂದು ಕೋರಲಾಗಿದ್ದರೆ ಇನ್ನೊಂದು ಅಪೀಲನ್ನು ಎಲ್ಲಾ 10 ಮಂದಿ ಆರೋಪಿಗಳು ಸಲ್ಲಿಸಿದ್ದರಲ್ಲದೆ ತಮ್ಮನ್ನು ದೋಷಿ ಎಂದು ಘೋಷಿಸಿದ ಆದೇಶವನ್ನು ಪ್ರಶ್ನಿಸಿದ್ದರು.

ಈ ನಿರ್ದಿಷ್ಟ ಪ್ರಕರಣದಲ್ಲಿ ಕಾನೂನು ಉಲ್ಲಂಘನೆಯಾಗಿದೆ ಎನ್ನಲಾದ ಸಂದರ್ಭ ಯಾರಿಗೂ  ತೊಂದರೆಯುಂಟಾಗಿರಲಿಲ್ಲ  ಹಾಗೂ ಯಾವುದೇ ನಿಷೇಧಾಜ್ಞೆ ಹೇರಲಾಗಿರಲಿಲ್ಲ ಎಂದು ನ್ಯಾಯಾಧೀಶರು ಹೇಳಿದ್ದಾರೆ.

ಉನಾದಲ್ಲಿ ದಲಿತರ ಮೇಲೆ ಜುಲೈ 12, 2017 ರಂದು ನಡೆದ ದೌರ್ಜನ್ಯವನ್ನು ಖಂಡಿಸಿ ಮೇವಾನಿ ಮತ್ತಿತರರು  ಮೆಹ್ಸಾನಾದಿಂದ ಧನೇರ ತನಕ ಆಜಾದಿ ಕೂಚ್‌  ಮೆರವಣಿಗೆ ನಡೆಸಿದ್ದರು. ಮೆವಾನಿ ಅವರ ಸಹವರ್ತಿಯಾದ ಕೌಶಿಕ್‌ ಪರ್ಮಾರ್‌ ಎಂಬವರು ರಾಷ್ಟ್ರೀಯ ದಲಿತ್‌ ಅಧಿಕಾರ್‌ ಮಂಚ್‌ ಹೆಸರಿನಲ್ಲಿ ಈ ರ್ಯಾಲಿಗೆ ಅನುಮತಿಯನ್ನು ಮೆಹ್ಸಾನ ಮ್ಯಾಜಿಸ್ಟ್ರೇಟ್‌ ಅವರಿಂದ ಕೋರಿದ್ದರು. ಆರಂಭದಲ್ಲಿ ಅನುಮತಿ ನೀಡಲಾಗಿತ್ತಾದರೂ ನಂತರ ಅದನ್ನು ವಾಪಸ್‌ ಪಡೆಯಲಾಗಿತ್ತು. ಆದರೂ ಆಯೋಜಕರು ರ್ಯಾಲಿ ನಡೆಸಿದ್ದರು.

ಇದನ್ನೂ ಓದಿ: ವಯನಾಡ್‌ ಕ್ಷೇತ್ರಕ್ಕೆ ಉಪಚುನಾವಣೆ ಘೋಷಿಸದ ಚುನಾವಣಾ ಆಯೋಗ

Similar News