ರಾಜ್ಯ ಹಾಲು ಒಕ್ಕೂಟಗಳ ಮೊಸರು ಪ್ಯಾಕೆಟಿನಲ್ಲಿ ಹಿಂದಿ ಪದ ಬಳಕೆ: ವ್ಯಾಪಕ ಆಕ್ರೋಶದ ಬಳಿಕ ಆದೇಶ ವಾಪಸ್

Update: 2023-03-30 12:47 GMT

ಹೊಸದಿಲ್ಲಿ: ಮೊಸರು ಪ್ಯಾಕೆಟುಗಳಲ್ಲಿ ಹಿಂದಿ ಪದ 'ದಹಿ' ಎಂದು ಬಳಸಲು ಕರ್ನಾಟಕ ಮತ್ತು ತಮಿಳುನಾಡು ಹಾಲು ಒಕ್ಕೂಟಗಳಿಗೆ ನೀಡಿದ್ದ ನಿರ್ದೇಶನವನ್ನು  ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ  (FSSAI)  ವಾಪಸ್ ಪಡೆದಿದೆ.

ಮೊಸರು ಪ್ಯಾಕೆಟುಗಳಲ್ಲಿ ದಹಿ ಎಂದು ಹಿಂದಿ ಪದವನ್ನು ಕಡ್ಡಾಯವಾಗಿ ಹಾಕಬೇಕೆಂಬ FSSAI ಆದೇಶಕ್ಕೆ ಕರ್ನಾಟಕ ಹಾಗೂ ತಮಿಳುನಾಡಿನಿಂದ ತೀವ್ರ ಆಕ್ರೋಶ ವ್ಯಕ್ತವಾದ ಬಳಿಕ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ  FSSAI , “ಮೊಸರಿನ ಪ್ಯಾಕೆಟುಗಳಲ್ಲಿ ಮೊಸರು, ತಯಿರ್, ಪೆರುಗು ಇತ್ಯಾದಿ ಪ್ರಾದೇಶಿಕ ಪದಗಳನ್ನು ಬಳಸಬಹುದೆಂದು” ತಿಳಿಸಿದೆ.

ಈ ಹಿಂದೆಯೇ ತಮಿಳುನಾಡು ಮತ್ತು ಕರ್ನಾಟಕದ ಹಾಲು ಉತ್ಪಾದಕರ ಸಂಘಗಳು ಪ್ರಾಧಿಕಾರಕ್ಕೆ ಪತ್ರ ಬರೆದು ಮೊಸರಿನ ಪ್ಯಾಕೆಟುಗಳಲ್ಲಿ ಪ್ರಾದೇಶಿಕ ಹೆಸರುಗಳನ್ನು ಮುಂದುವರಿಸಲು ಕೋರಿತ್ತು.

ಫುಡ್‌ ಸೇಫ್ಟಿ ಅಂಡ್ ಸ್ಟ್ಯಾಂಡರ್ಡ್ ಅಥಾರಿಟಿ ಆಫ್ ಇಂಡಿಯಾ ವಿರುದ್ಧ ತಮಿಳು ನಾಡು ಸಿಎಂ ಎಂ.ಕೆ ಸ್ಟಾಲಿನ್, ಕರ್ನಾಟಕ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಕಿಡಿಕಾರಿದ್ದರು.

ಹಿಂದಿ ಹೇರಿಕೆಗೆ ಕನ್ನಡಿಗರ ವಿರೋಧವಿದೆ ಎಂದು ಗೊತ್ತಿದ್ದರೂ ನಂದಿನಿ ಮೊಸರು ಪಾಕೆಟ್ ಮೇಲೆ ಹಿಂದಿಯ ‘ದಹಿ’ ಎಂದು ಮುದ್ರಿಸಿರುವುದು, ಅದನ್ನು ಕಡ್ಡಾಯವಾಗಿ ಮುದ್ರಿಸುವಂತೆ ಭಾರತೀಯ ಆಹಾರ ಸುರಕ್ಷತೆ, ಗುಣಮಟ್ಟ ಪ್ರಾಧಿಕಾರವು ಕೆಎಂಎಫ್ ಗೆ ಆದೇಶ ನೀಡಿರುವುದು ತಪ್ಪು. ಇದನ್ನು ಒಪ್ಪಲು ಸಾಧ್ಯವಿಲ್ಲ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ತಿಳಿಸಿದ್ದಾರೆ.

“ನಮ್ಮದೇ ರಾಜ್ಯಗಳಲ್ಲಿ ತಮಿಳು ಮತ್ತು ಕನ್ನಡವನ್ನು ಹಿಮ್ಮೆಟ್ಟಿಸುವ, ಮೊಸರು ಪ್ಯಾಕೆಟಿನಲ್ಲಿ ಹಿಂದಿಯಲ್ಲಿ ಬರೆಯುವಂತೆ ನಿರ್ದೇಶಿಸುವ ಮಟ್ಟಕ್ಕೆ ಲಜ್ಜೆರಹಿತವಾಗಿ ಹಿಂದಿ ಹೇರಿಕೆ ಬಂದು ತಲುಪಿದೆ. ನಮ್ಮ ಮಾತೃಭಾಷೆಯನ್ನು ನಿರ್ಲಕ್ಷಿಸುವವರನ್ನು ದಕ್ಷಿಣದಿಂದ ಶಾಶ್ವತವಾಗಿ ಬಹಿಷ್ಕರಿಸುವುದನ್ನು ಇಂತಹ ಕೃತ್ಯಗಳು ಮಾಡಲಿದೆ” ಎಂದು ತಮಿಳುನಾಡು ಸಿಎಂ ಎಂಕೆ ಸ್ಟ್ಯಾಲಿನ್ ಟ್ವೀಟ್ ಮಾಡಿದ್ದರು.

ಸ್ಟಾಲಿನ್‌ ಅವರ ಅಭಿಪ್ರಾಯವನ್ನೇ ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಕೂಡ ವ್ಯಕ್ತಪಡಿಸಿದ್ದರು ಹಾಗೂ ಇದು ಪ್ರಾದೇಶಿಕ ಭಾಷೆಯನ್ನು ಉತ್ತೇಜಿಸುವ ಪ್ರಧಾನಿಯ ನೀತಿಗೆ ಪೂರಕವಾಗಿಲ್ಲ  ಎಂದು ಹೇಳಿದ್ದರು.

ಇದನ್ನೂ ಓದಿ: ದೇವಸ್ಥಾನದ ಮೆಟ್ಟಿಲುಬಾವಿ ಕುಸಿತ; 13 ಮಂದಿ ಮೃತ್ಯು

Similar News