ಪರಿಶಿಷ್ಟ ಕುಟುಂಬಕ್ಕೆ ಚಿತ್ರಮಂದಿರ ಪ್ರವೇಶ ನಿರಾಕರಣೆ: ಆರೋಪ

Update: 2023-03-30 13:52 GMT

ಚೆನ್ನೈ: ಪರಿಶಿಷ್ಟ ವರ್ಗಕ್ಕೆ ಸೇರಿದ ಕುಟುಂಬವೊಂದಕ್ಕೆ ಟಿಕೆಟ್‌ ಹೊಂದಿದ್ದರೂ ಚಿತ್ರಮಂದಿರಕ್ಕೆ ಪ್ರವೇಶ ನಿರಾಕರಿಸಲಾಗಿದೆ ಎಂಬ ಆರೋಪ ಕೇಳಿ ಬಂದಿದ್ದು ಈ ವಿಚಾರವೀಗ ವಿವಾದಕ್ಕೀಡಾಗಿದೆ.

ಈ ಕುಟುಂಬ ನಾರಿಕುರವರ್‌ ಸಮುದಾಯಕ್ಕೆ ಸೇರಿದೆಯೆಂಬ ಕಾರಣಕ್ಕೆ ಪ್ರವೇಶ ನಿರಾಕರಿಸಲಾಯಿತೇ ಎಂಬ ಕುರಿತು ಹಲವು ಸಾಮಾಜಿಕ ಜಾಲತಾಣಿಗರು ಪ್ರಶ್ನಿಸಿದ್ದರು. ಸೆನ್ಸಾರ್‌ ನಿಯಮಗಳಾನುಸಾರ ಈ ಕ್ರಮ ಕೈಗೊಳ್ಳಳಾಯಿತು ಎಂದು ಆರಂಭದಲ್ಲಿ ಹೇಳಿದ್ದ ಚಿತ್ರಮಂದಿರ ಆಡಳಿತ ನಂತರ ಕುಟುಂಬಕ್ಕೆ ಸಿಲ್ಮಬರಸನ್‌ ಟಿ ಆರ್‌ ನಟನೆಯ ತಮಿಳು ಚಿತ್ರ ʻಪತ್ತು ತಲʼ ವೀಕ್ಷಿಸಲು ಅನುಮತಿಸಿದೆ.

ಕುಟುಂಬಕ್ಕೆ ಚಿತ್ರಮಂದಿರಕ್ಕೆ ಪ್ರವೇಶ ನಿರಾಕರಿಸಿ ಅಲ್ಲಿನ ಸಿಬ್ಬಂದಿ ಹೊರಗಟ್ಟುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದ್ದು ಎಲ್ಲೆಡೆ ಆಕ್ರೋಶಕ್ಕೆ ಕಾರಣವಾಗಿದೆ. ಅವರನ್ನು ಒಳ ಹೋಗಲು ಅನುಮತಿಸಿ ಎಂದು ಕೆಲವರು ಹೇಳುತ್ತಿರುವುದೂ ಕೇಳಿಸುತ್ತದೆ.

ಈ ಕುರಿತು ಸ್ಪಷ್ಟೀಕರಣ ನೀಡಿದ ರೋಹಿಣಿ ಸಿಲ್ವರ್‌ ಸ್ಕ್ರೀನ್ಸ್‌ ಥಿಯೇಟರ್, ಈ ಘಟನೆ ಪರಾಮರ್ಶಿಸಲಾಗುತ್ತಿದೆ. "ಈ ಚಿತ್ರಕ್ಕೆ ಸೆನ್ಸಾರ್‌ ಮಂಡಳಿ ಯು/ಎ ಪ್ರಮಾಣಪತ್ರ ನೀಡಿದೆ. ಕಾನೂನಿನ ಅನುಸಾರ 12 ವರ್ಷ ಕೆಳಗಿನ ಮಕ್ಕಳಿಗೆ ಈ ಚಿತ್ರ ವೀಕ್ಷಿಸಲು ಅನುಮತಿಸಲು ಸಾಧ್ಯವಿಲ್ಲ," ಎಂದು ಹೇಳಿದೆ.

"ಈ ನಿರ್ದಿಷ್ಟ ಕುಟುಂಬ ತನ್ನ 2, 6, 8 ಹಾಗೂ 10 ವರ್ಷದ ಮಕ್ಕಳೊಂಧಿಗೆ ಆಗಮಿಸಿತ್ತು. ಆದರೆ ಅಲ್ಲಿದ್ದ ಜನರು ಆಕ್ರೋಶ ವ್ಯಕ್ತಪಡಿಸಿ ಇದಕ್ಕೆ ಬೇರೆಯೇ ಅರ್ಥ ಕಲ್ಪಿಸಿದ್ದರಿಂದ ಸಮಸ್ಯೆ ತಪ್ಪಿಸಲು ಇಡೀ ಕುಟುಂಬಕ್ಕೆ ಚಿತ್ರ ವೀಕ್ಷಿಸಲು ಅನುಮತಿಸಲಾಯಿತು," ಎಂದು ಚಿತ್ರಮಂದಿರದ ಆಡಳಿತ ಹೇಳಿದೆ.

ಕುಟುಂಬ ಚಲನಚಿತ್ರವನ್ನು ಆನಂದದಿಂದ ವೀಕ್ಷಿಸುವ ವೀಡಿಯೋವನ್ನೂ ಚಿತ್ರಮಂದಿರದ ಆಡಳಿತ ನಂತರ ಬಿಡುಗಡೆಗೊಳಿಸಿದೆ.

Similar News