ಯಾವುದೇ ರಾಜ್ಯ, ಕೇಂದ್ರಾಡಳಿತ ಪ್ರದೇಶದಿಂದ ಹಸಿವಿನಿಂದ ಸಾವು ವರದಿಯಾಗಿಲ್ಲ: ಕೇಂದ್ರ

Update: 2023-03-29 11:18 GMT

ಹೊಸದಿಲ್ಲಿ: ದೇಶದಲ್ಲಿ ಹಸಿವಿನಿಂದ ಉಂಟಾದ ಯಾವುದೇ ಸಾವಿನ ವರದಿ ಯಾವುದೇ ರಾಜ್ಯ ಅಥವಾ ಕೇಂದ್ರಾಡಳಿತದಿಂದ ಬಂದಿಲ್ಲ ಎಂದು  ಕೇಂದ್ರ ಆಹಾರ ಸಚಿವ ಪಿಯುಶ್‌ ಗೋಯಲ್‌ ಬುಧವಾರ ಲೋಕಸಭೆಗೆ ನೀಡಿದ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.  ದೇಶದಲ್ಲಿ ಈಗಲೂ ಹಸಿವಿನಿಂದ ಸಾವುಗಳುಂಟಾಗುತ್ತಿವೆಯೇ ಎಂದು ಸಂಸದ ಗಜಾನನ ಕೀರ್ತಿಕರ್‌ ಕೇಳಿದ ಪ್ರಶ್ನೆಗೆ ಸಚಿವರು ಮೇಲಿನಂತೆ ಉತ್ತರಿಸಿದ್ದಾರೆ.

ಕೇಂದ್ರ ಸರ್ಕಾರವು ಪ್ರಧಾನ್‌ ಮಂತ್ರಿ ಗರೀಬ್‌ ಕಲ್ಯಾಣ್‌ ಅನ್ನ ಯೋಜನಾ ಅಡಿಯಲ್ಲಿ ಜನವರಿಯಿಂದ 80 ಕೋಟಿ ಫಲಾನುಭವಿಗಳಿಗೆ ಉಚಿತ ಧಾನ್ಯ ಒದಗಿಸುತ್ತಿದೆ ಎಂದು ಸಚಿವರು ತಿಳಿಸಿದರು.

ಪಡಿತರ ವ್ಯವಸ್ಥೆಯಲ್ಲಿ ಸಂಪೂರ್ಣ ಕಂಪ್ಯೂಟರೀಕರಣದಿಂದಾಗಿ ದೇಶಾದ್ಯಂತ 80 ಕೋಟಿ ಫಲಾನುಭವಿಗಳಿಗೆ  ಸೌಲಭ್ಯ ದೊರಕುವಂತಾಗಿದೆ ಎಂದು ಅವರು  ಹೇಳಿದರು. 36 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ರೇಷನ್‌ ಕಾರ್ಡ್‌ಗಳ ಪೋರ್ಟೇಬಿಲಿಟಿ ಕೂಡ ಸುಲಭವಾಗಿದೆ ಎಂದು ಅವರು ತಿಳಿಸಿದರು.

ದೇಶದಲ್ಲಿರುವ 19.5 ಕೋಟಿ ರೇಷನ್‌ ಕಾರ್ಡ್‌ಗಳ 100 ಶೇಕಡಾ ಡಿಜಿಟಲೀಕರಣ ನಡೆಸಲಾಗಿದೆ ಎಂದು ಪ್ರತ್ಯೇಕ ಉತ್ತರವೊಂದರಲ್ಲಿ ಸಚಿವರು ಹೇಳಿದರು.

Similar News